“ಕುವೆಂಪು ರವೀಂದ್ರನಾಥ್ ಟಾಗೋರ್ ಅವರ ಸ್ಥಾನವನ್ನು ತುಂಬಬಲ್ಲರು”

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.16-ರವೀಂದ್ರನಾಥ್ ಟಾಗೋರ್ ಅವರ ನಿಧನದ ನಂತರದ ಸ್ಥಾನವನ್ನು ಕರ್ನಾಟಕದ ಕವಿಯಾದ ಕುವೆಂಪು ರವರು ತುಂಬಬಲ್ಲರು ಎಂದು ಕೋಲ್ಕತ್ತಾದ ಪತ್ರಿಕೆಯೊಂದು ವರದಿ ಮಾಡಿತ್ತು ಎಂದು ಸಾಹಿತ್ಯದ ವಿಮರ್ಶಕಿ ಹಾಗೂ ಲೇಖಕಿ ಡಾ.ಎಂ.ಎಸ್.ಆಶಾದೇವಿಯವರು ತಿಳಿಸಿದರು.

ಗ್ರಾಮ ಭಾರತ ಸಾಂಸ್ಕøತಿಕ ವೇದಿಕೆ ಹಮ್ಮಿಕೊಂಡಿದ್ದ ಕುವೆಂಪು, ಸಾಹಿತ್ಯ ಮತ್ತು ಚಿಂತನೆಗಳು ಉಪನ್ಯಾಸದಲ್ಲಿ ಕುವೆಂಪು ಸಾಂಸ್ಕøತಿಕ ನಾಯಕ ಎಂಬ ವಿಚಾರವಾಗಿ ಉಪನ್ಯಾಸ ನೀಡಿದ ಅವರು, , ಕುವೆಂಪು ಅವರ ಆತ್ಮಶ್ರೀ ನಿರಂಕುಶ ಮತಿಗಳಾಗಿ ಎಂಬುದು ಬದುಕಿನ ಪ್ರಣಾಳಿಕೆಯಾಗಿದೆ. ಆಧುನಿಕ ಭಾರತ ಯಾವ ಯಾವ ಸವಾಲುಗಳನ್ನು ಎದುರಿಸುತ್ತಿದೆಯೋ ಅದನ್ನು ಕುವೆಂಪು ಅವರು ಎದುರಿಸಿ ತಮ್ಮ ಸಾಹಿತ್ಯದಲ್ಲಿ ಎಲ್ಲ ತಲ್ಲಣಗಳಿಗೂ ಉತ್ತರ ಕಂಡುಹಿಡಿದಿದ್ದರು ಎಂದು ತಿಳಿಸಿದರು.

ಅವರ ಸಾಹಿತ್ಯವನ್ನು ಜಿ.ಎಸ್.ನಾಯಕ್ ರಂತಹ ವಿಮರ್ಶಕರೇ ಮೊದಮೊದಲು ಗಂಭೀರವಾಗಿ ಸ್ವೀಕರಿಸಿರಲಿಲ್ಲ. ಆದರೆ ಕರ್ನಾಟಕದ ಬೌದ್ಧಿಕವಲಯವೂ ಕೂಡ ಗಂಭೀರವಾಗಿ ಸ್ವೀಕರಿಸದೆ ಕುವೆಂಪುರವರಿಗೆ ಅನ್ಯಾಯ ಮಾಡಿತ್ತು. ಆದರೆ ಕುವೆಂಪು ಅದ್ಯಾವುದಕ್ಕೂ ಚಿಂತಿಸದೆ ತಮ್ಮ ಪಾಡಿಗೆ ತಾವು ಏನನ್ನು ಹೇಳಬೇಕೋ ಅದನ್ನು ಸಾಹಿತ್ಯದಲ್ಲಿ ತಿಳಿಸುತ್ತಾ ಬಂದರು. ಹೀಗಾಗಿ ಅವರೊಬ್ಬ ತುಂಬ ಘನತೆಯ ಸಾಹಿತಿ ಎಂದು ಯು.ಆರ್.ಅನಂತಮೂರ್ತಿ ಅವರು ತಿಳಿಸಿದ್ದರು ಎಂದರು.

ಇತಿಹಾಸದಲ್ಲಿ ಯಾವುದೇ ತಪ್ಪು ಘಟನೆ ಘಟಿಸಿದರೆ ಅದನ್ನು ಸರಿಪಡಿಸಬೇಕಾಗಿರುವ ಜವಾಬ್ದಾರಿ ಕವಿಗಳದ್ದು ಎಂದು ಕುವೆಂಪು ತಿಳಿದಿದ್ದರು. ಅವರ ಕವನಗಳಲ್ಲಿ ಜಾತಿ ಧರ್ಮದ ವಿಚಾರಗಳನ್ನು ಬರೆಯುವುದನ್ನು ಮಾಸ್ತಿಯವರು ವಿರೋಧಿಸುತ್ತಿದ್ದರು. ಅದಕ್ಕೆ ಉತ್ತರವೆಂಬಂತೆ ಶೂದ್ರ ತಪಸ್ವಿ ನಾಟಕವನ್ನು ಬರೆಯುತ್ತಿದ್ದರು. ಅವರಿಗೆ ಸಮಾಜದಲ್ಲಿರುವ ಶ್ರೇಣಿಕೃತ ವ್ಯವಸ್ಥೆಗೆ ತುಂಬಾ ಆಕ್ರೋಶವಿತ್ತು.

ಅವರು ವಿವೇಕಾನಂದರನ್ನು ಗುರುವಾಗಿ ಸ್ವೀಕರಿಸಿದ್ದರು. ವಿವೇಕಾನಂದರು ಹಿಂದೂ ಧರ್ಮದಲ್ಲಿರುವ ಮೌಢ್ಯಕ್ಕೆ ಜಾತಿ, ವರ್ಗ, ವರ್ಣಬೇಧಕ್ಕೆ ಕೆಲವು ಸಂದರ್ಭದಲ್ಲಿ ಮೌನವಾಗಿದ್ದರೂ ಕುವೆಂಪುರವರು ಸಾಯುವವರೆಗೂ ತನ್ನ ಜಾತಿ, ಧರ್ಮ, ಮತಪಂಥಗಳ ವಿರುದ್ಧ ಆಕ್ರೋಶವನ್ನು ಬಿಟ್ಟಿರಲಿಲ್ಲ. ಹೀಗಾಗಿ ಅವರು ಸರ್ವಕಾಲಕ್ಕೂ ಸಾಂಸ್ಕøತಿಕ ನಾಯಕನಾಗಿ ಗಟ್ಟಿಯಾಗಿ ನಮ್ಮೊಂದಿಗೆ ನಿಲ್ಲುತ್ತಾರೆ ಎಂದು ತಿಳಿಸಿದರು.

ಬುದ್ಧ, ಬಸವಣ್ಣನವರ ನಂತರ ಕುವೆಂಪು ಅವರು ಕರ್ನಾಟಕದಲ್ಲಿ ಸಾಂಸ್ಕøತಿಕ ವಿವೇಕದ ಕಣ್ಣನ್ನು ತೆರೆಸಿದ ಬಹುಮುಖ್ಯ ದಾರ್ಶನಿಕರೆನಿಸುತ್ತಾರೆ. ಕುವೆಂಪುರವರಿಗೆ ರಾಮ ಪ್ರಜಾಪ್ರಭುತ್ವವಾದಿಯಾಗುತ್ತಾನೆ. ಮೊದಲ ಡಕ್ಕ, ಮೊದಲ ಬೆಪ್ಪನನ್ನು ಭೇಟಿಯಾದಾಗ ಹುಟ್ಟಿದ್ದು ಧರ್ಮ ಎಂದು ಮೂದಲಿಸುತ್ತಾರೆ ಎಂದು ತಿಳಿಸಿದರು.

ಕುವೆಂಪುರವರು ತೀರಿಕೊಂಡಾಗ ಮೈಸೂರಿನ ಉದಯರವಿಗೆ ಬಂದು ಅನೇಕ ಶ್ರಮಿಕ ವರ್ಗದವರು ಸಾಲಿನಲ್ಲಿ ನಿಂತಿರುವುದನ್ನು ಗಮನಿಸಿದ ತೇಜಸ್ವಿ ಈ ನಗರಸಭೆಯಲ್ಲಿ ಕೆಲಸ ಮಾಡುವ ಇವರಿಗೆಲ್ಲ ಕುವೆಂಪು ಅವರು ಹೇಗೆ ಪರಿಚಯ ಎಂದು ವಿಚಾರಿಸಿದರೆ ಇವರು ನಮ್ಮ ಬಗ್ಗೆ ಬರೆದಿದ್ದಾರಂತಲ್ಲ ಎಂದು ಜಲಗಾರ ನಾಟಕದ ಬಗ್ಗೆ ತಿಳಿಸುತ್ತಾರೆ. ಹೀಗಾಗಿ ಕುವೆಂಪುರವರು ಶ್ರೀಸಾಮಾನ್ಯನ ಕವಿಯಾಗಿ, ಸಾಹಿತಿಯಾಗಿ ಹೊರಹೊಮ್ಮಿದ್ದಾರೆ ಎಂದು ತಿಳಿಸಿದರು.

ಕುವೆಂಪುರವರು ಎಲ್ಲಾ ಧರ್ಮದ ಪುರೋಹಿತರ ವಿರುದ್ಧವಾಗಿದ್ದಕ್ಕೆ ಮತ್ತು ಎಲ್ಲಾ ಧರ್ಮದ ಮೌಢ್ಯತೆಯನ್ನು ವಿರೋಧಿಸಿದ್ದಕ್ಕೆ ಆ ಕಾಲದ ಅವರ ಗೆಳೆಯರ ಗುಂಪಿನ ಏಕಾಂಗಿಯಾಗಿದ್ದರು ಎಂದು ತಿಳಿಸಿದರು.

ಗ್ರಾಮ ಭಾರತ ಸಾಂಸ್ಕøತಿಕ ವೇದಿಕೆಯ ಸಂಚಾಲಕರಾದ ಎಸ್.ಜಿ.ರಾಜಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿ,ಸಮಕಾಲೀನ ಜಗತ್ತಿನ ಎಲ್ಲಾ ತಲ್ಲಣಗಳ ಪರಿಹಾರಕ್ಕೆ ಕುವೆಂಪು ಸಾಹಿತ್ಯ ಉತ್ತರವನ್ನು ನೀಡುತ್ತದೆ. ಹೀಗಾಗಿ ಇಂದಿನ ಯುವಕರಿಗೆ ಕುವೆಂಪು ಅವರ ಸಾಹಿತ್ಯವನ್ನು ಓದಿಸಬೇಕಾಗಿದೆ ಎಂದು ತಿಳಿಸಿದರು.

Facebook Comments