ಮೋದಿ ಸಮಸ್ಯೆಗಳ ನಿವಾರಣೆಯ ಬಗ್ಗೆ ಮಾತನಾಡಲಿ : ಅಶೋಕ್ ಗೆಲ್ಹೋಟ್
ಜೈಪುರ,ಜೂ.19- ಪ್ರಧಾನಿ ನರೇಂದ್ರ ಮೋದಿ ಅವರು ಕೋವಿಡ್ ನಿಯಂತ್ರಣಕ್ಕೆ ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಮಾತನಾಡುವ ಬದಲು, ಕೇಂದ್ರ ಮತ್ತು ರಾಜ್ಯಗಳಿಗಿರುವ ಮಿತಿಗಳು ಮತ್ತು ಅದರ ಸಮಸ್ಯೆ ನಿವಾರಣೆಯ ಬಗ್ಗೆ ಮಾತನಾಡಲಿ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಲ್ಹೋಟ್ ಹೇಳಿದರು.
ಇತ್ತೀಚೆಗೆ ನಡೆದ ನರೇಂದ್ರ ಮೋದಿಯವರ ವಿಡಿಯೋ ಕಾನ್ಫರೆನ್ಸ್ ಬಗ್ಗೆ ಟ್ವೀಟ್ನಲ್ಲಿ ಪ್ರತಿಕ್ರಿಯಿಸಿದ ಅವರು, ವಿಡಿಯೋ ಸಮ್ಮೇಳನದಲ್ಲಿ ಕೇಂದ್ರ ಮತ್ತು ರಾಜ್ಯ ಎದುರಿಸುತ್ತಿರುವ ಸವಾಲುಗಳು ಮತ್ತು ಮಿತಿಗಳ ಬಗ್ಗೆ ಚರ್ಚಿಸಿಯೇ ಇಲ್ಲ ಎಂದು ಟ್ವೀಟ್ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎಲ್ಲಾ ರಾಜ್ಯಗಳು ಈಗ ಕೋವಿಡ್ -19ನ್ನು ಎದುರಿಸಲು ಈಗಾಗಲೇ ತಿಳಿದುಕೊಂಡಿವೆ. ಪ್ರಧಾನಿಯವರ ವಿಡಿಯೋ ಕಾನ್ಫರೆನ್ಸ್ನಲ್ಲಿ ಕೇಂದ್ರ ಮತ್ತು ರಾಜ್ಯದ ಸವಾಲುಗಳು ಮತ್ತು ಮಿತಿಗಳ ಬಗ್ಗೆ ಚರ್ಚಿಸಿಲ್ಲ. ಲಾಕ್ಡೌನ್ ನಂತರದಲ್ಲಿ ಎದುರಿಸುತ್ತಿರುವ ಸಂಕಷ್ಟಗಳನ್ನು ನಿವಾರಿಸಲು ಕೇಂದ್ರ ಹೇಗೆ ನೆರವಾಗಿದೆ ಎಂಬ ಬಗ್ಗೆ ಮಾತ್ರ ಚರ್ಚಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಎಲ್ಲಾ ರಾಜ್ಯಗಳು ಕೊರೊನಾ ವಿರುದ್ಧ ಹೋರಾಟಕ್ಕೆ ಹೆಚ್ಚು ಖರ್ಚು ಮಾಡಿರುವುದರಿಂದ ಕೇಂದ್ರವು ಹೆಚ್ಚುವರಿ ಬೆಂಬಲ ನೀಡಬೇಕು. ರಾಜ್ಯಗಳಲ್ಲಿನ ಆದಾಯದ ರಶೀದಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಕಾರಣ, ಕೇಂದ್ರೀಯ ಪ್ರಾಯೋಜಿತ ಯೋಜನೆಗಳ ಕಾರ್ಯಾಚರಣೆಗಾಗಿ ಭಾರತ ಸರ್ಕಾರವು 2020-21ರ ಆರ್ಥಿಕ ವರ್ಷದಲ್ಲಿ ಶೇ 100ರಷ್ಟು ಕೊಡುಗೆ ನೀಡಬೇಕು ಎಂದು ಒತ್ತಡ ಹೇರಿದ್ದಾರೆ.
ಆರ್ಥಿಕ (2019-20ರ )ಹಣಕಾಸು ವರ್ಷದಲ್ಲಿ ಬಾಕಿ ಇರುವ ಸುಮಾರು 961 ಕೋಟಿ ರೂ.ಗಳ ಜಿಎಸ್ಟಿ ಪರಿಹಾರವನ್ನು ಶೀಘ್ರದಲ್ಲೇ ಪಾವತಿ ಮಾಡಬೇಕು ಮತ್ತು ಲಾಕ್ಡೌನ್ ಅವಧಿಗೆ 4,500 ಕೋಟಿ ರೂ. ಬಿಡುಗಡೆ ಮಾಡಬೇಕೆಂದು ಗೆಲ್ಹೋಟ್ ಒತ್ತಾಯಿಸಿದ್ದಾರೆ.