ಇಂದು ರಾಜ್ಯಕ್ಕಾಗಮಿಸುತ್ತಿದ್ದಾರೆ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.1-ರಾಜ್ಯ ಬಿಜೆಪಿಯಲ್ಲಿ ಉಂಟಾಗಿರುವ ನಾಯಕತ್ವ ಬದಲಾವಣೆ ವದಂತಿ, ಶಾಸಕರ ಅಸಮಾಧಾನ, ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಹೀಗೆ ಹತ್ತು ಹಲವು ಗೊಂದಲಗಳ ನಡುವೆಯೇ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಇಂದು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ.  ಶಿವಮೊಗ್ಗದಲ್ಲಿ ನಡೆಯಲಿರುವ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲು ಆಗಮಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದರೂ ಬಿಜೆಪಿಯಲ್ಲಿ ಉಂಟಾಗಿರುವ ಗೊಂದಲಗಳನ್ನು ಹೇಗೆ ನಿವಾರಿಸುತ್ತಾರೆ ಎಂಬುದುಯಕ್ಷ ಪ್ರಶ್ನೆಯಾಗಿದೆ.

ಇಂದು ಸಂಜೆ ದೆಹಲಿಯಿಂದ ಆಗಮಿಸಲಿರುವ ಅರುಣ್ ಸಿಂಗ್ ಶಾಸಕರು, ಸಂಸದರು ಹಾಗೂ ಪದಾಧಿಕಾರಿಗಳನ್ನು ಭೇಟಿಯಾಗಿ ಪ್ರತ್ಯೇಕವಾಗಿ ಮಾತುಕತೆ ನಡೆಸಲಿದ್ದಾರೆ. ಮೇಲ್ನೋಟಕ್ಕೆ ಇದು ಒಂದು ಮುಂದುವರೆದ ಪ್ರವಾಸ ಎಂದು ಹೇಳಲಾಗುತ್ತಿದ್ದರೂ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಯಕತ್ವದ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಎತ್ತಿರುವ ಅಪಸ್ವರ, ಶಾಸಕ ಅಸಮಾಧಾನ ನಿವಾರಣೆಗೆ ಪ್ರತ್ಯೇಕ ಸಭೆ ಕರೆದಿರುವುದು, ಸಂಪುಟ ವಿಸ್ತರಣೆ ವಿಳಂಬ, ನಿಗಮ ಮಂಡಳಿಯಲ್ಲಿ ಪಕ್ಷದ ನಿಷ್ಠಾವಂತರ ಕಡೆಗಣನೆ ಹೀಗೆ ಗೊಂದಲದ ಗೂಡಾಗಿರುವುದರಿಂದ ಅರುಣ್ ಸಿಂಗ್ ಇವೆಲ್ಲವನ್ನೂ ಚರ್ಚೆಗೆ ತೆಗೆದುಕೊಳ್ಳಲಿದ್ದಾರೆ.

ನಾಳೆ ಶಿವಮೊಗ್ಗದ ಪಿಇಎಸ್ ಕಾಲೇಜಿನ ಆವರಣದಲ್ಲಿ ಪಕ್ಷದ ಕಾರ್ಯಕಾರಿಣಿ ಸಭೆ ನಡೆಯಲಿದ್ದು, 3ರಂದು ಕೋರ್‍ಕಮಿಟಿ ಸಭೆ ಜರುಗಲಿದೆ. ಸಭೆಯಲ್ಲಿ ಪ್ರಮುಖವಾಗಿ ಗೋಹತ್ಯೆ ನಿಷೇಧ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿಯನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕಿರುವ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ.

ಇದರ ಜೊತೆಗೆ ಮಸ್ಕಿ, ಬಸವಕಲ್ಯಾಣ ಮತ್ತು ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಅಭಿಪ್ರಾಯ ಸಂಗ್ರಹಿಸಲಿದ್ದಾರೆ.  ಈ ನಡುವೆ ಅರುಣ್ ಸಿಂಗ್ ಅವರು ಶಾಸಕರು ಮತ್ತು ಪದಾಧಿಕಾರಿಗಳ ಪ್ರತ್ಯೇಕ ಸಭೆ ನಡೆಸುತ್ತಿರುವುದು ಸಹ ಕುತೂಹಲಕ್ಕೆ ಕಾರಣವಾಗಿದೆ.

ಕಾರ್ಯಕಾರಿಣಿ ಸಭೆ ಮುಗಿದ ನಂತರ ಯಡಿಯೂರಪ್ಪನವರು ವಿಭಾಗವಾರು ಶಾಸಕರ ಸಭೆ ಕರೆದು ಅವರ ಕುಂದುಕೊರತೆಗಳನ್ನು ಆಲಿಸಲಿದ್ದಾರೆ. ಹೀಗೆ ಬಿಜೆಪಿಯಲ್ಲಿ ಎದ್ದಿರುವ ಹಲವಾರು ಸಮಸ್ಯೆಗಳು, ಗೊಂದಲಗಳ ನಡುವೆ ಅರುಣ್ ಸಿಂಗ್ ಆಗಮನ ಭಾರೀ ಕುತೂಹಲಕ್ಕೆ ಕಾರಣವಾಗಿದೆ.

Facebook Comments