ಸಾರಿಗೆ ಸಂಸ್ಥೆ ಮುಳುಗುತ್ತಿರುವ ಹಡಗು, ಇನ್ನಷ್ಟು ರಂಧ್ರ ಮಾಡಿ ಮುಳುಗಿಸಬೇಡಿ : ಸಚಿವ ಅಶೋಕ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಳ್ತಂಗಡಿ, ಏ.10- ಸಾರಿಗೆ ಸಂಸ್ಥೆಗಳು ಮುಳುತ್ತಿರುವ ಹಡಗಿನಂತಾಗಿ ನಷ್ಟದಲ್ಲಿದೆ. ಮುಳುಗುತ್ತಿರುವ ಸಂಸ್ಥೆಯನ್ನು ಎತ್ತಿ ಹಿಡಿಯಬೇಕಾದವರೇ ಮುಷ್ಕರ ಮಾಡುತ್ತಿರುವುದು ಸರಿಯಲ್ಲ. ಇದು ಮುಳುಗಿದರೆ ಅದರ ಅಪಕೀರ್ತಿ ಮುಷ್ಕರದಲ್ಲಿ ನಿರತರಾಗಿದ್ದಾರೋ ಅವರಿಗೆ ಬರುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೊಟೇಲ್‍ಗಳು, ಕಾರ್ಖಾನೆಗಳು, ಮಾರ್ಕೆಟ್‍ಗಳು ಮುಚ್ಚೋಗ್ತಿದೆ. ನಡಿತಾ ಇಲ್ಲ. ಅದರ ನಡುವೆ ಎಲ್ಲರಿಗೂ ಸಂಬಳ ಕಡಿತವಾಗಿದೆ. ಇವರು ಸಂಬಳ ಮಾತ್ರ ಜಾಸ್ತಿ ಮಾಡಿ ಅಂತ ಮುಷ್ಕರ ಮಾಡುತ್ತಿದ್ದಾರೆ. ಇದು ನ್ಯಾಯನಾ, ಧರ್ಮನಾ ಎಂದು ಪ್ರಶ್ನಿಸಿದರು.

ನಾನು ಕೂಡಾ ಸಾರಿಗೆ ಸಚಿವನಾಗಿ ಕೆಲಸ ಮಾಡಿದವ. ಅದರ ಕಷ್ಟ ನನಗೆ ಗೊತ್ತಿದೆ. ಸುಖ ಬಂದಾಗ ಎಲ್ಲರೂ ಹಂಚಿ ತಿನ್ನೋಣ. ಈಗ ಕಷ್ಟ ಬಂದಿದೆ. ಸಂಬಳ ಕೊಡಲಿಕ್ಕಾಗದೆ ಬಹಳಷ್ಟು ರಾಜ್ಯಗಳು ಅಲ್ಲಿನ ಕಾರ್ಮಿಕರಿಗೆ ಶೇ. 60 ಸಂಬಳ ಕೊಡುತ್ತಿದೆ. ಆದರೆ ನಮ್ಮ ಸರಕಾರ ಎಲ್ಲಾ ಕಾರ್ಮಿಕರಿಗೂ ಪೂರ್ತಿ ಸಂಬಳ ಕೊಟ್ಟ ಮೇಲು, ಸಾರಿಗೆ ನೌಕರರು ಲಾಕ್ ಡೌನ್ ಸಮಯ ಕೆಲಸಕ್ಕೆ ಬಾರದೆ ಇದ್ದರೂ ಕೂಡಾ ಸಂಬಳ ಕೊಟ್ಟಿದ್ದೇವೆ. ಇಂತಹ ಸಂದರ್ಭದಲ್ಲಿ ಸರಕಾರ ಇರೋ ಬರೋದ್ರಲ್ಲಿ ಸಾಲ ಮಾಡಿ ಸಂಬಳ ಕೊಡ್ತಾ ಇದ್ರೂ ಕೂಡಾ ಮುಷ್ಕರ ಮಾಡುತ್ತಿರುವುದು ಅವರಿಗೆ ಶೋಭೆಯಲ್ಲ.

ಸಾರಿಗೆ ನೌಕರರು ಜಿದ್ದಿಗೆ ಬಿದ್ದು ಯಾರೋದೋ ಮಾತನ್ನು ಕೇಳಿಕೊಂಡು ಈ ಸಂಸ್ಥೆಯನ್ನು ಹಾಳು ಮಾಡಬೇಡಿ, ಈಗಾಗಲೇ ನಷ್ಟದಲ್ಲಿ ಮುಳುಗುತ್ತಿದೆ. ನೀವು ಮತ್ತೆ ಅದಕ್ಕೆ ರಂಧ್ರ ತೋಡಿ ಹಡಗನ್ನು ಇನ್ನಷ್ಟು ಮುಳುಗಿಸಬೇಡಿ. ಕಷ್ಟದಲ್ಲಿರುವ ಸಂಸ್ಥೆ ಮುಳುಗಿಸಬೇಡಿ, ಯಾರು ಮುಷ್ಕರ ಮಾಡುತ್ತಾರೋ ಅವರೆ ಕಾರಣ ಅಗುತ್ತಾರೆ ಹೊರತು ಸರಕಾರ ಕಾರಣ ಅಲ್ಲ ಎಂದರು.

Facebook Comments