ಆಶಾ ಕಾರ್ಯಕರ್ತೆಯರಿಗೆ ಸರ್ಕಾರದಿಂದ ಸೂಕ್ತ ಸೌಲಭ್ಯ : ಸಚಿವ ಗೋಪಾಲಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ಆ.4- ಕೊರೊನಾದಂತಹ ಸಂಕಷ್ಟದ ಸಮಯದಲ್ಲಿ ಕರ್ತವ್ಯ ಪ್ರಜ್ಞೆ ಮರೆಯುತ್ತಿರುವ ಆಶಾ ಕಾರ್ಯಕರ್ತರಿಗೆ ಸರ್ಕಾರದಿಂದ ಸೂಕ್ತ ಸೌಲಭ್ಯ ಒದಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಭರವಸೆ ನೀಡಿದರು.

ಚನ್ನರಾಯಪಟ್ಟಣದಲ್ಲಿ ಹೇಮಾವತಿ ಸಕ್ಕರೆ ಕಾರ್ಖಾನೆ ಹಾಗೂ ತಾಲೂಕು ಆಡಳಿತ ವತಿಯಿಂದ ಕೊರೊನಾ ವಾರಿಯರ್ಸ್ ಆಗಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ 3 ಸಾವಿರ ರೂ. ಸಹಾಯಧನದ ಚೆಕ್ ವಿತರಿಸಿ ಮಾತನಾಡಿದರು.

ಆಶಾ ಕಾರ್ಯಕರ್ತೆಯರು ಕೊರೊನಾ ಸೋಂಕು ಹರಡುತ್ತಿರುವ ಈ ಸಂದರ್ಭದಲ್ಲಿ ಮನೆಮನೆಗೆ ತೆರಳಿ ಸೋಂಕಿತರನ್ನು ಗುರುತಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಅವರ ಕರ್ತವ್ಯ ಪ್ರಜ್ಞೆ ಮೆಚ್ಚುವಂಥದ್ದು.

ಇವರಿಗೆ ಸರ್ಕಾರದಿಂದ ದೊರಕಬೇಕಾಗಿರುವ ವೇತನ ಹಾಗೂ ಇತರೆ ಸೌಲಭ್ಯಗಳ ಬಗ್ಗೆ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿ ಕೂಡಲೇ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಮುಂದಿನ ದಿನ ಸರ್ಕಾರದಿಂದ ಆಶಾ ಕಾರ್ಯಕರ್ತೆಯರಿಗೆ ಅಭಿನಂದನೆ ಸಲ್ಲಿಸಲಾಗುವುದು ಹಾಗೂ ಮುಂದೆಯೂ ಇದೇ ರೀತಿ ಸಮಾಜದ ಸೇವೆಯಲ್ಲಿ ನಿರತರಾಗಿರುವ ಇವರ ಕಾರ್ಯ ಪ್ರಶಂಸಾರ್ಹವಾಗಿದೆ ಎಂದರು.

ಸೂಕ್ತ ತನಿಖೆ ಮಾಡಲಾಗುವುದು: ಇತ್ತೀಚೆಗೆ ಆತ್ಮಹತ್ಯೆಗೆ ಶರಣಾದ ಚನ್ನರಾಯಪಟ್ಟಣದ ಪಿಎಸ್‍ಐ ಕಿರಣ್ ಕುಮಾರ್ ಅವರ ಸಾವಿನ ಕುರಿತು ಉನ್ನತಮಟ್ಟದ ತನಿಖೆ ಆಗಬೇಕಿದೆ.

ಈ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ತನಿಖೆ ನಡೆಸಿ ಕಿರಣ್ ಅವರಿಗೆ ಅವರ ಸಾವಿಗೆ ನ್ಯಾಯ ದೊರಕಿಸಿಕೊಡುವಂತೆ ಸೂಚನೆ ನೀಡಲಾಗಿದೆ ಎಂದರು.

ಕಿರಣ್ ಕುಮಾರ್ ಅವರ ಕುಟುಂಬಕ್ಕೆ ಭಗವಂತ ನೋವು ಭರಿಸುವ ಶಕ್ತಿ ನೀಡಲಿ ಹಾಗೂ ಅವರ ಕುಟುಂಬಕ್ಕೆ ಸರ್ಕಾರದ ವತಿಯಿಂದ ಸೂಕ್ತ ನೆರವು ನೀಡಲಾಗುವುದು ಎಂದು ಇದೇ ವೇಳೆ ತಿಳಿಸಿದರು.

ಶಾಸಕ ಸಿ.ಎನ್.ಬಾಲಕೃಷ್ಣ, ಜಿಲ್ಲಾಧಿಕಾರಿ ಆರ್.ಗಿರೀಶ್, ಉಪವಿಭಾಗಾಧಿಕಾರಿ ನವೀನ್ ಭಟ್, ಸಿಇಒ ಪರಮೇಶ್ ಸೇರಿದಂತೆ ಇತರರು ಹಾಜರಿದ್ದರು.

Facebook Comments

Sri Raghav

Admin