ನಾಯಕತ್ವ ಬದಲಾವಣೆ ಗೊಂದಲಗಳಿಗೆ ತೆರೆ ಎಳೆದ ಅರುಣ್ ಸಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ : ಸದ್ಯದ ಪರಿಸ್ಥಿತಿಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಾಯಕತ್ವವನ್ನು ಬದಲಾವಣೆ ಮಾಡುವ ಪ್ರಸ್ತಾವನೆ ವರಿಷ್ಠರ ಮುಂದೆ ಇಲ್ಲ ಎನ್ನುವ ಮೂಲಕ ಉಂಟಾಗಿರುವ ಗೊಂದಲಗಳಿಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ತೆರೆಎಳೆದಿದ್ದಾರೆ.

ಇದೇ ವೇಳೆ ನಾಯಕತ್ವದ ಬಗ್ಗೆ ಯಾರೊಬ್ಬರೂ ಹಾದಿ- ಬೀದಿಯಲ್ಲಿ ಬಾಯಿಗೆ ಬಂದಂತೆ ಮಾತನಾಡಬಾರದು ಎಂಬ ಎಚ್ಚರಿಕೆಯ ಸಂದೇಶವನ್ನೂ ಸಹಾ ರವಾನಿಸಿದ್ದಾರೆ.ಇದರಿಂದಾಗಿ ಯಡಿಯೂರಪ್ಪನವರ ಕುರ್ಚಿ ಇನ್ನಷ್ಟು ಗಟ್ಟಿಯಾಗಿದ್ದು, ಸದ್ಯದಲ್ಲೇ ನಾಯಕತ್ವ ಬದಲಾಗಲಿದೆ ಎಂದು ಮನಸ್ಸಿನಲ್ಲೇ ಮಂಡಕ್ಕಿ ಮಿಯುತ್ತಿದ್ದವರಿಗೆ ಮತ್ತೊಮ್ಮೆ ಭಾರೀ ನಿರಾಶೆಯಾಗಿದೆ.

ನನಗೆ ಹೈಕಮಾಂಡ್ ನಾಯಕರು ಸೂಚಿಸಿದ ತಕ್ಷಣವೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವೆ ಎಂದು ಯಡಿಯೂರಪ್ಪ ಹೇಳಿದ್ದು ಆಡಳಿತಾರೂಢ ಬಿಜೆಪಿಯಲ್ಲಿ ಅಲ್ಲೋಲಕಲ್ಲೋಲವನ್ನೇ ಸೃಷ್ಟಿಸಿತ್ತು.ಕೆಲವೇ ದಿನಗಳಲ್ಲಿ ಯಡಿಯೂರಪ್ಪ ನಾಯಕತ್ವ ಬದಲಾಗಲಿದ್ದು, ರಾಜ್ಯಕ್ಕೆ ಹೊಸ ಮುಖ್ಯಮಂತ್ರಿ ಬೇರೊಬ್ಬರು ಆಯ್ಕೆಯಾಗಲಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು.

ನವದೆಹಲಿಯಲ್ಲಿ ಈ ಎಲ್ಲಾ ಅಂತೆಕಂತೆಗಳಿಗೆ ತೆರೆಎಳೆದ ಅರುಣ್ ಸಿಂಗ್ ಅವರು, ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಕೇವಲ ಉಹಾಪೋಹ ಎಂದು ಸ್ಪಷ್ಟಪಡಿಸಿದರು.ಕೇವಲ ಯಡಿಯೂರಪ್ಪ ಮಾತ್ರವಲ್ಲದೆ, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲು ಅವರನ್ನು ಸಹಾ ಬದಲಾವಣೆ ಮಾಡುವುದಿಲ್ಲ ಎಂದು ಹೇಳಿದರು.

ನಮ್ಮ ಪಕ್ಷದ ವರಿಷ್ಟರು ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಲಿದ್ದಾರೆ ಎಂಬುದು ಕೇವಲ ಮಾಧ್ಯಮಗಳಲ್ಲಿ ಮಾತ್ರ ಚರ್ಚೆಯಾಗುತ್ತದೆ. ಈ ಬಗ್ಗೆ ಪಕ್ಷದ ವೇದಿಕೆಯಲ್ಲಿ ಮಾತುಕತೆಯೇ ನಡೆದಿಲ್ಲ ಎಂದು ಗೊಂದಲಗಳಿಗೆ ತೆರೆಎಳೆದರು.

ಕೋವಿಡ್ ನಂತಹ ಕಷ್ಟ ಕಾಲದಲ್ಲೂ ಸಿ.ಎಂ ಯಡಿಯೂರಪ್ಪ ಅವರು ರಾಜ್ಯದಲ್ಲಿ ಉತ್ತಮವಾದ ಕೆಲಸ ಮಾಡುತ್ತಿದ್ದಾರೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರ ಮುನ್ನಡೆಸುತ್ತಿರುವಾಗ ನಾಯಕತ್ವ ಬದಲಾವಣೆ ಏಕೆ ಮಾಡಬೇಕೆಂದು ಅರುಣ್ ಸಿಂಗ್ ಪ್ರಶ್ನೆ ಮಾಡಿದರು.

# ಬಾಯಿಗೆ ಬೀಗ ಹಾಕಿ
ಇದೇ ಸಂದರ್ಭದಲ್ಲಿ ಅರುಣ್ ಸಿಂಗ್ ಅವರು ನಾಯಕತ್ವದ ಬಗ್ಗೆ ಪದೇ ಪದೇ ಹೇಳಿಕೆ ನೀಡುತ್ತಿರುವವರಿಗೂ ಬಿಸಿ ಮುಟ್ಟಿಸಿದ್ದಾರೆ.ನಾಯಕತ್ವದ ಕುರಿತಾಗಿ ಯಾರೊಬ್ಬರೂ ಮಾತನಾಡಬೇಕಾದ ಅಗತ್ಯವಿಲ್ಲ. ಏನೇ ಗೊಂದಲಗಳಿದ್ದರೂ ಪಕ್ಷದ ವೇದಿಕೆಯಲ್ಲಿ ಮಾತನಾಡಬೇಕು ಎಂದು ಸೂಚಿಸಿದರು.

ಒಂದಿಬ್ಬರು ಮಾತನಾಡುತ್ತಿದ್ದಾರೆ.ಅವರಿಗೆ ಈ ರೀತಿ ಮಾತನಾಡಲು ಯಾರು ಅಧಿಕಾರ ಕೊಟ್ಟಿದ್ದಾರೋ ಗೊತ್ತಿಲ್ಲ. ಬಹಿರಂಗವಾದ ಮಾತನಾಡದಂತೆ ಸೂಚನೆ ನೀಡಲಾಗುವುದು ಎಂದರು.ನಿಮ್ಮ ಅಭಿಪ್ರಾಯವನ್ನು ಪಕ್ಷದ ವೇದಿಕೆಯಲ್ಲಿ ಹಂಚಿಕೊಳ್ಳಿ. ಬೀದಿಯಲ್ಲಿ ಮಾತನಾಡುವುದರಿಂದ ಯಾವ ಸಮಸ್ಯೆಗಳು ಬಗೆಹರಿಯುವುದಿಲ್ಲ ಎಂದು ಪರೋಕ್ಷವಾಗಿ ಸಚಿವ ಸಿ.ಪಿ.ಯೋಗೀಶ್ವರ್ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಬಿಸಿಮುಟ್ಟಿಸಿದರು.

ಇನ್ನು ಮುಂದೆ ಯಾರೊಬ್ಬರೂ ಕೂಡ ಬಹಿರಂಗವಾಗಿ ಪಕ್ಷದ ಆಂತರಿಕ ವಿಚಾರಗಳನ್ನು ಮಾತನಾಡಬಾರದು. ಈ ಬಗ್ಗೆ ರಾಜ್ಯದ ಅಧ್ಯಕ್ಷರಿಂದ ಸೂಚನೆ ಕೊಡಲಾಗುವುದು ಎಂದು ತಿಳಿಸಿದರು. ಜೂನ್ 17 ಅಥವಾ18ರಿಂದ 3 ರಾಜ್ಯ ಪ್ರವಾಸ ಮಾಡುತ್ತೇನೆ.

ಎಲ್ಲ ನಾಯಕರ ಅಭಿಪ್ರಾಯ ಸಂಗ್ರಹಿಸಲಾಗುವುದು.ಪಕ್ಷದಲ್ಲಿ ಸಣ್ಣಪುಟ್ಟ ಗೊಂದಲಗಳಿದ್ದರೆ ಚರ್ಚೆಸಿ ಇತ್ಯಾರ್ಥ ಮಾಡಿಕೊಳ್ಳಲಾಗುವುದು ಎಂದು ಅರುಣ್ ಸಿಂಗ್ ಹೇಳಿದರು. ಕಳೆದ ಭಾನುವಾರ ಯಡಿಯೂರಪ್ಪ ಅವರು ನೀಡಿದ್ದ ಆ ಒಂದು ಹೇಳಿಕೆ ಬಿಜೆಪಿಯಲ್ಲಿ ಭಾರೀ ಆವಾಂತರ ಸೃಷ್ಟಿಸಿತ್ತು.

ಎಲ್ಲಿಯವರೆಗೆ ಪಕ್ಷದ ವರಿಷ್ಟರು ಅಧಿಕಾರದಲ್ಲಿ ಮುಂದುವರೆಯಿರಿ ಎಂದು ಹೇಳುತ್ತಾರೋ ಅಲ್ಲಿಯವರೆಗೆ ಇರುತ್ತೇನೆ. ಒಂದು ವೇಳೆ ರಾಜೀನಾಮೆ ನೀಡುವಂತೆ ಸೂಚಿಸಿದರೆ ಪದತ್ಯಾಗ ಮಾಡಲು ಸಿದ್ದ ಎಂದು ಹೇಳಿದ್ದು, ಕಮಲ ಪಾಳಯದಲ್ಲಿ ಮಿಂಚಿನ ಸಂಚಲನವನ್ನು ಸೃಷ್ಟಿಸಿತ್ತು.

ಸಚಿವ ಯೋಗೀಶ್ವರ್ ,ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ , ಅರವಿಂದ್ ಬೆಲ್ಲದ್ ಸೇರಿದಂತೆ ಕೆಲವು ಶಾಸಕರು ದೆಹಲಿಗೆ ತೆರಳಿ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮಾಡುವಂತೆ ತೆರೆಮರೆಯಲ್ಲಿ ಲಾಭಿ ನಡೆಸಿದ್ದರು.

ಇದಕ್ಕೆ ಪ್ರತಿಯಾಗಿ ಯಡಿಯೂರಪ್ಪ ಬಣದ ಶಾಸಕರು ತಮ್ಮ ನಾಯಕನ ಬೆಂಬಲಕ್ಕೀರುವ ಶಾಸಕರ ಸಹಿ ಸಂಗ್ರಹಣೆಗೆ ಮುಂದಾಗಿದ್ದರು. ಕೊನೆಗೆ ವರಿಷ್ಟರು ಮಧ್ಯಪ್ರವೇಶ ಮಾಡಿ ಶಾಸಕರ ಸಹಿ ಸಂಗ್ರಹಣೆ ಸೇರಿದಂತೆ ಯಾವುದೇ ಚಟುವಟಿಕೆ ನಡೆಸಬಾರದು ಎಂದು ಕಟ್ಟಪ್ಪಣೆ ವಿಧಿಸಿದ್ದರು. ಇದೀಗ ಅರುಣ್ ಸಿಂಗ್ ಎಲ್ಲಾ ವದಂತಿಗಳಿಗೂ ಪೂರ್ಣವಿರಾಮ ಹಾಕಿದ್ದಾರೆ.

Facebook Comments

Sri Raghav

Admin