ಅಧಿಕಾರ ಶಾಶ್ವತ ಅಲ್ಲ, ಅಶೋಕ್ ಜತೆ ಮುನಿಸಿಲ್ಲ..ಒಟ್ಟಾಗಿ ಸಾಗುತ್ತೇವೆ.. : ಡಿಸಿಎಂ ಅಶ್ವತ್ಥನಾರಾಯಣ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.17-ಅಧಿಕಾರ ಇಂದು ಬರು ತ್ತದೆ, ನಾಳೆ ಹೋಗುತ್ತದೆ. ಇದು ಯಾರೊಬ್ಬರಿಗೂ ಶಾಶ್ವತವಲ್ಲ. ಅಶೋಕ್ ಮತ್ತು ನನ್ನ ನಡುವೆ ಭಿನ್ನಾಭಿಪ್ರಾಯ ಇದೆ ಎನ್ನುವುದು ಕೇವಲ ವದಂತಿ ಎಂದು ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಪ್ರಧಾನಮಂತ್ರಿಗಳಿಗೆ ಸಂಬಂಧಿಸಿದ ರಮ್ಯ ವೈಶಿಷ್ಟ್ಯ ಬರೆದಿರುವ ವಿಶಿಷ್ಟ ಹಾಡಿನ ಸಿಡಿ ಬಿಡುಗಡೆಗೊಳಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮತ್ತು ಅಶೋಕ್ ಅವರ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯವಿಲ್ಲ. ನಾನು ಈಗಲೂ ಅವರ ಜೊತೆಯಲ್ಲಿ ಊಟ ಮಾಡುತ್ತೇನೆ.

ಅವರ ಮನೆಗೂ ಹೋಗಿ ಬರುತ್ತೇನೆ. ಅನೇಕ ಸಂದರ್ಭಗಳಲ್ಲಿ ಅವರ ಜೊತೆಯಲ್ಲಿ ಓಡಾಡಿದ್ದೇನೆ. ನನಗೆ ಅವರು ಅಣ್ಣನ ಸಮಾನ. ಹೀಗಾಗಿ ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯಕ್ಕೆ ಅವಕಾಶವಿಲ್ಲ ಎಂದು ಪುನರುಚ್ಚರಿಸಿದರು. ಅಶೋಕ್ ಕುಟುಂಬದವರು ನಮ್ಮ ಕುಟುಂಬದವರು ಅಣ್ಣ-ತಮ್ಮಂದಿರಂತೆ ಇದ್ದೇವೆ. ಅಧಿಕಾರಕ್ಕಾಗಿ ನಮ್ಮ ಸಂಬಂಧಗಳನ್ನು ಹಾಳು ಮಾಡಿಕೊಳ್ಳಲು ಇಷ್ಟವಿಲ್ಲ. ಅಷ್ಟಕ್ಕೂ ಅಧಿಕಾರ ಶಾಶ್ವತವಲ್ಲ. ಇದು ಬರುತ್ತೆ, ನಾಳೆ ಹೋಗುತ್ತೆ. ಅದಕ್ಕಾಗಿ ನಮ್ಮ ಸಂಬಂಧಗಳನ್ನು ಹಾಳು ಮಾಡಿಕೊಳ್ಳಲು ಸಾಧ್ಯವೇ ಎಂಧು ಪ್ರಶ್ನಿಸಿದರು.

ಸಮಾಜದ ದೃಷ್ಟಿಯಿಂದ ನಾವು ಒಗ್ಗಟ್ಟಾಗಿ ಕೆಲಸ ಮಾಡಬೇಕು. ದಾರಿಯಲ್ಲಿ ಹೋಗುವಾಗ ಕಲ್ಲು ಮುಳ್ಳುಗಳು ಇದ್ದೇ ಇರುತ್ತವೆ. ಅದನ್ನು ಸರಿಪಡಿಸಿಕೊಂಡು ಹೋಗುವುದು ನಮ್ಮ ಕೆಲಸ. ಪಕ್ಷ ಏನು ಕೊಟ್ಟಿರುತ್ತದೋ ಅದನ್ನು ಜವಾಬ್ದಾರಿಯುತವಾಗಿ ನಿಭಾಯಿಸುತ್ತಿದ್ದೇನೆ ಎಂದು ಹೇಳಿದರು.

Facebook Comments