‘ಎಸ್‌ಬಿಎಂ’ ಕೈ ತಪ್ಪಲಿದೆ ಪ್ರತಿಷ್ಠಿತ ಖಾತೆ, ಡಿಸಿಎಂ ಹೆಗಲಿಗೆ ಬೆಂಗಳೂರು ನಗರಾಭಿವೃದ್ಧಿ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.12- ಮುಂಬರುವ ಬಿಬಿಎಂಪಿ ಚುನಾವಣೆ ಹಾಗೂ ಪಕ್ಷದ ಸಂಘಟನೆಯನ್ನು ಗಮನದಲ್ಲಿಟ್ಟುಕೊಂಡು ಪ್ರತಿಷ್ಠಿತ ಬೆಂಗಳೂರು ನಗರಾಭಿವೃದ್ಧಿ ಹೊಣೆಗಾರಿಕೆಯನ್ನು ಹಾಲಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರ ಹೆಗಲಿಗೆ ಹೊರಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗಂಭೀರ ಚಿಂತನೆ ನಡೆಸಿದ್ದಾರೆ.

ಬೆಂಗಳೂರು ನಗರಾಭಿವೃದ್ಧಿ ಖಾತೆ ಮೇಲೆ ಹಲವು ಆಕಾಂಕ್ಷಿಗಳು ಕಣ್ಣಿಟ್ಟಿದ್ದು, ತಮಗೇ ನೀಡುವಂತೆ ಸಿಎಂ ಹಾಗೂ ಸಂಘಪರಿವಾರದ ನಾಯಕರ ಮೇಲೆ ಒತ್ತಡದ ತಂತ್ರ ಅನುಸರಿಸುತ್ತಿದ್ದಾರೆ. ಮುಖ್ಯವಾಗಿ ಕಂದಾಯ ಸಚಿವ ಆರ್.ಅಶೋಕ್, ನೂತನವಾಗಿ ವಿಧಾನಸಭೆಗೆ ಆಯ್ಕೆಯಾಗಿರುವ ಶಾಸಕರಾದ ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜು, ಮಾಜಿ ಶಾಸಕ ಮುನಿರತ್ನ ನಾಯ್ಡು ಸೇರಿದಂತೆ ಅನೇಕರು ಈ ಖಾತೆ ಮೇಲೆ ಕಣ್ಣಿಟ್ಟಿದ್ದಾರೆ.

ಆದರೆ, ಮುಖ್ಯಮಂತ್ರಿ ಯಡಿಯೂರಪ್ಪನವರು ಡಿಸಿಎಂ ಅಶ್ವತ್ಥನಾರಾಯಣ್ ಅವರ ಹೆಗಲಿಗೆ ಈ ಖಾತೆಯನ್ನು ವಹಿಸಲು ಒಲವು ತೋರಿದ್ದು, ಮುಂಬರುವ ಬಿಬಿಎಂಪಿ ಚುನಾವಣೆ ಮತ್ತು ಪಕ್ಷ ಸಂಘಟನೆ ಜವಾಬ್ದಾರಿಯನ್ನು ನೀಡಲು ಸಮ್ಮತಿಸಿದ್ದಾರೆ. ಸಂಘ ಪರಿವಾರದ ನಾಯಕರು ಕೂಡ ಅಶ್ವತ್ಥನಾರಾಯಣ ಅವರಿಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡಬೇಕೆಂದು ಸಲಹೆ ಮಾಡಿದ್ದಾರೆ.

ಇತ್ತೀಚೆಗೆ ನಡೆದ ಕೆ.ಆರ್.ಪೇಟೆ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಅವರ ಸಂಘಟನೆಯೇ ಕಾರಣ ಎಂಬುದು ಆರ್‍ಎಸ್‍ಎಸ್ ನಾಯಕರ ಅಭಿಮತ. ಜೆಡಿಎಸ್‍ನಂತಹ ಭದ್ರಕೋಟೆಯಲ್ಲಿ ತಳಮಟ್ಟದಿಂದ 20 ದಿನಗಳಲ್ಲಿ ಪಕ್ಷವನ್ನು ಸಂಘಟಿಸಿ ಅಭ್ಯರ್ಥಿಯ ಗೆಲುವಿಗೆ ಅಶ್ವತ್ಥನಾರಾಯಣ, ಬಿಜೆಪಿ ಯುವ ಮೋರ್ಚಾ ಪ್ರಧಾನಕಾರ್ಯದರ್ಶಿ ಬಿ.ವೈ.ವಿಜಯೇಂದ್ರ, ಹಾಸನ ಶಾಸಕ ಪ್ರೀತಮ್‍ಗೌಡ ಕಾರಣೀಭೂತರು.

ಪಕ್ಷದಲ್ಲಿ ಅಶ್ವತ್ಥನಾರಾಯಣ ಅವರಿಗೆ ಹೆಚ್ಚಿನ ಜವಾಬ್ದಾರಿ ನೀಡುವ ಮೂಲಕ ಸಂಘಟನೆಯನ್ನು ಹೆಚ್ಚಿಸಿಕೊಳ್ಳಿ ಎಂದು ಪರಿವಾರದ ನಾಯಕರು ನಿರ್ದೇಶನ ನೀಡಿದ್ದಾರೆ.ಅಶ್ವತ್ಥನಾರಾಯಣ ಹೊರತುಪಡಿಸಿ ಯಾರಿಗೆ ಈ ಸ್ಥಾನ ನೀಡಿದರೂ ಅಸಮಾಧಾನಗೊಳ್ಳಬಹುದೆಂಬ ಹಿನ್ನೆಲೆಯಲ್ಲಿ ಯಡಿಯೂರಪ್ಪ ಈ ಕಗ್ಗಂಟ್ಟನ್ನು ಬಿಡಿಸಲು ಮುಂದಾಗಿದ್ದಾರೆ.

ಬೆಂಗಳೂರು ಮಹಾನಗರದಲ್ಲಿ ಒಕ್ಕಲಿಗ ಮತಗಳು ನಿರ್ಣಾಯಕವಾಗಿದ್ದು, ಬಿಬಿಎಂಪಿ ಚುನಾವಣೆಯಲ್ಲಿ ಅಭ್ಯರ್ಥಿಗಳ ಗೆಲುವಿಗೆ ಪ್ರಮುಖ ಪಾತ್ರವಹಿಸಲಿವೆ. ಅಶ್ವತ್ಥನಾರಾಯಣ ಇದೇ ಸಮುದಾಯಕ್ಕೆ ಸೇರಿದವರಾಗಿದ್ದು, ಅವರಿಗೆ ಬೆಂಗಳೂರಿನ ಹೊಣೆಗಾರಿಕೆ ನೀಡಿದರೆ ಬಿಬಿಎಂಪಿ ಚುನಾವಣೆಯಲ್ಲಿ ಪಕ್ಷಕ್ಕೆ ಅನುಕೂಲವಾಗಬಹುದೆಂಬ ಲೆಕ್ಕಾಚಾರ ಬಿಎಸ್‍ವೈ ಅವರದ್ದು,

ಈಗಾಗಲೇ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಬೆಂಗಳೂರು ನಿರ್ಮಾತೃ ಕೆಂಪೇಗೌಡರು ಕಂಡಿದ್ದ ಕನಸುಗಳನ್ನು ನನಸು ಮಾಡುವ ನಿಟ್ಟಿನಲ್ಲಿ ಅಶ್ವತ್ಥನಾರಾಯಣ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಹೀಗಾಗಿ ಅಳೆದು ತೂಗಿ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಅಶ್ವತ್ಥನಾರಾಯಣ ಅವರಿಗೆ ನೀಡುವುದು ಬಹುತೇಕ ಖಚಿತವಾಗಿದೆ.

Facebook Comments