ಕನಕಪುರದ ಆಡಳಿತ ಬೆಂಗಳೂರಿಗೆ ಬೇಕೆ: ಸಚಿವ ಅಶೋಕ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.31- ರಾಜಧಾನಿ ಬೆಂಗಳೂರಿಗೆ ಕನಕಪುರ ಮಾದರಿ ಆಡಳಿತ ತರುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳುತ್ತಿದ್ದಾರೆ. ಗೂಂಡಾಗಿರಿ ಮತ್ತು ದಬ್ಬಾಳಿಕೆ ಆಡಳಿತ ಬೇಡ ಎನ್ನುವುದಾದರೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಬೇಕು ಎಂದು ಕಂದಾಯ ಸಚಿವ ಆರ್.ಅಶೋಕ್ ಕರೆ ಕೊಟ್ಟರು. ಪಕ್ಷದ ಕಚೇರಿಯಲ್ಲಿ ವಚ್ರ್ಯುಯಲ್ ರ್ಯಾಲಿಯಲ್ಲಿ ಮಾತನಾಡಿದ ಅವರು, ಆರ್‍ಆರ್‍ನಗರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ಕನಕಪುರ ಮಾದರಿ ಆಡಳಿತ ಕೊಡುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಹೇಳುತ್ತಾರೆ. ಗೂಂಡಾಗಿರಿ ಮತ್ತು ಕಾನೂನು ಬಾಹಿರ ಚಟುವಟಿಕೆಗಳು ಬೆಂಗಳೂರು ಜನತೆಗೆ ಬೇಕೆ ಎಂದು ಪ್ರಶ್ನಿಸಿದರು.

ಜಾತಿ ರಾಜಕಾರಣ ಬೆಂಗಳೂರು ಮಹಾನಗರದಲ್ಲಿ ನಡೆಯುವುದಿಲ್ಲ. ಇಲ್ಲಿನ ಜನತೆ ಅಭಿವೃದ್ಧಿ ಮತ್ತು ಜನಪರವಾದ ಆಡಳಿತಕ್ಕೆ ಮನ್ನಣೆ ಕೊಡುತ್ತಾರೆ. ಜೊತೆಗೆ ಬೆಂಗಳೂರು ಹಿಂದಿನಿಂದಲೂ ಬಿಜೆಪಿಯ ಭದ್ರಕೋಟೆಯಾಗಿದೆ. ಕನಕಪುರದ ದುರಾಡಳಿತ ಬೆಂಗಳೂರಿಗೆ ಬರಬಾರದು. ಡಿ.ಕೆ.ಶಿವಕುಮಾರ್ ನಾನೇ ಅಭ್ಯರ್ಥಿ ಎಂದು ಪ್ರಚಾರ ನಡೆಸುತ್ತಾ ಅಧಿಕೃತ ಅಭ್ಯರ್ಥಿಗೆ ಅವಮಾನ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಇಲ್ಲಿ ಜಾತಿ ಕೈ ಹಿಡಿಯುವುದಿಲ್ಲ ಎಂದು ಕಾಂಗ್ರೆಸ್‍ಗೆ ತಿರುಗೇಟು ನೀಡಿದರು.

ಜಾತಿ ಮತ್ತು ಧರ್ಮ ಒಡೆದು ಆಳುವುದು ಕಾಂಗ್ರೆಸ್‍ನ ಹುಟ್ಟುಗುಣ. ಸೋಲು ಖಚಿತವಾದಂತೆ ಜಾತಿ, ಜಾತಿಗಳ ನಡುವೆ ಸಂಘರ್ಷ ಹಚ್ಚುತ್ತಾರೆ. ಇದಕ್ಕೆ ಯಾರೊಬ್ಬರೂ ಅವಕಾಶ ಕೊಡಬಾರದೆಂದು ಮನವಿ ಮಾಡಿದರು.

Facebook Comments