ಮಧುಮಗನಿಗೆ 5 ಲೀಟರ್ ಪೆಟ್ರೋಲ್ ಗಿಫ್ಟ್ ಕೊಟ್ಟ ಸ್ನೇಹಿತರು ..!

ಈ ಸುದ್ದಿಯನ್ನು ಶೇರ್ ಮಾಡಿ

Petrol-Gift--01

ಚೆನ್ನೈ, ಸೆ.17- ಈಗಿನ ಪರಿಸ್ಥಿತಿಯಲ್ಲಿ ದ್ವಿಚಕ್ರ ವಾಹನ ಬೇಕಾದ್ರೆ ಖರೀದಿಸಬಹುದು ಆದರೆ ಅದನ್ನು ಮುನ್ನಡೆಸುವ ತೈಲ ಕೊಂಡುಕೊಳ್ಳಲು ಆಗುತ್ತಿಲ್ಲ..! ಏಕೆಂದರೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುವ ತೈಲ ಬೆಲೆ. ದಿನ ಬೆಳಗಾದರೆ ಸಾಕು ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಪ್ಪಾ ಏರಿಕೆಯಾಗುತ್ತದೆ ಎಂಬ ಚಿಂತೆ ಕಾಡುತ್ತಿದೆ.

ಪೆಟ್ರೋಲ್ ಬಂಕ್ ಬಳಿ ಗಾಡಿಗಳನ್ನು ತೆಗೆದುಕೊಂಡು ಹೋದರೆ 2-3 ಲೀಟರ್ ಪೆಟ್ರೋಲ್ ಹಾಕಿಸ್ಕೋಬೇಕು ಎಂದು ಮನಸ್ಸು ಮಾಡಿದರೆ ನಾಳೆಯಾದರೂ ತೈಲ ಬೆಲೆ ಇಳಿಯಬಹುದು, ಇಂದು ಏಕೆ ಜೇಬಿಗೆ ಕತ್ತರಿ ಹಾಕಿಸಿಕೊಳ್ಳಬೇಕೆಂದು 1-2 ಲೀಟರ್ ಪೆಟ್ರೋಲ್ ಹಾಕಿಸಿಕೊಳ್ಳಲು ಕೂಡ ಅರೆಮನಸ್ಸು ಮಾಡುತ್ತಿದ್ದಾರೆ.

ಇನ್ನು ಇದಕ್ಕೆ ಒಂದು ಹೆಜ್ಜೆ ಮುಂದೆ ಹೋಗಿ ತಮಿಳುನಾಡಿನಲ್ಲಿ ಮದುವೆಯ ಸಮಾರಂಭದಲ್ಲಿ ವರನಿಗೆ ಆತನ ಸ್ನೇಹಿತರು 5 ಲೀಟರ್ ಪೆಟ್ರೋಲ್ ಅನ್ನು ಗಿಫ್ಟ್ ರೀತಿಯಲ್ಲಿ ನೀಡಿದ್ದಾರೆ. ಇದು ದೃಶ್ಯ ಮಾಧ್ಯಮವೊಂದರಲ್ಲಿ ಪ್ರಸಾರವಾಗಿದ್ದು ಈಗ ಈ ವೀಡಿಯೋ ಕ್ಲಿಪ್‍ಗಳಿಗೆ ಎಲ್ಲಿಲ್ಲದ ಕಾಮೆಂಟ್‍ಗಳು ಕೂಡ ಬಂದಿದೆ.

ತಮಿಳುನಾಡಿನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 85.15 ರೂ.ಗಳಿದ್ದು ಅದರ ಭಾರವನ್ನು ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ, ಇದರ ಬಗ್ಗೆ ಹೊಸ ಮಾದರಿಯಲ್ಲಿ ಸರ್ಕಾರಗಳ ಗಮನ ಸೆಳೆಯಲು ಈ ರೀತಿಯ ಐಡಿಯಾವನ್ನು ಮಾಡಿದ್ದೇವೆ ಎಂದು ಆ ದೃಶ್ಯ ಮಾಧ್ಯಮಕ್ಕೆ ವರನ ಸ್ನೇಹಿತರು ತಿಳಿಸಿದ್ದಾರೆ.  ಇತ್ತೀಚೆಗಷ್ಟೇ ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್‍ಶಾ ಅವರು ಕೂಡ ಪೆಟ್ರೋಲ್ ದರವನ್ನು ಪರಿಷ್ಕರಿಸುವುದಾಗಿ ತಿಳಿಸಿದ್ದು ಆದಷ್ಟು ಬೇಗ ಇಳಿಕೆಯಾದರೆ ಸಾಕಪ್ಪಾ ಎಂದುಕೊಳ್ಳುತ್ತಿರುವಾಗಲೇ ತಮಿಳುನಾಡಿನಲ್ಲಿ ಮಧುಮಗನಿಗೆ 5 ಲೀಟರ್ ಪೆಟ್ರೋಲ್ ಗಿಫ್ಟ್ ನೀಡಿರುವ ಆಲೋಚನೆಯು ಗಮನ ಸೆಳೆದಿದೆ.

# ಈರುಳ್ಳಿ ರಿಂಗ್, ನೆಕ್ಲೇಸ್ ಗಿಫ್ಟ್:
ಈ ಹಿಂದೆ ದೇಶದಲ್ಲಿ ಈರುಳ್ಳಿ ಬೆಲೆ 100ರ ಗಡಿ ಮುಟ್ಟಿದಾಗ ಎಲ್ಲರ ಕಣ್ಣಲ್ಲೂ ನೀರು ಬರುವಂತಾಗಿತ್ತು. ಆಗ ಮದುವೆ, ನಾಮಕರಣ ಮುಂತಾದ ಶುಭ ಸಂದರ್ಭಗಳಲ್ಲಿ ನವಜೋಡಿಗಳು ಹಾಗೂ ಮಕ್ಕಳಿಗೆ ಈರುಳ್ಳಿಯಿಂದ ತಯಾರಿಸಿದ ಉಂಗುರಗಳು, ನೆಕ್ಲೇಸ್‍ಗಳು ಮತ್ತಿತರ ನಮೂನೆಯ ಆಭರಣಗಳನ್ನು ತಯಾರಿಸಿ ಉಡುಗೊರೆಯ ರೂಪದಲ್ಲಿ ನೀಡಿದ್ದನ್ನು ಇಲ್ಲಿ ಸ್ಮರಣಿಸಬಹುದು.

ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಗಗನಮುಖಿಯಾಗುತ್ತಿರುವುದನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಮದುವೆ ಮತ್ತಿತರ ಶುಭ ಸಮಾರಂಭಗಳಲ್ಲಿ ಹಣ, ಪಾತ್ರೆ , ಪಗಡೆ, ಮತ್ತಿತರರ ಉಡುಗೊರೆಯ ಬದಲು ಪೆಟ್ರೋಲ್, ಡೀಸೆಲ್ ಅನ್ನೇ ಉಡುಗೊರೆ ರೂಪದಲ್ಲಿ ನೀಡಿದರೆ ಆಶ್ಚರ್ಯವೇನಿಲ್ಲ ಅಲ್ಲವೇ…!

Facebook Comments

Sri Raghav

Admin