ಡಿಕೆಶಿ ಕಾಂಗ್ರೆಸ್ ಕಾರ್ಯಕರ್ತರಿಗೆ ಊಟ ಹಾಕಿಸಲಿ : ಆರ್.ಅಶೋಕ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.10-ಆರ್‍ಎಸ್‍ಎಸ್ ಬಗ್ಗೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕಂದಾಯ ಸಚಿವ ಆರ್.ಅಶೋಕ್, ಆರ್‍ಎಸ್‍ಎಸ್ ಕಾರ್ಯಕರ್ತರಿಗೆ ಊಟ ಹಾಕಿಸುವುದಾಗಿ ನೀಡಿರುವ ಹೇಳಿಕೆ ಅಹಂಕಾರದಿಂದ ಕೂಡಿದೆ ಎಂದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್‍ಎಸ್‍ಎಸ್ ಕಾರ್ಯಕರ್ತರಿಗೆ ಊಟ ಹಾಕಿಸುವುದಾಗಿ ಹೇಳಿಕೆ ನೀಡಿರುವ ಶಿವಕುಮಾರ್, ಕಾಂಗ್ರೆಸ್ ಕಾರ್ಯಕರ್ತರಿಗೆ ಊಟ ಹಾಕಿಸಲಿ ಎಂದು ತಿರುಗೇಟು ನೀಡಿದರು.

ಆರ್‍ಎಸ್‍ಎಸ್‍ನವರಿಗೆ ನೀವು ಊಟ ಹಾಕಿಸುವ ಅಗತ್ಯವಿಲ್ಲ, ಅಂತಹ ಸ್ಥಿತಿಯೂ ಬಂದಿಲ್ಲ ಎಂದು ತಿರುಗೇಟು ನೀಡಿದರು. ರಾಮನಗರ ಭಾಗದಲ್ಲಿ ಹಿಂದೂ ಚಟುವಟಿಕೆಗಳು ಹೆಚ್ಚಾಗುತ್ತಿರುವುದರಿಂದ ಅವರು ಹೆದರಿದ್ದಾರೆ.ಆರ್‍ಎಸ್‍ಎಸ್ ರಾಷ್ಟ್ರಪ್ರೇಮ ಹೊಂದಿರುವ ಹಿಂದೂ ಸಂಘಟನೆ. ಎಲ್ಲಾ ಭಾರತೀಯರು ಒಂದೇ ಎಂಬ ಸಿದ್ಧಾಂತ ಪ್ರತಿಪಾದಿಸುತ್ತದೆ. ದೇಶದಲ್ಲೆಡೆ ಸಂಘಟನೆ ಸಕ್ರಿಯವಾಗಿದ್ದು, ರಾಮನಗರದಲ್ಲಿ ನಡೆಸಿರುವ ಪಥಸಂಚಲನಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಡಿ.ಕೆ.ಶಿವಕುಮಾರ್ ಅವರು ಆರ್‍ಎಸ್‍ಎಸ್ ಬಗ್ಗೆ ಲಘುವಾಗಿ ಮಾತನಾಡಿರುವುದು ಸರಿಯಲ್ಲ ಎಂದರು.

ಮುಂದಿನ ಚುನಾವಣೆಯಲ್ಲಿ ಜನರು ಕೈ ಹಿಡಿಯಲಾರರು ಎಂಬ ಭಾವನೆಯಿಂದ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು. ಕಪಾಲಬೆಟ್ಟದಲ್ಲಿ ಯೇಸು ಕ್ರಿಸ್ತರ ಪ್ರತಿಮೆ ನಿರ್ಮಾಣದಲ್ಲಿ ಕಾನೂನು ರೀತಿ ಕ್ರಮಕೈಗೊಳ್ಳಲಾಗುವುದು. ಜಿಲ್ಲಾಡಳಿತದಿಂದ ಈ ಸಂಬಂಧ ವರದಿ ಕೇಳಲಾಗಿದೆ. ಕಪಾಲಬೆಟ್ಟದ ಬಳಿ ಒಂದೇ ಸಮುದಾಯದವರಿಗೆ ಜಮೀನು ಹಂಚಿಕೆಯಾಗಿದೆ. ಕಪಾಲಬೆಟ್ಟದಲ್ಲಿ ಮುನೇಶ್ವರ ದೇವರು ಇದೆ. ನಮಗೆ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ಇಬ್ಬರಿಗೂ ಮುನೇಶ್ವರ ದೇವರು. ಆನಂತರ ಉಳಿದವರ ವಿಚಾರ ನೋಡೋಣ ಎಂದರು.

ತೃಪ್ತಿ ತಂದಿದೆ: ಮುಖ್ಯಮಂತ್ರಿಯವರು ತಮಗೆ ನೀಡಿರುವ ಕಂದಾಯ ಖಾತೆ ತೃಪ್ತಿ ತಂದಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದ ಅಶೋಕ್ ಅವರು, ಹೆಚ್ಚುವರಿಯಾಗಿ ನೀಡಿರುವ ಪೌರಾಡಳಿತ ಖಾತೆ ಬಿಟ್ಟುಕೊಡಲು ಸಿದ್ಧವಿರುವುದಾಗಿ ತಿಳಿಸಿದರು. ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿರುವ ಪಟ್ಟಿ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದರು.

Facebook Comments