ಡ್ರ್ಯಾಗನ್ ಕುತಂತ್ರ ಬಯಲು : ಅರುಣಾಚಲ ಪ್ರದೇಶ ಗಡಿಯಲ್ಲಿ ಚೀನಾ ಸೇನಾ ನೆಲೆ ಬಲವರ್ಧನೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜು.2- ಪೂರ್ವ ಲಡಾಖ್‍ನಲ್ಲಿ ಭಾರತದ ಮೂಲಸೌಕರ್ಯ ಅಭಿವೃದ್ಧಿ ಮತ್ತು ಭಾರೀ ಸೇನಾ ಜಮಾವಣೆಯಿಂದ ಬೆಚ್ಚಿಬಿದ್ದಿರುವ ಚೀನಾ ಈಗ ತನ್ನ ಚಟುವಟಿಕೆಯಲ್ಲಿ ಈಶಾನ್ಯ ರಾಜ್ಯ ಅರುಣಾಚಲ ಪ್ರದೇಶದಲ್ಲಿ ಬಲಗೊಳಿಸುತ್ತಿರುವ ಆತಂಕಕಾರಿ ಸಂಗತಿ ಬಯಲಾಗಿದೆ.

ಅರುಣಾಚಲ ಪ್ರದೇಶದ ಇಂಡೋ-ಚೀನಾ ಗಡಿ ಪ್ರದೇಶದಲ್ಲಿ ಕಮ್ಯೂನಿಸ್ಟ್ ರಾಷ್ಟ್ರವು ತನ್ನ ಮಹತ್ವದ ಯೋಜನೆಗಳನ್ನು ತೀವ್ರಗೊಳಿಸಿದೆ. ಇದೇ ದೇಶದ ಗಮನ ಲಡಾಖ್‍ನತ್ತ ಹರಿದಿರುವ ಸಂದರ್ಭದಲ್ಲೇ ಚೀನಾ ಸದ್ದಿಲ್ಲದೇ ಅರುಣಾಚಲ ಪ್ರದೇಶದಲ್ಲಿ ತನ್ನ ಸೇನಾ ನೆಲೆಗಳನ್ನು ದೊಡ್ಡ ಮಟ್ಟದಲ್ಲಿ ಬಲಗೊಳಿಸುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.

ಗೂಗಲ್ ಅರ್ಥ್‍ನ ಮುಕ್ತ-ಮೂಲ ಉಪಗ್ರಹ ಚಿತ್ರಗಳು ಹಾಗೂ ಇತರ ವೇದಿಕೆಗಳಿಂದ ಲಭಿಸಿರುವ ಮಾಹಿತಿಯಿಂದ ಚೀನಾದ ಮತ್ತೊಂದು ಕುತಂತ್ರ ಬಹಿರಂಗಗೊಂಡಿದೆ.

ಅರುಣಾಚಲ ಪ್ರದೇಶ ಗಡಿ ಸಮೀಪದ ಟಿಬೆಟ್ ಪ್ರಾಂತ್ಯದ ಸೇನಾ ಪಟ್ಟಣ ನಿಯಿಂಗ್‍ಚೀ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚೀನಾ ಭಾರತದ ಕಣ್ಣುತಪ್ಪಿಸಿ ತನ್ನ ಮೂಲ ಸೌಕರ್ಯಾಭಿವೃದ್ಧಿ ಕಾರ್ಯಗಳನ್ನು ವಿಸ್ತರಿಸಿ ಬಲವರ್ಧನೆಗೊಳಿಸುತ್ತಿದೆ. ಈಗಾಗಲೇ ಈ ಪ್ರದೇಶದಲ್ಲಿ ಎರಡು ಬೃಹತ್ ಸಂಯೋಜಿತ ಮಿಲಿಟರಿ ಬ್ರಿಗೇಡ್‍ಗಳು ಜಮಾವಣೆಗೊಂಡಿವೆ.

ಮೊದಲಿನಿಂದಲೂ ಅರುಣಾಚಲ ಪ್ರದೇಶದ ಮೇಲೆ ವಕ್ರದೃಷ್ಟಿ ಬೀರುತ್ತಲೇ ಇರುವ ಚೀನಾ, ಭಾರತವು ಪೂರ್ವ ಲಡಾಖ್ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸಿ ಅಲ್ಲಿ ಹೆಚ್ಚಿನ ಸಂಖ್ಯೆಯ ಸೇನಾ ಜಮಾವಣೆ ಮಾಡಿದ ಸಂದರ್ಭದಲ್ಲೇ ಈ ಬೆಳವಣಿಗೆ ಕಂಡುಬಂದಿದೆ.

ಸುಮಾರು ಎರಡು ತಿಂಗಳ ಲಡಾಖ್ ಬಿಕ್ಕಟ್ಟಿನ ದುರ್ಲಾಭ ಪಡೆದಿರುವ ಚೀನಾ ಅರುಣಾಚಲ ಪ್ರದೇಶ ಗಡಿಯಲ್ಲಿರುವ ನಿಯಾಂಗ್‍ಚೀ ಪ್ರದೇಶದಲ್ಲಿ ಸದ್ದಿಲ್ಲದೆ ತನ್ನ ಬಲವನ್ನು ವೃದ್ಧಿಸುತ್ತಿರುವುದು ಭಾರತಕ್ಕೆ ಆತಂಕಕಾರಿಯಾಗಿದೆ.

ಟಿಬೆಟ್ ರಾಜಧಾನಿ ಲಾಸಾ ಮತ್ತು ಇತರ ನಗರಗಳೊಂದಿಗೆ ನಿಯಾಂಗ್‍ಚೀ ಪಟ್ಟಣ ಉತ್ತಮ ಸಂಪರ್ಕ ಸಾಧಿಸಲು ಏರ್ಪೋರ್ಟ್ಗಳು, ಹೆಲಿಪ್ಯಾಡ್‍ಗಳು ಮತ್ತು ರೈಲು ಮಾರ್ಗಗಳನ್ನು ಅಭಿವೃದ್ದಿಗೊಳಿಸಿರುವುದಲ್ಲೇ ಹೊಸ ಹೈ-ಸ್ಪೀಡ್ ರಸ್ತೆಯನ್ನೂ ಸಹ ನಿರ್ಮಿಸಿದೆ.

ಜತೆಗೆ ನಿಯಾಂಗ್‍ಚೀ ಪ್ರದೇಶದಲ್ಲಿ ವಾಸ್ತವ್ಯ ಹೂಡಿರುವ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‍ಎ) ಸೇನಾಪಡೆಗೆ ರೇಡಾರ್ ಸೌಲಭ್ಯ ಮತ್ತು ಆಡಳಿತಾತ್ಮಕ ಸುಧಾರಣೆಗಳನ್ನು ಸಹ ವಿಸ್ತರಿಸಿದೆ.

ಸಿಕ್ಕಿಂ, ಪೂರ್ವ ಲಡಾಖ್‍ಗಳಲ್ಲಿ ತನ್ನ ಸೇನಾ ನೆಲೆಗಳನ್ನು ಬಲಗೊಳಿಸುವ ಉದ್ದೇಶದಿಂದ ಈಗಾಗಲೇ ಭಾರತಕ್ಕೆ ತಲೆನೋವು ತಂದಿರುವ ಚೀನಾ ಈಗ ಅರುಣಾಚಲ ಪ್ರದೇಶದಲ್ಲೂ ಕ್ಯಾತೆ ತೆಗೆಯುತ್ತಿದೆ.

Facebook Comments