ದೂರ ಶಿಕ್ಷಣದ ಗುಣಮಟ್ಟ ಹೆಚ್ಚಳಕ್ಕೆ ಒತ್ತು : ಡಿಸಿಎಂ ಅಶ್ವತ್ಥ ನಾರಾಯಣ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.29- ದೂರ ಶಿಕ್ಷಣಕ್ಕೆ ಹೆಚ್ಚು ಮಹತ್ವ ಕೊಡಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ್ ತಿಳಿಸಿದರು. ಇಲಿನೋಸ್ ಸಿಸ್ಟಮ್ಸ್ ಚಿಕಾಗೋ ಯೂನಿವರ್ಸಿಟಿಯ ನಿಯೋಗ ಭೇಟಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವದರ್ಜೆಯ ದೂರ ಶಿಕ್ಷಣ ಸಿಗಬೇಕಿದೆ. ಇದಕ್ಕಾಗಿ ದೂರ ಶಿಕ್ಷಣದ ಗುಣಮಟ್ಟ ಹೆಚ್ಚಳಕ್ಕೆ ಒತ್ತು ನೀಡಲಾಗುತ್ತಿದೆ ಎಂದರು.

ಅಮೆರಿಕದ ಮೂರು ವಿಶ್ವವಿದ್ಯಾನಿಲಯಗಳ ನಿಯೋಗ ಇಂದು ತಮ್ಮನ್ನು ಭೇಟಿಯಾಗಿತ್ತು.ಕರ್ನಾಟಕದಲ್ಲಿ ಉನ್ನತ ಶಿಕ್ಷಣದಲ್ಲಿ ಸುಧಾರಣೆ ತರಲು ಪ್ರಯತ್ನಿಸುತ್ತಿದ್ದು, ಇದಕ್ಕೆ ಅಮೆರಿಕದ ಮೂರು ವಿಶ್ವವಿದ್ಯಾನಿಲಯಗಳ ಸಹಕಾರ ದೊರೆಯಲಿದೆ. ಆ ವಿಶ್ವವಿದ್ಯಾನಿಲಯಗಳು ಬೆಂಗಳೂರಿನಲ್ಲಿ ತಮ್ಮ ಕಚೇರಿ ತೆರೆಯಲಿವೆ. ಸರ್ಕಾರದಿಂದಲೂ ವಿವಿಗಳಿಗೆ ಪೂರಕವಾದ ಸ್ಪಂದನೆ ದೊರೆಯಲಿದೆ. ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ಹೆಚ್ಚಿಸಲು ಈ ವಿವಿಗಳು ಸಹಕಾರ ನೀಡಲಿವೆ ಎಂದು ಹೇಳಿದರು.

ನನ್ನ ಪಾತ್ರವಿಲ್ಲ: ರಾಜ್ಯ ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟ ವಿಚಾರವಾಗಿದ್ದು, ಅದರಲ್ಲಿ ನನ್ನದೇನೂ ಪಾತ್ರವಿಲ್ಲ ಎಂದು ಅಶ್ವತ್ಥ ನಾರಾಯಣ್ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು. ಸಚಿವ ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವ ಬಗ್ಗೆ ಗಮನ ಸೆಳೆದಾಗ ಮೇಲಿನಂತೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ, ಸಂಪುಟ ವಿಸ್ತರಣೆ ಆದಷ್ಟು ಶೀಘ್ರ ಆಗಲಿದೆ. ಅದರ ಬಗ್ಗೆ ಮುಖ್ಯಮಂತ್ರಿ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.

ಮೂಲ ಬಿಜೆಪಿಗರು ವಲಸಿಗರು ಎಂಬ ಭೇದವಿಲ್ಲ. ಎಲ್ಲರೂ ಬಿಜೆಪಿಗರೇ ಆಗಿದ್ದಾರೆ ಎಂದು ಸಮರ್ಥಿಸಿಕೊಂಡರು. ಇಲಿನೋಸ್ ಸಿಸ್ಟಮ್ಸ್ ಚಿಕಾಗೋ ವಿಶ್ವವಿದ್ಯಾನಿಲಯದ ಅಧ್ಯಕ್ಷ ತಿಮೋತಿ ಕಿಲ್ಲೆನ್ ನೇತೃತ್ವದ ನಿಯೋಗ ಉಪಮುಖ್ಯಮಂತ್ರಿಗಳನ್ನು ಭೇಟಿಯಾಗಿ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಿತು. ಎಂಆರ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಂ.ಆರ್.ಜಯರಾಂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Facebook Comments