‘ಯಡಿಯೂರಪ್ಪ ಕಾಲ್ಗುಣದಿಂದ ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ’ : ನಡಹಳ್ಳಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.18- ಮುಖ್ಯಮಂತ್ರಿ ಯಡಿಯೂರಪ್ಪನವರ ಕಾಲ್ಗುಣದಿಂದ ರಾಜ್ಯದಲ್ಲಿ ಸಮೃದ್ಧವಾಗಿ ಮಳೆಯಾಗಿ ರಾಜ್ಯದಲ್ಲಿ ಸುಭಿಕ್ಷೆ ನೆಲೆಸಿದೆ ಎಂದು ಎ.ಎಸ್.ಪಾಟೀಲ್ ನಡಹಳ್ಳಿ ಹೇಳಿದರು. ಜಂಟಿ ಅಧಿವೇಶನವನ್ನುದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣದ ಮೇಲಿನ ವಂದನಾ ನಿರ್ಣಯವನ್ನು ಕುರಿತು ವಿಧಾನಸಭೆಯಲ್ಲಿ ಮಾತನಾಡಿದ ಅವರು, ಕಳೆದ 10 ವರ್ಷಗಳಿಂದಲೂ ರಾಜ್ಯದಲ್ಲಿಬರ ಪರಿಸ್ಥಿತಿ ಇತ್ತು.

ಯಡಿಯೂರಪ್ಪ ಸಿಎಂ ಆಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಸಮೃದ್ಧಿ ಮಳೆಯಾಯಿತು. ಜನರು ಸುಭಿಕ್ಷರಾಗಿದ್ದಾರೆ ಎಂದರು.ಯಡಿಯೂರಪ್ಪ ಅವರಿಗೆ ತಾವು ಸಿಎಂ ಆಗಿ ರಾಜ್ಯದ ಅಭಿವೃದ್ಧಿ ಮಾಡಬೇಕು, ಜನರ ಋಣ ತೀರಿಸಬೇಕೆಂಬ ಅಪರಿಮಿತವಾದ ಬಯಕೆಗಳಿದ್ದವು. ಜನರ ನಿರೀಕ್ಷೆಯಂತೆ ಅವರಿಗೆ ಅಧಿಕಾರ ಸಿಕ್ಕಿದ್ದು, ಅಭಿವೃದ್ಧಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜ್ಯಾದ್ಯಂತ ಮೂಲಸೌಕರ್ಯ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಸರ್ಕಾರ ಮಹತ್ವದ ಹೆಜ್ಜೆಗಳನ್ನಿಟ್ಟಿದೆ.

ಯಡಿಯೂರಪ್ಪ ಮುಖ್ಯಮಂತ್ರಿಯಾದ ಕೆಲವೇ ದಿನಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಯಿತು. ಎಲ್ಲ ಪ್ರದೇಶಗಳಿಗೆ ಎರಡೆರಡುಬಾರಿ ಭೇಟಿ ನೀಡಿ ಜನರ ಸಂಕಷ್ಟಗಳಿಗೆ ಸ್ಪಂದಿಸಿದ್ದರು ಎಂದರು. 2018ರ ವಿಧಾನಸಭೆ ಚುನಾವಣಾ ಫಲಿತಾಂಶ ಪ್ರಕಟಗೊಂಡಾಗ ತಾತ್ಕಾಲಿಕವಾಗಿ ಸಾಂದರ್ಭಿಕ ಶಿಶುವೊಂದು ಜನಿಸಿತ್ತು. ಆದರೆ ಕಾಲಾನಂತರ ಜನ ಅದನ್ನು ತಿರಸ್ಕರಿಸಿದರು ಎಂದು ನಡಹಳ್ಳಿ ಹೇಳುತ್ತಿದ್ದಂತೆ, ಜೆಡಿಎಸ್ ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಜನ ಸರ್ಕಾರವನ್ನು ತಿರಸ್ಕರಿಸಿರಲಿಲ್ಲ. ಬಿಜೆಪಿಯವರು ಅನೈತಿಕವಾಗಿ ಸರ್ಕಾರ ರಚಿಸಿದ್ದಾರೆ. ದೇಶವನ್ನೇ ಮಾರಾಟ ಮಾಡಲು ಹೊರಟವರು ಜೆಡಿಎಸ್ ಸರ್ಕಾರದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ರಾಜ್ಯಪಾಲರ ವಂದನಾ ನಿರ್ಣಯದ ಮೇಲಷ್ಟೇ ಮಾತನಾಡಲಿ, ರಾಜಕೀಯ ಮಾತನಾಡುವುದಾದರೆ ನಾವು ಉತ್ತರ ಕೊಡಬೇಕಾಗುತ್ತದೆ ಎಂದು ಗದ್ದಲ ಎಬ್ಬಿಸಿದಾಗ, ಪರಿಸ್ಥಿತಿ ತಿಳಿಗೊಳಿಸಲು ಸಭಾಧ್ಯಕ್ಷರು ಪರದಾಡಬೇಕಾಯಿತು.

Facebook Comments

Sri Raghav

Admin