ವೃತ್ತಿಯಲ್ಲಿ ವಕೀಲ, ಪಕ್ಷದಲ್ಲಿ ಶಿಸ್ತಿನ ಸಿಪಾಯಿ, ಗಸ್ತಿಗೆ ಒಲಿದ ರಾಜ್ಯಸಭೆ ಅದೃಷ್ಟ..!

ಈ ಸುದ್ದಿಯನ್ನು ಶೇರ್ ಮಾಡಿ

ಬಳ್ಳಾರಿ, ಜೂ.10- ಬಿಜೆಪಿಯ ಕಟ್ಟಾಳು, ಆರ್‍ಎಸ್‍ಎಸ್ ಶಿಸ್ತಿನ ಸಿಪಾಯಿ, ಹಿಂದುಳಿದ ಸಮಾಜದ ನಾಯಕ ಅಶೋಕ ಗಸ್ತಿ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿರುವ ಬಿಜೆಪಿ ಚಿಂತನೆ ರಾಜ್ಯ ರಾಜಕಾರಣದ ಸ್ಥಿತ್ಯಂತರಕ್ಕೆ ಕಾರಣ ಎಂದೇ ಭಾವಿಸಲಾಗುತ್ತಿದೆ.

ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ಅಶೋಕ್ ಗಸ್ತಿ ಅವರಿಗೆ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಅವಕಾಶ ನೀಡಿರುವುದು ಈ ಭಾಗದ ಜನರಿಗೂ ಸಮಾಧಾನ ತಂದಿದೆ.

ಎಬಿವಿಪಿ, ಆರ್‍ಎಸ್‍ಎಸ್, ಬಿಜೆಪಿಯಲ್ಲಿ ಶ್ರಮಿಸಿದ ಅಶೋಕ ಗಸ್ತಿ ಈಗ ರಾಯಚೂರು, ಬಳ್ಳಾರಿ, ಕೊಪ್ಪಳ ಜಿಲ್ಲಾಗಳ ಬಿಜೆಪಿ ಪ್ರಭಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಿಂದೆ ಎರಡು ಬಾರಿ ರಾಯಚೂರು ನಗರ ಕ್ಷೇತ್ರದ ಟಿಕೆಟ್‍ಗೆ ಯತ್ನಿಸಿದ್ದರೂ ಫಲಕಾರಿಯಾಗಿರಲಿಲ್ಲ.

ಇದೀಗ ಅವರ ನಿರೀಕ್ಷೆಗಿಂತ ದೊಡ್ಡ ಸ್ಥಾನವೇ ಒಲಿದು ಬಂದಿದೆ. ಕಲ್ಯಾಣ ಕರ್ನಾಟಕದಿಂದ ಹಿಂದುಳಿದ ಸಮಾಜದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿರುವುದರಿಂದ ಬಿಜೆಪಿಯಲ್ಲೂ ಹಿಂದುಳಿದ ಸಮಾಜಕ್ಕೆ ಸೇರಿದ ಗಸ್ತಿ ಅವರಿಗೆ ಟಿಕೆಟ್ ನೀಡುವ ಮೂಲಕ ಕಾಂಗ್ರೆಸ್‍ಗೆ ಬಿಜೆಪಿ ಟಾಂಗ್ ನೀಡಿದೆ.

ಹೋರಾಟದ ಹಿನ್ನೆಲೆ: ಕಾಲೇಜು ಜೀವನದಲ್ಲೇ ಸಂಘಟನೆ ಹೋರಾಟದ ಹಾದಿ ಹಿಡಿದು ಸಂಘ-ಪರಿವಾರದಲ್ಲಿ ಗುರುತಿಸಿಕೊಂಡು ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಗಸ್ತಿ ಅವರು 1983ರಲ್ಲಿ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಬಿಜೆಪಿಯಲ್ಲಿ ಗುರುತಿಸಿಕೊಂಡರು. ಹಂತ ಹಂತವಾಗಿ ಬಿಜೆಪಿ ಸಂಘಟನೆಯಲ್ಲಿ ತೊಡಗಿದರು. ಅವರ ಸುದೀರ್ಘ ಅನುಭವ, ಪಕ್ಷ ನಿಷ್ಠೆ ಹಾಗೂ ಕಳಂಕ ರಹಿತ ರಾಜಕೀಯ ಹಿನ್ನೆಲೆಯೇ ಅವರಿಗೆ ಈ ಅವಕಾಶ ದೊರೆತಿದೆ.

ಸ್ಥಾನಮಾನಗಳು: 1990ರಲ್ಲಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿ ಆಯ್ಕೆಯಾದರು. 1993-94ರಲ್ಲಿ ಬಿಜೆಪಿ ಜಿಲ್ಲಾ ಘಟಕದ ಕಾರ್ಯದರ್ಶಿಯಾಗಿ, 2001ರಲ್ಲಿ ರಾಯಚೂರು ನಗರಸಭೆ ಸದಸ್ಯರಾಗಿ ಆಯ್ಕೆಯಾಗಿದ್ದರು. 2010ರಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾಗಿಯೂ ಪಕ್ಷಕ್ಕಾಗಿ ದುಡಿದಿದ್ದಾರೆ.

ಕುಟುಂಬಕ್ಕಿಂತ ಪಕ್ಷ ಮುಖ್ಯ: ರಾಜಕೀಯದೊಂದಿಗೆ ವಕೀಲ ವೃತ್ತಿಯಲ್ಲೂ ತೊಡಗಿಸಿಕೊಂಡಿರುವ ಗಸ್ತಿ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ. ಆದರೂ ಗಸ್ತಿ ಅವರು ಕುಟುಂಬಕ್ಕಿಂತ ಪಕ್ಷ ಮುಖ್ಯ ಎಂಬ ಧೋರಣೆಗೆ ಬದ್ಧರಾಗಿದ್ದಾರೆ.

Facebook Comments