ಜಿಲ್ಲಾ ಉಸ್ತುವಾರಿ ಹಂಚಿಕೆ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ : ಆರ್.ಅಶೋಕ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.17-ಜಿಲ್ಲಾ ಉಸ್ತುವಾರಿ ಹಂಚಿಕೆ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬವನ್ನು ಕಬ್ಬನ್ ಪಾರ್ಕ್‍ನಲ್ಲಿಂದು ಸಸಿ ನೆಟ್ಟು ಹಾಗೂ ಸಾರ್ವಜನಿಕರಿಗೆ ಸಸಿ ವಿತರಿಸುವ ಮೂಲಕ ಆಚರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೇ ಜಿಲ್ಲೆ ಬೇಕು, ಅದೇ ಜಿಲ್ಲೆ ಬೇಕು ಎಂದು ಗೊಂದಲ ಮಾಡುವ ವಿಚಾರವಲ್ಲ.

ಜಿಲ್ಲಾ ಉಸ್ತುವಾರಿ ಎಂಬುದು ಮಂತ್ರಿ ಪದವಿಯಲ್ಲ. ಈ ಹಿಂದೆಯೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ. ಕೆಲಸ ಮಾಡುವವರಿಗೆ ಇಲ್ಲಾದರೇನು, ಅಲ್ಲಾದರೇನು ಎಂದು ಹೇಳಿದರು. ಜಿಲ್ಲಾ ಉಸ್ತುವಾರಿ ಪ್ರಮುಖ ಸ್ಥಾನವಲ್ಲ. ಅದು ಮಂತ್ರಿ ಪದವಿಯೂ ಅಲ್ಲ ಎಂದು ಹೇಳಿದ ಅವರು, ಬೆಂಗಳೂರು ಉಸ್ತುವಾರಿಯನ್ನು ಮುಖ್ಯಮಂತ್ರಿಗಳೇ ಉಳಿಸಿಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಲಿಲ್ಲ.

ಕಾರ್ಯತಂತ್ರ: ಬೃಹತ್ ಬೆಂಗಳೂರು ಮೇಯರ್ ಸ್ಥಾನದ ಚುನಾವಣೆಗೆ ಸಂಬಂಧಪಟ್ಟಂತೆ ಈಗಾಗಲೇ ಕಾರ್ಯತಂತ್ರ ರೂಪಿಸಲಾಗಿದೆ. ಬಿಜೆಪಿಯಲ್ಲಿ ಇಂತಹ ಸಮುದಾಯಕ್ಕೆ ಮೇಯರ್ ಸ್ಥಾನ ಕೊಡಬೇಕೆಂಬ ಬೇಡಿಕೆ ಇಲ್ಲ. ಮೇಯರ್ ಚುನಾವಣೆ ಸಂಬಂಧ ಈಗಾಗಲೇ ಮುಖ್ಯಮಂತ್ರಿಯವರ ಜೊತೆ ಚರ್ಚೆ ಮಾಡಿದ್ದು, ಚುನಾವಣೆಯಲ್ಲಿ ಗೆಲುವು ಸಾಧಿಸಲು ಯಾವ ಕಾರ್ಯತಂತ್ರ ಬೇಕೋ ಅದನ್ನು ಮಾಡಿದ್ದೇವೆ. ಬೆಂಗಳೂರು ಉಸ್ತುವಾರಿ ಮುಖ್ಯಮಂತ್ರಿಯವರ ಬಳಿಯೇ ಇರುವುದರಿಂದ ಅವರೇ ನಿರ್ಧಾರ ಮಾಡುತ್ತಾರೆ ಎಂದು ಹೇಳಿದರು.

Facebook Comments