ಕೊರೋನಾ ನಿಯಂತ್ರಣಕ್ಕೆ ವಾರ್ಡ್ ಮಟ್ಟದಲ್ಲಿ ಸಮಿತಿ ರಚನೆ : ಸಚಿವ ಲಿಂಬಾವಳಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು ಮೇ. 8 : ವಾರ್ಡ್ ಮಟ್ಟದಲ್ಲಿ ಸಮಿತಿಗಳನ್ನು ರಚನೆ ಮಾಡಿ ಅವುಗಳ ನೇತೃತ್ವದಲ್ಲಿ ಕರೋನ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಅರಣ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ. ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಮಾಧ್ಯಮ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಪ್ರತಿ ವಾರ್ಡಿನಲ್ಲಿ ಕನಿಷ್ಠ 50 ಜನರಿರುವ ಸಮಿತಿ ರಚನೆ ಮಾಡಲಾಗುವುದು, ಇದರಲ್ಲಿ ವೈದ್ಯರು, ದಾದಿಯರು, ಸ್ವಯಂಸೇವಕರು, ಸ್ಥಳೀಯ ನಿವಾಸಿಗಳ ಸಂಘಗಳ ಪದಾಧಿಕಾರಿಗಳು ಇರುತ್ತಾರೆ.

ಇವರು ಸೋಂಕಿತರನ್ನು ಟ್ರಯೇಜಿಂಗ್ ಸೆಂಟರ್ ಗೆ (ಚಿಕಿತ್ಸಾನಿರ್ಧಾರ ಕೇಂದ್ರ)ಕರೆತಂದು ಅಲ್ಲಿ ಅವರ ರೋಗ ಲಕ್ಷಣಗಳಿಗೆ ಅನುಸಾರವಾಗಿ ವರ್ಗೀಕರಣ ಮಾಡಿ, ಆಸ್ಪತ್ರೆ ಶುಶ್ರೂಷೆ ಬೇಕಾದವರನ್ನು ಆಸ್ಪತ್ರೆಗೆ, ಸಾಮಾನ್ಯ ಕೋವಿಡ್ ಲಕ್ಷಣ ಇರುವವರಿಗೆ ಕರೋನಾ ಕೇರ್ ಸೆಂಟರ್ ಗೆ ಮತ್ತು ಸ್ಟಬಲೈಸೇಶನ್ ಸೆಂಟರ್ ಗಳಿಗೆ ದಾಖಲು ಮಾಡಲು ಕ್ರಮ ಕೈಗೊಳ್ಳುತ್ತದೆ.

ಇದೇ ವಾರ್ಡ್ ಸಮಿತಿ ಗಳು ಸಾಧಾರಣ ರೋಗಲಕ್ಷಣ ಇರುವವರಿಗೆ ಮನೆಯಲ್ಲಿ ಕ್ವಾರನ್ ಟೈನ್ ನಲ್ಲಿ ಇರಲು ತಿಳಿಸಿ ಔಷದ ಕಿಟ್ ಒದಗಿಸುವುದು ಎಂದು ಹೇಳಿದರು.

ನಗರ ಪ್ರದೇಶದಲ್ಲಿರುವ ಕೊಳಗೇರಿಗಳಲ್ಲಿ ವಾಸಿಸುವವರಿಗೆ ಮನೆಯಲ್ಲಿ ಕ್ವಾರನ್ ಟೈನ್ ಆಗಲು ಸಾಧ್ಯವಿಲ್ಲ, ಅವರಿಗಾಗಿ ಪ್ರತಿ ವಾರ್ಡ್ ನಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗುತ್ತಿದೆ ಎಂದು ಅವರು ತಿಳಿಸಿದರು. ಈ ವಾರ್ಡ್ ಸಮಿತಿಗಳ ಮಾದರಿ ಈಗಾಗಲೇ ಮುಂಬೈ ಹಾಗೂ ಚೆನ್ನೈಗಳಲ್ಲಿ ಯಶಸ್ವಿಯಾಗಿದೆ. ಆದ್ದರಿಂದ ಇಲ್ಲಿಯೂ ಅದೇ ಮಾದರಿ ಅನುಸರಿಸಲು ತೀರ್ಮಾನಿಸಲಾಗಿದೆ ಎಂದು ಸಚಿವ ಅರವಿಂದ ಲಿಂಬಾವಳಿ ಹೇಳಿದರು.

ಪ್ರತಿ ತಾಲೂಕಿನಲ್ಲೂ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗುತ್ತದೆ. ಇಲ್ಲಿನ ರೋಗಿಗಳ ವಿವರಗಳನ್ನು ನಿಗದಿತ ನಮೂನೆಯಲ್ಲಿ ಕೇಂದ್ರ ಜಿಲ್ಲಾ ವಾರ್ ರೂಮಿ ಗೆ ಕಳುಹಿಸಬೇಕೆಂದು ಸೂಚಿಸಲಾಗಿದೆ ಎಂದರು. ಆಯಾ ಜಿಲ್ಲೆಯಲ್ಲಿ ಲಭ್ಯವಿರುವ ಸಾಮಾನ್ಯ ಬೆಡ್, ಐಸಿಯು, ಹೆಚ್ ಡಿ ಯು ಬೆಡ್ ಗಳ ವಿವರ ಪ್ರದರ್ಶಿಸಬೇಕೆಂದು ಸೂಚಿಸಲಾಗಿದೆ ಎಂದರು.

ಬೆಂಗಳೂರಿನಲ್ಲಿ 9 ಜೋನಲ್ ಕಮಾಂಡ್ ಸೆಂಟರ್ ಗಳಿವೆ, ಅವುಗಳ ಸುಧಾರಣೆಗೆ ಕ್ರಮ ಕೈಗೊಳ್ಳಲಾಗಿದೆ. ಅಲ್ಲಿನ ಕರೆ ಮಾರ್ಗಗಳ ಸಂಖ್ಯೆಯನ್ನು ಐವತ್ತಕ್ಕೆ ಹೆಚ್ಚಿಸಿದೆ. ಹಾಗೆಯೇ 1912 ಸಹಾಯವಾಣಿ ಕರೆ ಮಾರ್ಗಗಳ ಸಂಖ್ಯೆಯನ್ನು ಅರವತ್ತರಿಂದ 250ಕ್ಕೆ ಹೆಚ್ಚಿಸಲು ಸೂಚಿಸಿದೆ ಎಂದು ತಿಳಿಸಿದರು. ಬೆಡ್ ಹಂಚಿಕೆ ಆದವರಿಗೆ ಈ ಮೊದಲು ಎಸ್ಎಂಎಸ್ ಹೋಗುತ್ತಿರಲಿಲ್ಲ , ಈಗ ಎಲ್ಲಾ ವಿವರಗಳೊಂದಿಗೆ ಎಸ್ಎಂಎಸ್ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು.

# ಬಯೋಮೆಟ್ರಿಕ್ ವ್ಯವಸ್ಥೆ :
ಆಸ್ಪತ್ರೆಗಳಲ್ಲ ಇನ್ನುಮುಂದೆ ಆಧಾರ್ ಆಧಾರಿತ ಬಯೋಮೆಟ್ರಿಕ್ ವ್ಯವಸ್ಥೆ ತರಲಾಗುತ್ತದೆ. ಇದರಿಂದ ಒಬ್ಬರಿಗೆ ಹಂಚಿಕೆಯಾದ ಹಾಸಿಗೆಯನ್ನು ಬೇರೆಯವರು ಆಕ್ರಮಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆಸ್ಪತ್ರೆಗೆ ರೋಗಿಗಳ ದಾಖಲು ಮತ್ತು ರೋಗಿಗಳ ಬಿಡುಗಡೆ ಸಂದರ್ಭದಲ್ಲಿ ಕಡ್ಡಾಯವಾಗಿ ನಮೂದಿಸಬೇಕು ಎಂದು ಸಚಿವ ಅರವಿಂದ ಲಿಂಬಾವಳಿ ಹೇಳಿದರು.

# ಕ್ಯೂ ವಾಚ್ ವ್ಯವಸ್ಥೆ ಜಾರಿಗೆ :
ಬಹಳ ಮುಖ್ಯವಾಗಿ ಸೋಂಕಿತರು ಒಮ್ಮೆ ಆಸ್ಪತ್ರೆಗೆ ದಾಖಲಾದ ನಂತರ ಸಾಮಾನ್ಯ ಬೆಡ್ ಗಳಿಗೆ ದಾಖಲಾದವರು ಅವರ ಆರೋಗ್ಯ ಪರಿಸ್ಥಿತಿ ಗೆ ಅನುಗುಣವಾಗಿ ಹೆಚ್ಡಿ ಯು, ಐಸಿಯು, ಮತ್ತು ವೆಂಟಿಲೇಟರ್ ಗಳಿಗೆ ವರ್ಗಾವಣೆ ಆಗಿರುತ್ತಾರೆ, ಆದರೆ ಈ ಬಗ್ಗೆ ಆಸ್ಪತ್ರೆಗಳು ಮಾಹಿತಿಯನ್ನು ಅಪ್ಡೇಟ್ ಮಾಡುವುದಿಲ್ಲ, ಇದರಿಂದ ಸರ್ಕಾರದ ವಾರ್ ರೂಮ್ಗೆ ಸರಿಯಾದ ಮಾಹಿತಿ ಸಿಗುವುದಿಲ್ಲ, ಸ್ಥಿತಿಯನ್ನು ಸುಧಾರಿಸಲು ಕ್ಯೂವಾಚ್ ಎಂಬ ಸುಧಾರಿತ ಆಪ್ ವ್ಯವಸ್ಥೆಯ ಮೂಲಕ ನಿಗಾ ವಹಿಸಲಾಗುತ್ತದೆ ಎಂದು ಸಚಿವ ಲಿಂಬಾವಳಿ ತಿಳಿಸಿದರು.

ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಐಸಿಯು, ಹೆಚ್ಡಿ ಯು, ರೋಗಿಗಳ ಅಂಕಿಅಂಶವನ್ನು ಪ್ರತಿ ಐದು ದಿನಕ್ಕೊಮ್ಮೆ ಸಂಗ್ರಹಿಸಲಾಗುತ್ತಿತ್ತು. ಇನ್ನು ಮುಂದೆ ಪ್ರತಿದಿನವೂ ಪರಿಶೀಲಿಸಲು ಸೂಚಿಸಿದೆ ಎಂದು ಹೇಳಿದರು.

ಆಸ್ಪತ್ರೆಯಲ್ಲಿ ಪ್ರತಿದಿನವೂ ಸರ್ಕಾರಿ ಹಂಚಿಕೆಯಡಿ ದಾಖಲಾ ಗುವ ವಿವರಗಳನ್ನು ಆಯಾ ಆಸ್ಪತ್ರೆಯ ನೋಡಲ್ ಅಧಿಕಾರಿಗಳು ಮತ್ತು ಸಹಾಯಕ ನೋಡಲ್ ಆಫೀಸರ್ ಗಳು ಆರೋಗ್ಯ ಮಿತ್ರ ಸಿಬ್ಬಂದಿ ಸಹಾಯದೊಂದಿಗೆ ಭೌತಿಕ ಪರಿಶೀಲನೆ ಮಾಡಿ ಕಡ್ಡಾಯವಾಗಿ ತಮ್ಮ ಮೇಲಾಧಿಕಾರಿಗಳಿಗೆ ವರದಿ ಮಾಡಬೇಕೆಂದು ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.

ಬೆಡ್ ವಿತರಣೆ ವ್ಯವಸ್ಥೆ ಸುಧಾರಣೆಗೆ ಈಗ ಪ್ರತಿ ಕೇಂದ್ರದ ಕಂಪ್ಯೂಟರಿನ ಐ -ಮ್ಯಾಕ್ ಐಡಿ ಹೊಂದಿರುವವರು ಇನ್ನು ಮುಂದೆ ಹೆಸರನ್ನು ಸಹ ನಮೂದಿಸಬೇಕು ಎಂಬ ಹೊಸ ನಿಯಮವನ್ನು ಕಡ್ಡಾಯಗೊಳಿಸಿದೆ ಎಂದು ಸಚಿವ ಅರವಿಂದ ಲಿಂಬಾವಳಿ ಹೇಳಿದರು.

# ಮನವಿ :
ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರುಗಳು ಪಕ್ಷಭೇದ ಮರೆತು ವಾರ್ಡ್ ಸಮಿತಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಕರೋನಾ ನಿಯಂತ್ರಣಕ್ಕಾಗಿ ಸಹಕರಿಸಬೇಕೆಂದು ಅವರು ಮನವಿ ಮಾಡಿದರು.

Facebook Comments

Sri Raghav

Admin