ವೃದ್ಧಾಪ್ಯ ವೇತನ ಪಡೆಯಲು ಆಧಾರ್ ಕಡ್ಡಾಯ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಸೆ.11- ಮಿನಿ ವಿಧಾನಸೌಧವು ಬಡ ಜನರ ಕಷ್ಟ-ಸುಖಗಳಿಗೆ ಸ್ಪಂದಿಸುವಂತಹ ಸೌಧವಾಗಬೇಕು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು. ಶಿರಾ ತಾಲೂಕಿನಲ್ಲಿ ನೂತನ ಮಿನಿ ವಿಧಾನಸೌಧ ಉದ್ಘಾಟಿಸಿ ಮಾತನಾಡಿದ ಅವರು, ಶಿರಾ ತಾಲೂಕಿನಲ್ಲಿ ಸುಮಾರು 11 ಎಕರೆ ಜಾಗದಲ್ಲಿ ಸುಮಾರು 9.85 ಕೋಟಿ ರೂ.ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲಾಗಿದೆ.

ಜನರ ಸೇವೆ ಮಾಡದೇ ದರ್ಪ ತೋರುವ ಅಧಿಕಾರಿಗಳನ್ನು ಮುಲಾಜಿಲ್ಲದೆ ಅಮಾನತುಗೊಳಿಸಲಾಗುವುದು. ಸರ್ಕಾರದ ಕೆಲಸ ದೇವರ ಕೆಲಸವಿದ್ದಂತೆ. ಬಡ ಜನರ ಕಷ್ಟಗಳಿಗೆ ಸ್ಪಂದಿಸಿ, ಜನರು ಅನಾವಶ್ಯಕವಾಗಿ ಓಡಾಡುವುದನ್ನು ತಪ್ಪಿಸುವುದೇ ನಮ್ಮ ಉದ್ದೇಶ ಎಂದು ಅವರು ತಿಳಿಸಿದರು.

ಇನ್ನು ಮುಂದೆ ವೃದ್ಧಾಪ್ಯ ವೇತನ ಪಡೆಯಲು ಅನುಕೂಲವಾಗುವಂತೆ ನೂತನ ಯೋಜನೆಯನ್ನು ಜಾರಿಗೊಳಿಸಲಾಗುವುದು. 60 ವರ್ಷ ಪೂರ್ಣಗೊಂಡ ವೃದ್ಧ/ವೃದ್ಧೆಯ ಆಧಾರ್ ಕಾರ್ಡ್ ದಾಖಲೆಯ ಮೇಲೆ 60 ವರ್ಷ ತುಂಬಿದ ಬಗ್ಗೆ ಆಯಾ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಬೇಕು. ವೃದ್ಧ/ವೃದ್ಧೆಯರಿಗೆ ವೃದ್ಧಾಪ್ಯ ವೇತನ ಪಡೆಯಲು ಅಗತ್ಯವಿರುವ ದಾಖಲಾತಿಗಳು ನಮ್ಮ ಬಳಿಯಲ್ಲಿಯೇ ಇರುತ್ತವೆ ಎಂದರು.

ಈ ಯೋಜನೆಯು ಈಗಾಗಲೇ ಬಳ್ಳಾರಿ ಹಾಗೂ ಉಡುಪಿ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದ್ದು, ಸುಮಾರು 10 ಸಾವಿರ ಜನರನ್ನು ಗುರುತಿಸಿ ವೃದ್ಧಾಪ್ಯ ವೇತನ ನೀಡಿದ್ದಾರೆ. ಈ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ಅವರು ತಿಳಿಸಿದರು.

# ಬ್ಯಾಂಕ್ ಖಾತೆಗೆ ಹಣ:
ರಾಜ್ಯ ಸರ್ಕಾರ ಪ್ರತಿ ವರ್ಷ ವೃದ್ಧಾಪ್ಯ ವೇತನ ನೀಡಲು 7 ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿದೆ. ಕೆಲವು ಕಡೆ ನಕಲಿ ದಾಖಲೆ ಸೃಷ್ಠಿಸಿ ವೃದ್ಧಾಪ್ಯ ವೇತನ ಪಡೆಯುತ್ತಿದ್ದರು ಅಂತಹ ಬೋಗಸ್ ಖಾತೆಗಳನ್ನು ರದ್ದುಗೊಳಿಸಲಾಗುವುದು.

ಇದರಿಂದ 1 ಸಾವಿರ ಕೋಟಿ ಬೋಗಸ್ ಆಗಿ ಪಾವತಿಯಾಗುತ್ತಿರುವುದು ತಪ್ಪುತ್ತದೆ. ಇನ್ನು ಮುಂದೆ ಅಂಚೆ ಕಚೇರಿಗಳಿಂದ ಪಿಂಚಣಿ ಸೌಲಭ್ಯ ನೀಡಲಾಗುವುದಿಲ್ಲ ಮುಂದಿನ 3 ತಿಂಗಳೊಳಗಾಗಿ ಪಿಂಚಣಿದಾರರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲಾಗುವುದು ಎಂದು ಅವರು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ಮಾತನಾಡಿ, ಜನರ ಪಿಂಚಣಿ ಸಮಸ್ಯೆಗಳಿಗೆ ಸ್ಪಂದಿಸಿ ಕೂಡಲೇ ವ್ಯವಸ್ಥಿತವಾದ ಕ್ರಮ ತೆಗೆದುಕೊಳ್ಳಬೇಕು. ಮಿನಿ ವಿಧಾನಸೌಧ ಉದ್ಘಾಟನೆಯಾಗಿದ್ದು, ವಾರದೊಳಗೆ ಇಲ್ಲಿಯೇ ಕೆಲಸ ಕಾರ್ಯಗಳು ಆರಂಭಗೊಳ್ಳುತ್ತವೆ. ಅಧಿಕಾರಿಗಳು ಜನರ ಸಮಸ್ಯೆಗಳನ್ನು ಆಲಿಸಿ, ಪರಿಹರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಶಿರಾ ತಾಲೂಕಿನ ಜನರು ಇದರ ಸದುಪಯೋಗಪಡೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳು ಶಿರಾ ತಾಲೂಕಿನಲ್ಲಿ ನಡೆಯಲಿವೆ ಇದಕ್ಕೆ ಇಲ್ಲಿನ ಜನರು ಸಹಕಾರ ನೀಡಬೇಕು ಎಂದು ಅವರು ತಿಳಿಸಿದರು.

ಅರಣ್ಯ ಇಲಾಖೆ ಸಚಿವ ಆನಂದ್‍ಸಿಂಗ್, ವಿಧಾನ ಪರಿಷತ್ ಶಾಸಕರಾದ ವೈ.ಎ.ನಾರಾಯಣಸ್ವಾಮಿ, ರವಿಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಡಾ. ಕೋನವಂಶಿಕೃಷ್ಣ, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ರವಿಕುಮಾರ್, ಉಪವಿಭಾಗಾಧಿಕಾರಿ ಡಾ.ಕೆ.ನಂದಿನಿದೇವಿ, ತಹಸೀಲ್ದಾರ್ ನಾಹಿದಾ ಜಂ ಜಂ ಸೇರಿದಂತೆ ಮತ್ತಿತರು ಭಾಗವಹಿಸಿದ್ದರು.

Facebook Comments