ದಿಢೀರ್ ದೆಹಲಿಗೆ ಹಾರಿದ ಡಿಸಿಎಂ, ರಾಜ್ಯ ಬಿಜೆಪಿಯಲ್ಲಿ ಮೂಡಿದ ಕುತೂಹಲ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.13- ದಿಢೀರ್ ಬೆಳವಣಿಗೆಯಲ್ಲಿ ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ವರಿಷ್ಠರ ಸೂಚನೆಯಂತೆ ದೆಹಲಿಗೆ ತೆರಳಿರುವುದು ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ವರಿಷ್ಠರ ಸೂಚನೆಯಂತೆ ಇಂದು ಬೆಳಗ್ಗೆ ನವದೆಹಲಿಗೆ ತೆರಳಿರುವ ಅವರು ಎರಡು ದಿನಗಳ ಕಾಲ ರಾಷ್ಟ್ರ ರಾಜಧಾನಿಯಲ್ಲೇ ಉಳಿಯಲಿದ್ದು, ಪಕ್ಷದ ಕೆಲವು ನಾಯಕರನ್ನು ಭೇಟಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ.

ಯಾವ ಕಾರಣಕ್ಕಾಗಿ ಅವರು ದೆಹಲಿಗೆ ತೆರಳಿದ್ದಾರೆ ಎಂಬುದು ಖಚಿತಪಟ್ಟಿಲ್ಲ. ಮೂಲಗಳ ಪ್ರಕಾರ ಪಕ್ಷದ ನಾಯಕರ ಸೂಚನೆ ಮೇರೆಗೆ ಅವರು ಹೋಗಿದ್ದಾರೆ ಎನ್ನಲಾಗಿದೆ. ಒಂದೆಡೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಾಯಕತ್ವ ಬದಲವಣೆ ಬಗ್ಗೆ ಕೇಳಿಬರುತ್ತಿರುವ ಅಪಸ್ವರಗಳು, ಮತ್ತೊಂದೆಡೆ ವಿವಿಧ ಸಮುದಾಯಗಳು ಮೀಸಲಾತಿ ಹೆಚ್ಚಳ ಮಾಡುವುದು, ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆ ಮಾಡಬೇಕೆಂದು ಪ್ರತಿಭಟನೆ, ಹೋರಾಟ, ಪಾದಯಾತ್ರೆ ಹಮ್ಮಿಕೊಂಡಿದೆ.

ಈ ನಡುವೆ ರಾಜ್ಯದ ಮಸ್ಕಿ, ಬಸವ ಕಲ್ಯಾಣ, ಸಿಂದನೂರು ವಿಧಾನಸಭಾ ಕ್ಷೇತ್ರ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಕೇಂದ್ರ ಚುನಾವಣಾ ಆಯೋಗ ಯಾವುದೇ ಸಂದರ್ಭದಲ್ಲಿ ದಿನಾಂಕವನ್ನು ಘೋಷಣೆ ಮಾಡಬಹುದು. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅಶ್ವತ್ಥನಾರಾಯಣ ಅವರನ್ನು ವರಿಷ್ಠರು ಕರೆಸಿಕೊಂಡಿರಬಹುದೆ ಎಂಬ ಪ್ರಶ್ನೆ ಎದುರಾಗಿದೆ. ಸಾಮಾನ್ಯವಾಗಿ ಆರ್‍ಎಸ್‍ಎಸ್ ಹಿನ್ನೆಲೆ ಹಾಗೂ ಸಂಘ ಪರಿವಾರಕ್ಕೆ ನಿಷ್ಟರಾಗಿರುವವರಿಂದ ಮಾತ್ರ ಆಯಾ ರಾಜ್ಯದ ಬೆಳವಣಿಗೆಗಳ ಕುರಿತಂತೆ ಕೇಂದ್ರ ನಾಯಕರು ಗೌಪ್ಯವಾಗಿ ಮಾಹಿತಿ ಪಡೆಯುವುದು ಸರ್ವೆ ಸಾಮಾನ್ಯ.

ರಾಷ್ಟ್ರಮಟ್ಟದಲ್ಲಿ ಪ್ರಭಾವಿಯಾಗಿರುವ, ರಾಜ್ಯವನ್ನು ಪ್ರತಿನಿಧಿಸುತ್ತಿರುವ ನಾಯಕರೊಬ್ಬರು ಇಲ್ಲಿನ ಇಂಚಿಂಚು ಮಾಹಿತಿಯನ್ನು ವರಿಷ್ಠರಿಗೆ ತಲುಪಿಸುತ್ತಿದ್ದರು. ಇದೀಗ ಅಶ್ವತ್ಥನಾರಾಯಣ ಅವರಿಗೆ ದೆಹಲಿಗೆ ಬರುವಂತೆ ಬುಲಾವ್ ನೀಡಿರುವುದು ಬಿಜೆಪಿಯಲ್ಲಿ ಹೊಸ ಬೆಳವಣಿಗೆಯಾಗಿದೆ. ಯಾರಿಗೂ ಕೂಡ ಮಾಹಿತಿ ನೀಡದಂತೆ ಅಶ್ವತ್ಥನಾರಾಯಣ ಬೆಳಗ್ಗೆ ದೆಹಲಿಗೆ ತೆರಳಿದ್ದಾರೆ. ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಅವರು ವರಿಷ್ಠರ ಜತೆ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

ಕೇರಳ ರಾಜ್ಯದ ಸಹ ಉಸ್ತುವಾರಿಯಾಗಿರುವ ಅಶ್ವತ್ಥನಾರಾಯಣ ಅವರು, ಪಕ್ಷ ಸಂಘಟನೆ ಬಗ್ಗೆಯೂ ಮಾಹಿತಿ ಪಡೆಯುವರು. ಜತೆಗೆ ರಕ್ಷಣಾ ಸಚಿವ ರಾಜನಾಥ್‍ಸಿಂಗ್ ಅವರನ್ನು ಭೇಟಿ ಮಾಡಿ ಇಲಾಖೆಗೆ ಸಂಬಂಧಸಿದಂತೆ ಮಾತುಕತೆ ನಡೆಸಲಿದ್ದಾರೆ.

Facebook Comments