ಮೈಸೂರಲ್ಲಿ ಕೊರೊನಾ ಸರ್ವೇಗೆ ಬಂದ ಆಶಾ ಕಾರ್ಯಕರ್ತೆಗೆ ಬೆದರಿಕೆ ಹಾಕಿದ ದುಷ್ಟರು

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಏ.21- ಕೊರೊನಾ ಸರ್ವೇ ಮಾಡಲು ಬಂದ ಆಶಾ ಕಾರ್ಯಕರ್ತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ ಘಟನೆ ಎನ್.ಆರ್.ಪೊಲೀಸ್ ಠಾಣೆ ವ್ಯಾಪ್ತಿಯ ಅಲೀಂ ನಗರದಲ್ಲಿ ನಡೆದಿದೆ.ಸುಮಯಾ ಫಿರ್ದೋಷಿ ಎಂಬ ಆಶಾ ಕಾರ್ಯಕರ್ತೆ ನಿನ್ನೆ ಸಂಜೆ ಅಲೀಂ ನಗರಕ್ಕೆ ಸರ್ವೆ ಮಾಡಲು ಬಂದ ಸಂದರ್ಭದಲ್ಲಿ ಗುಂಪು ಕಟ್ಟಿಕೊಂಡು ಮಾತನಾಡುತ್ತಿದ್ದ ಜನರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದಿದ್ದಕ್ಕೆ ಅವರಿಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಸಂಬಂಧ ಅವರು ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಸಮಾಜದ ಆರೋಗ್ಯ ಸ್ವಾಸ್ಥ್ಯ ಕಾಪಾಡಲು ಆಶಾ ಕಾರ್ಯಕರ್ತರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಕೆಲಸ ಮಾಡುತ್ತಿದ್ದಾರೆ. ಅಂತಹವರಿಗೆ ಮಾಹಿತಿ ನೀಡಬೇಕಾದುದು ಸಾರ್ವಜನಿಕರ ಕರ್ತವ್ಯ. ಅವರನ್ನು ನಿಂದಿಸುವುದು, ಧಮ್ಕಿ ಹಾಕುವುದು ಅಪರಾಧವಾಗುತ್ತದೆ.

ಹೀಗಿದ್ದರೂ ಕೆಲವು ಕಿಡಿಗೇಡಿಗಳು , ದುಷ್ಕಮಿಗಳು ಇಂತಹ ಕೆಲಸವನ್ನು ಮಾಡಿ ಆಶಾ ಕಾರ್ಯಕರ್ತೆಯರ ನೈತಿಕ ಸ್ಥೈರ್ಯವನ್ನು ಕುಗ್ಗಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಮೈಸೂರಿನ ನಂಜನಗೂಡಿನಲ್ಲಿ ಹಲವರನ್ನು ಕ್ವಾರಂಟೈನ್‍ನಲ್ಲಿ ಇಟ್ಟಿರುವುದರಿಂದ ಪ್ರತಿ ದಿನ ಆಶಾ ಕಾರ್ಯಕರ್ತೆಯರು ಈ ಭಾಗದ ಸುತ್ತಮುತ್ತ ಸಂಚರಿಸಿ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ.

ಇದಲ್ಲದೆ ಕಟ್ಟುನಿಟ್ಟಾಗಿ ಸರ್ವೇ ಮಾಡುವಂತೆ ಸೂಚನೆ ಮಾಡಿರುವ ಹಿನ್ನೆಲೆಯಲ್ಲಿ ಪ್ರತಿ ದಿನ 30 ಮನೆಗಳಿಗೆ ತೆರಳಿ ಸರ್ವೇ ಮಾಡಿ ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇವರ ಸೇವೆಗೆ ಸಹಕಾರ ನೀಡಬೇಕು. ಕೆಲಸಕ್ಕೆ ಅಡ್ಡಿಪಡಿಸಬಾರದು ಎಂಬ ಕನಿಷ್ಠ ಜ್ಞಾನ ನಮ್ಮ ಜನಕ್ಕಿಲ್ಲ ಎಂಬುದು ವಿಪರ್ಯಾಸ.

ಬೆಂಗಳೂರಿನ ಪಾದರಾಯನಪುರದಲ್ಲಿ ಆರೋಗ್ಯಾಧಿಕಾರಿಗಳು ಪೊಲೀಸರ ಮೇಲೆ ಹಲ್ಲೆ ಮಾಡಿ ಬ್ಯಾರಿಕೇಡ್‍ಗಳನ್ನು ಕಿತ್ತು ಹಾಕಲಾಗಿತ್ತು. ಸಾದಿಕ್ ಪಾಳ್ಯದಲ್ಲಿ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಮಾಡಲಾಗಿತ್ತು. ಈಗ ಮೈಸೂರಿನಲ್ಲಿ ಆಶಾ ಕಾರ್ಯಕರ್ತೆಯರ ಮೇಲೆ ಧಮ್ಕಿ ಹಾಕಲಾಗಿತ್ತು. ಸರ್ಕಾರ ಇಂತಹವರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

Facebook Comments

Sri Raghav

Admin