ಎಲ್-ಜಿ ಕಚೇರಿಯಲ್ಲೇ ಸಿಎಂ ಕೇಜ್ರಿವಾಲ್, ಸಚಿವರ ಅಹೋರಾತ್ರಿ ಧರಣಿ

ಈ ಸುದ್ದಿಯನ್ನು ಶೇರ್ ಮಾಡಿ

l-g-kejriwal
ನವದೆಹಲಿ, ಜೂ.12- ಮುಷ್ಕರ ನಿಲ್ಲಿಸಲು ಐಎಎಸ್ ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂಬದೂ ಸೇರಿದಂತೆ ಇತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಿನ್ನೆ ಸಂಜೆ ಲೆಫ್ಟಿನೆಂಟ್ ಗೌರ್ನರ್ ಕಚೇರಿಗೆ ತೆರಳಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಸಂಪುಟ ಸಹೋದ್ಯೋಗಿಗಳು ರಾತ್ರಿ ಇಡೀ ಧರಣಿ ನಡೆಸಿದ ಅಪರೂಪದ ಪ್ರಸಂಗ ನಡೆದಿದೆ. ಕೇಜ್ರಿವಾಲ್, ಉಪ ಮುಖ್ಯಮಂತ್ರಿ ಮನಿಷ್ ಸಿಸೋಡಿಯಾ ಹಾಗೂ ಇಬ್ಬರು ಸಚಿವರಾದ ಗೋಪಾಲ್ ರಾಯ್ ಮತ್ತು ಸತ್ಯೇಂದ್ರ ಜೈನ್ ನಿನ್ನೆ ಸಂಜೆ 5.30ಕ್ಕೆ ಲೆಫ್ಟಿನೆಂಟ್ ಗೌರ್ನರ್ ಅನಿಲ್ ಬೈಜಲ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ನಂತರ ಸಾಯಂಕಾಲದಿಂದ ಬೆಳಗ್ಗೆವರೆಗೆ ಲೆ.ಗೌ. ಕಾರ್ಯಾಲಯದಲ್ಲೇ ಧರಣಿ ಕುಳಿತರು. ಬೆಳಗ್ಗೆಯೂ ಸಹ ಅವರು ಪ್ರತಿಭಟನೆ ಮುಂದುವರಿಸಿದ್ದಾರೆ.

ಮುಷ್ಕರ ನಿರತ ಐಎಸ್‍ಎಸ್ ಅಧಿಕಾರಿಗಳು ಹರತಾಳ ನಿಲ್ಲಿಸಬೇಕು ಮತ್ತು ನಾಲ್ಕು ತಿಂಗಳಿನಿಂದ ಕಾರ್ಯ ಸ್ಥಗಿತಗೊಳಿಸಿರುವ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದು ಮುಖ್ಯಮಂತ್ರಿ ಮತ್ತು ಸಂಪುಟ ಸಚಿವರ ಬೇಡಿಕೆಯಾಗಿದೆ.  ಮಧುಮೇಹ ಮತ್ತು ರಕ್ತದೊತ್ತಡದಿಂದ ಬಳಲುತ್ತಿರುವ ಮುಖ್ಯಮಂತ್ರಿ ಧರಣಿ ವೇಳೆ ಇನ್ಸುಲಿನ್ ಹಾಗೂ ತಮ್ಮ ಮನೆಯಿಂದ ಕೊಂಡೊಯ್ದಿದ್ದ ಪಥ್ಯಾಹಾರ ಸೇವಿಸಿದರು ಎಂದು ಮೂಲಗಳು ಹೇಳಿವೆ.

ದೆಹಲಿಯ ಇತಿಹಾಸದಲ್ಲೇ ಮುಖ್ಯಮಂತ್ರಿ ಹಾಗೂ ಸಚಿವರು ಲೆ.ಗೌ.ಕಚೇರಿಯಲ್ಲಿ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಧರಣಿ ನಡೆಸಿದ್ದು ಇದೇ ಮೊದಲು.
ಇಂದು ಬೆಳಗ್ಗೆ 6.27ರಲ್ಲಿ ಲೆಫ್ಟಿನೆಂಟ್ ಗೌರ್ನರ್ ಕಾರ್ಯಾಲಯದಿಂದಲೇ ಟ್ವಿಟ್ ಮಾಡಿದ ಮುಖ್ಯಮಂತ್ರಿ, ದೆಹಲಿಯ ಮಹಾಜನತೆಗೆ ಶುಭೋದಯ, ನಮ್ಮ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.  ಎಎಪಿ ಶಾಸಕರು, ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಲೆ.ಗೌ. ಕಚೇರಿ ಬಳಿ ಜಮಾಯಿಸಿದ್ದಾರೆ. ಆ ಪ್ರದೇಶದಲ್ಲಿ ಬ್ಯಾರಿಕೇಡ್‍ಗಳನ್ನು ನಿರ್ಮಿಸಿ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ.

Facebook Comments

Sri Raghav

Admin