ಅರ್ಟಿಕಲ್ 370 ರದ್ದಾಗಿ ನಾಳೆಗೆ ಒಂದು ವರ್ಷ, ಕಾಶ್ಮೀರದಲ್ಲಿ ಕಫ್ರ್ಯೂ ಜಾರಿ
ಶ್ರೀನಗರ, ಆ.4-ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ ಭಾರತೀಯ ಸಂವಿಧಾನದ 370ನೆ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿ ನಾಳೆಗೆ ಒಂದು ವರ್ಷ ಪೂರ್ಣಗೊಂಡಿದೆ.
ಈ ಹಿನ್ನೆಲೆಯಲ್ಲಿ ಕಣಿವೆ ಪ್ರಾಂತ್ಯದಲ್ಲಿ ಪಾಕಿಸ್ತಾನ ಬೆಂಬಲಿತ ಪ್ರತ್ಯೇಕತಾವಾದಿಗಳು ಮತ್ತು ಉಗ್ರಗಾಮಿಗಳಿಂದ ಯಾವುದೇ ಅಹಿತಕರ ಘಟನೆಗಳು ನಡೆಯುವುದನ್ನು ತಪ್ಪಿಸಲು ಜಮ್ಮು ಮತ್ತು ಕಾಶ್ಮೀರಾದ್ಯಂತ ಇಂದು ಮತ್ತು ನಾಳೆ ಕಫ್ರ್ಯೂ ವಿಧಿಸಲಾಗಿದೆ.
ರಾಜಧಾನಿ ಶ್ರೀನಗರ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದ ಎಲ್ಲ ಜಿಲ್ಲೆಗಳಲ್ಲೂ ಇಂದು ಮತ್ತು ನಾಳೆ ಕಫ್ರ್ಯೂ ವಿಧಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಕಳೆದ ವರ್ಷ ಆಗಸ್ಟ್ 5ರಂದು ರದ್ದುಗೊಳಿಸಿತ್ತು.
ಪ್ರತ್ಯೇಕತಾವಾದಿಗಳು ಮತ್ತು ಪಾಕಿಸ್ತಾನ ಬೆಂಬಲಿತ ಗುಂಪುಗಳು ನಾಳೆ ಕರಾಳ ದಿನಾಚರಣೆ ಆಚರಿಸಿ ಹಿಂಸಾತ್ಮಕ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ ಎಂಬ ಗುಪ್ತಚರ ವರದಿಗಳ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ಕಾಶ್ಮೀರದಾದ್ಯಂತ ಕಫ್ರ್ಯೂ ವಿಧಿಸಲಾಗಿದ್ದು, ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.