ಸರ್ಕಾರಿ ಜಾಗ ಒತ್ತುವರಿ ತೆರವಿಗೆ ಕ್ರಮ : ಸಚಿವ ಅಶೋಕ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.15- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಬಳಸಗೋಡು ಗ್ರಾಮದ 25 ಎಕರೆ ಸರ್ಕಾರಿ ಜಮೀನಿನಲ್ಲಿ ಖಾಸಗಿಯವರು ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿರುವುದು ಗಮನಕ್ಕೆ ಬಂದಿದ್ದು, ಈ ಯೋಜನೆಯನ್ನು ರದ್ದುಪಡಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ವಿಧಾನಸಭೆಗೆ ತಿಳಿಸಿದರು. ಪ್ರಶ್ನೋತ್ತರ ಅವಧಿಯಲ್ಲಿ ಹರತಾಳ್ ಹಾಲಪ್ಪ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಬಳಸಗೋಡು ಸರ್ವೆ ನಂ.2ರ 25 ಎಕೆರೆ ಜಮೀನಿನಲ್ಲಿ ಮೂಲಿಕ ಸಂಮೃದ್ಧಿ ಆರೋಗ್ಯ ಅಭಿವೃದ್ಧಿ ಪ್ರತಿಷ್ಠಾನ ಅವರಿಗೆ ಔಷಧಿ ಗಿಡಗಳನ್ನು ಬೆಳೆಸಬೇಕೆಂದು ನೀಡಲಾಗಿತ್ತು. ಸದರಿ ಜಮೀನಿನಲ್ಲಿ ಶುಂಠಿ ಬೆಳೆಸಿ ಹಾಗೂ ಖಾಸಗಿಯವರು ರಿಯಲ್ ಎಸ್ಟೇಟ್ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಈಗಾಗಲೇ ಪರಿಶೀಲನೆ ನಡೆಸಲಾಗುತ್ತಿದ್ದು, ವರದಿ ಬಂದ ನಂತರ ಯೋಜನೆಯನ್ನು ರದ್ದುಗೊಳಿಸಲಾಗುವುದು ಎಂದು ಹೇಳಿದರು.

ಮರಗಿಡಗಳನ್ನು ಕಡಿದು ನಾಶ ಮಾಡಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಸಾಗರ ತಾಲ್ಲೂಕಿನ ತಹಸೀಲ್ದಾರ್, ಉಪವಿಭಾಗಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಪ್ರತಿಷ್ಠಾನದವರು ಅಲ್ಲಿ ಷರತ್ತು ಉಲ್ಲಂಘಿಸಿರುವುದು ಕಂಡುಬಂದಿದೆ ಎಂದರು. ಈ ಹಿನ್ನೆಲೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ವರದಿ ನೀಡುವಂತೆ ಸೂಚನೆ ಕೊಡ ಲಾಗಿತ್ತು. ಇದೀಗ ಜಿಲ್ಲಾಧಿಕಾರಿ ಗಳ ವರದಿಯನ್ನು ನಿರೀಕ್ಷೆ ಮಾಡ ಲಾಗಿದ್ದು, ಪ್ರತಿಷ್ಠಾನದವರಿಗೆ ನೋಟಿಸ್ ಕೂಡ ಜಾರಿ ಮಾಡಲಾಗಿದೆ.

ಮೇಲ್ನೋಟಕ್ಕೆ ಮೂಲಿಕಾ ಸಮೃದ್ಧಿ ಆರೋಗ್ಯ ಅಭಿವೃದ್ಧಿ ಪ್ರತಿಷ್ಠಾನವು ಗುತ್ತಿಗೆ ಪಡೆದ ಜಮೀನನ್ನು ಮೂಲ ಉದ್ದೇಶಕ್ಕೆ ಉಪಯೋಗಿಸಲು ವಿಫಲವಾಗಿದ್ದು, ಷರತ್ತುಗಳನ್ನು ಉಲ್ಲಂಘನೆ ಮಾಡಿದೆ. ಹೀಗಾಗಿ ಯೋಜನೆಯನ್ನು ರದ್ದುಪಡಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು. ಶಾಸಕ ಮಹದೇವಪ್ಪ ಶಿವಲಿಂಗಪ್ಪ ಯಾದವಾಡ್ ಅವರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅಶೋಕ್, ಬೆಳಗಾವಿಯ ರಾಮದುರ್ಗದಲ್ಲಿ ಪ್ರವಾಹದಿಂದ ಉಂಟಾಗಿರುವ ನಷ್ಟಕ್ಕೆ ಪರಿಹಾರವನ್ನು ಎನ್‍ಡಿಆರ್‍ಎಫ್, ಎಸ್‍ಡಿಆರ್‍ಎಫ್ ನಿಯಮದ ಪ್ರಕಾರ ನೀಡಲಾಗುವುದು ಎಂದರು.

ಅತಿವೃಷ್ಟಿಯಿಂದ ಹಾಳಾಗಿರುವ ಒಂದು ಎಕರೆ ಜಮೀನಿಗೆ 15ಸಾವಿರ, ಪ್ರತಿ ಹೆಕ್ಟೇರ್‍ಗೆ 37,500 ರೂ. ಪರಿಹಾರ ನೀಡಲಾಗುವುದು. ರಾಮದುರ್ಗ ತಾಲ್ಲೂಕಿನಲ್ಲಿ ಪ್ರಸ್ತುತ 687 ಮಂದಿಗೆ ಪರಿಹಾರ ನೀಡಬೇಕಾಗಿದೆ. ತಂತ್ರಾಂಶದಲ್ಲಿ ದಾಖಲಿಸಿದ ನಂತರ ನಿಯಮಾನುಸಾರ ಪರಿಹಾರ ನೀಡುವುದಾಗಿ ಹೇಳಿದರು.

Facebook Comments