ರಾಜಸ್ಥಾನದಲ್ಲಿ ಸಿಎಂ ಗೆಹ್ಲೋಟ್ ಹೊಸ ಪ್ಲಾನ್, ವಿಧಾನಮಂಡಲ ಅಧಿವೇಶನಕ್ಕೆ ಸಿದ್ಧತೆ

ಈ ಸುದ್ದಿಯನ್ನು ಶೇರ್ ಮಾಡಿ

ಜೈಪುರ, ಜು.19- ಕಾಂಗ್ರೆಸ್ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ಪ್ರಾದೇಶಿಕ ಪಕ್ಷದ ಇಬ್ಬರು ಶಾಸಕರು ಹಿಂತೆಗೆದುಕೊಂಡ ನಡುವೆಯೇ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ರಾಜ್ಯಪಾಲ ಕಲ್‍ರಾಜ್ ಮಿಶ್ರ ಅವರನ್ನು ಭೇಟಿ ಮಾಡಿ ಸುಮಾರು 45 ನಿಮಿಷಗಳ ಕಾಲ ಚರ್ಚೆ ನಡೆಸಿದ್ದು ಕುತೂಹಲ ಕೆರಳಿಸಿದೆ.

ಇದು ಸೌಜನ್ಯದ ಸಭೆ. ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ಧ ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಮುಖ್ಯಮಂತ್ರಿ ರಾಜ್ಯಪಾಲರಿಗೆ ಮಾಹಿತಿ ನೀಡಿದ್ದಾರೆ ಎಂದು ರಾಜಭವನದ ಪ್ರಕಟಣೆ ತಿಳಿಸಿದ್ದರೂ ಇದು ಸರ್ಕಾರ ಉಳಿಸಿಕೊಳ್ಳಲು ಹೊಸ ಪ್ರಯತ್ನ ಎಂದು ವಿಶ್ಲೇಷಿಸಲಾಗುತ್ತಿದೆ.

ಪ್ರಸ್ತುತ ನಾನು 109 ಶಾಸಕರನ್ನು ಹೊಂದಿದ್ದಾರೆ ಎಂದು ಗೆಹ್ಲೋಟ್ ಹೇಳುತ್ತಿದ್ದರೂ ಅದು ಅಷ್ಟು ಸುಲಭವಲ್ಲ. ವಿಧಾನಮಂಡಲದಲ್ಲೇ ಬಹುಮತ ಸಾಬೀತುಪಡಿಸಬೇಕಿದೆ. ಇದಕ್ಕಾಗಿ ರಣತಂತ್ರ ಹೆಣೆಯಲಾಗುತ್ತಿದ್ದು, ಸದ್ಯದಲ್ಲೇ ವಿಧಾನಮಂಡಲ ಅಧಿವೇಶನ ಕರೆಯುವ ಸಾಧ್ಯತೆ ಇದೆ.

ಅತ್ತ ಸಚಿನ್ ಪೈಲೆಟ್ ಕೂಡ ಕಾನೂನು ಅಸ್ತ್ರವನ್ನು ಬಳಸುತ್ತಿದ್ದು, ಗೆಹ್ಲೋಟ್‍ಗೆ ತಿರುಗೇಟು ನೀಡಲು ತನ್ನದೇ ಆದ ವ್ಯೂಹ ರಚಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಗೆಹ್ಲೋಟ್ ಕೂಡ ಸದನ ಕರೆದು ಅಲ್ಲಿ ವ್ಹಿಪ್ ಜಾರಿ ಮಾಡಿ ಭಿನ್ನಮತೀಯರಿಗೆ ಅನರ್ಹತೆಯ ಅಸ್ತ್ರ ಪ್ರಯೋಗಿಸಲು ಪ್ರತಿತಂತ್ರ ಹೆಣೆದಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ನಡೆದಂತಹ ರಾಜಕೀಯ ಬೆಳವಣಿಗೆಗಳನ್ನು ಆಧರಿಸಿ ಕಾಂಗ್ರೆಸ್ ಹೈಕಮಾಂಡ್ ಈಗ ಎಚ್ಚರಿಕೆಯ ಹೆಜ್ಜೆಯನ್ನಿಟ್ಟಿದ್ದು ಗೆಹ್ಲೋಟ್ ಬೆನ್ನಿಗೆ ನಿಂತಿದೆ. ಇದು ಯಾವ ಹಂತಕ್ಕೆ ತಲುಪುತ್ತದೆ ಎಂಬುದನ್ನು ಕಾಲವೇ ನಿರ್ಧರಿಸಬೇಕಿದ್ದರೂ ಕೂಡ ಬುಧವಾರದಿಂದ ಪ್ರಕ್ರಿಯೆ ಚುರುಕುಗೊಳ್ಳುವುದು ನಿಶ್ಚಿತವಾಗಿದೆ.

ಇನ್ನೊಂದೆಡೆ ನ್ಯಾಯಾಲಯ ಮಂಗಳವಾರದವರೆಗೂ ಸಚಿನ್ ಪೈಲೆಟ್ ಹಾಗೂ ಇತರ ಶಾಸಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದೆಂದು ಸ್ಪೀಕರ್‍ಗೆ ಸೂಚನೆ ನೀಡಿರುವುದು ಕೂಡ ಮಹತ್ವ ಪಡೆದುಕೊಂಡಿದೆ.

Facebook Comments

Sri Raghav

Admin