ಶೇ.33ರಷ್ಟು ಅರಣ್ಯ ಅಭಿವೃದ್ಧಿಗೆ ಕ್ರಮ : ಅರವಿಂದ ಲಿಂಬಾವಳಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮಾ.15- ಕರ್ನಾಟಕದಲ್ಲಿ ಇತ್ತೀಚೆಗೆ ಅರಣ್ಯ ಪ್ರದೇಶದ ವಿಸ್ತೀರ್ಣ ಹೆಚ್ಚಾಗುತ್ತಿದೆ. ಶೇ.33ರಷ್ಟು ಭಾಗದಲ್ಲಿ ಅರಣ್ಯ ಅಭಿವೃದ್ಧಿ ಆಗಬೇಕು ಎಂಬ ಗುರಿ ತಲುಪಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಅರಣ್ಯ ಸಚಿವ ಅರವಿಂದ ಲಿಂಬಾವಳಿ ಹೇಳಿದರು. ವಿಧಾನಪರಿಷತ್‍ನಲ್ಲಿ ಸದಸ್ಯರಾದ ಬಸವರಾಜಪಾಟೀಲ್ ಇಟಗಿ ಅವರು ಪ್ರಶ್ನೆ ಕೇಳಿ, ಕಾಡು ಪ್ರಾಣಿಗಳ ಹಾವಳಿ ಕೊಡಗು, ಮಲೆನಾಡು ಭಾಗಕ್ಕೆ ಮಾತ್ರ ಸೀಮಿತವಾಗಿಲ್ಲ.

ದಾವಣಗೆರೆ, ಬಳ್ಳಾರಿ, ಧಾರವಾಡ, ಬೆಳಗಾವಿ, ಕೊಪ್ಪಳ ಜಿಲ್ಲೆಗಳಾದ ಉತ್ತರ ಕರ್ನಾಟಕ ಭಾಗದಲ್ಲೂ ಕಾಡು ಪ್ರಾಣಿಗಳ ಹಾವಳಿ ಇದೆ. ಚಿರತೆ, ಕರಡಿಗಳ ಹಾವಳಿ ಹೆಚ್ಚಾಗಿದೆ. ಅರಣ್ಯ ಸಿಬ್ಬಂದಿಗಳಲ್ಲಿ ಸರಿಯಾದ ಸಲಕರಣೆಗಳಿಲ್ಲ. ಚಿರತೆ ಕಣ್ಣಿಗೆ ಬಿದ್ದ ಬಳಿಕ ಮನೆಗೆ ಹೋಗಿ ಬಂದೂರು ಹರಸುತ್ತಿದ್ದಾರೆ. ಅರಣ್ಯ ಸಿಬ್ಬಂದಿಗಳ ಸೌಲಭ್ಯ ಮತ್ತು ಸಲಕರಣೆಗಳನ್ನು ಹೆಚ್ಚು ಮಾಡಿ ಎಂದು ಸಲಹೆ ನೀಡಿದರು.

ಇದಕ್ಕೆ ಉತ್ತರ ನೀಡಿದ ಸಚಿವರು, ಮನುಷ್ಯರು ಕಾಡಿಗೆ ನುಗ್ಗುತ್ತಿದ್ದಾರೆ. ಕೆಲವು ಜಿಲ್ಲೆಗಳಲ್ಲಿ ಹೋಮ್ ಸ್ಟೇ ಮಾಡಿದ್ದಾರೆ. ಹೀಗಾಗಿ ಕಾಡಿನಲ್ಲಿ ಆಹಾರ, ನೀರು ಸಿಗದೆ ಪ್ರಾಣಿಗಳು ಊರಿಗೆ ಬರುತ್ತಿವೆ. ಬೆಂಗಳೂರಿಗೆ ಚಿರತೆ ಬಂದಿತ್ತು ಎಂದು ಹೇಳಿದರು. ಅರಣ್ಯ ಇಲಾಖೆಯ ಸಿಬ್ಬಂದಿಗಳು ಮತ್ತು ಅಧಿಕಾರಿಗಳಿಗೆ ಅತ್ಯಾಧುನಿಕ ಸಲಕರಣೆಗಳನ್ನು ನೀಡಲು ಆರ್ಥಿಕ ಇಲಾಖೆ ಜತೆ ಚರ್ಚೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಜತೆಗೆ ಅರಣ್ಯದಲ್ಲಿ ವನ್ಯ ಜೀವಿಗಳಿಗೆ ಅಗತ್ಯವಾದ ಆಹಾರ ಮತ್ತು ನೀರು ಪೂರೈಸಲು ಕ್ರಮ ಗೊಳ್ಳಲಾಗುವುದು ಎಂದರಲ್ಲದೆ, ರಾಜ್ಯದಲ್ಲಿ ಶೇ.18.3ರಷ್ಟಿದ್ದ ಅರಣ್ಯ ಪ್ರದೇಶ ಶೇ.22.81ಕ್ಕೆ ಏರಿಕೆಯಾಗಿದೆ. ಅದನ್ನು ಶೇ.33ಕ್ಕೆ ಹೆಚ್ಚಿಸುವ ಗುರಿ ಇದ್ದು, ಈ ನಿಟ್ಟಿನಲ್ಲಿ ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿವೆ ಎಂದು ಸಚಿವರು ಹೇಳಿದರು.

ಸದಸ್ಯರಾದ ಸುನಿಲ್ ಸುಬ್ರಹ್ಮಣಿ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಕೊಡಗಿನಲ್ಲಿ ಜನ ಜೀವನಕ್ಕೆ ತೊಂದರೆಕೊಡುತ್ತಿರುವ ಹುಲಿಯನ್ನು ಹಿಡಿಯಲು ಶಾರ್ಪ್ ಶೂಟರ್‍ಗಳ ಜತೆಗೆ 150ಮಂದಿ ತಂಡ ರವಾನೆ ಮಾಡಲಾಗಿದೆ. ಕಾರ್ಯಾಚರಣೆ ನಡೆಸುತ್ತಿರುವ ತಂಡ ಈವರೆಗೂ ಎರಡು ಹುಲಿಗಳನ್ನು ಹಿಡಿದಿವೆ. ಆದರೆ, ತೊಂದರೆ ಕೊಡುತ್ತಿರುವ ಹುಲಿ ತಪ್ಪಿಸಿಕೊಳ್ಳುತ್ತಿದೆ. ತಂಡದಲ್ಲಿದ್ದ ಅಧಿಕಾರಿಯೊಬ್ಬರು ವೈಯಕ್ತಿ ಕಾರಣದಿಂದ ರಜೆ ಮೇಲೆ ಹೋಗಿದ್ದಾರೆ. ಬೇರೆಯವರನ್ನು ನಿಯೋಜಿಸಲಾಗಿದೆ. ಕಾರ್ಯಾಚರಣೆಯನ್ನು ನಿಲ್ಲಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ಹುಲಿ ಹಿಡಿಯಲು ಸ್ಥಳೀಯರ ಸಹಾಯ ಪಡೆಯಲಾಗುತ್ತಿದೆ. ಇತ್ತೀಚೆಗೆ ವಿಧಾನಸಭೆಯಲ್ಲಿ ಈ ವಿಷಯ ಚರ್ಚೆಯಾಯಿತು. ಹಾಗಾಗಿ ಕೆಳಮನೆಯ ಸದಸ್ಯರ ಜತೆ ಚರ್ಚೆ ಮಾಡಿದ್ದೇವೆ. ಹುಲಿಯೊನ್ನು ಹೊಡೆದು ಹಾಕಲು ಜನರಿಗೆ ಅವಕಾಶ ನೀಡಿ ಎಂದು ಶಾಸಕರು ಮನವಿ ಮಾಡಿದ್ದರು. ಆದರೆ, ಅದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಆದಷ್ಟು ಶೀಘ್ರ ಹುಲಿ ಹಿಡಿಯುತ್ತೇವೆ ಎಂದು ಸಚಿವರು ಭರವಸೆ ನೀಡಿದರು.

Facebook Comments