ಪಂಚರಾಜ್ಯ ಫಲಿತಾಂಶ : ಪುಟಿದೆದ್ದ ಕಾಂಗ್ರೆಸ್, ಕುಸಿದು ಬಿದ್ದ ಬಿಜೆಪಿ

ಈ ಸುದ್ದಿಯನ್ನು ಶೇರ್ ಮಾಡಿ

Result--01

ನವದೆಹಲಿ, ಡಿ.11-ಮುಂಬರುವ ಲೋಕಸಭಾ ಚುನಾವಣೆಯ ಸೆಮಿಫೈನಲ್ ಎಂದೇ ಬಿಂಬಿತವಾಗಿರುವ ಹಾಗೂ ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಪಂಚ ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಇಂದು ಪ್ರಕಟವಾಗಿದ್ದು, ರಾಜಸ್ಥಾನ ಮತ್ತು ಛತ್ತೀಸ್‍ಗಢದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ತೆಲಂಗಾಣದಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‍ಎಸ್) ವಿಜಯ ದುಂದುಭಿ ಮೊಳಗಿಸಿದೆ. ಈಶಾನ್ಯ ರಾಜ್ಯ ಮಿಜೋರಾಂನಲ್ಲಿ ಎಂಎನ್‍ಎಫ್ ವಿಜಯ ಸಾಧಿಸಿದೆ. ಸಮ ಬಲದ ಹೋರಾಟಕ್ಕೆ ಸಾಕ್ಷಿಯಾದ ಮಧ್ಯಪ್ರದೇಶ ಅತಂತ್ರ ಫಲಿತಾಂಶಕ್ಕೆ ಕಾರಣವಾಗಿದೆ.

ಈ ಚುನಾವಣೆ ಫಲಿತಾಂಶದ ಮೂಲಕ ತಮ್ಮ ಬಲವನ್ನು ಹೆಚ್ಚಿಸಿಕೊಂಡಿರುವ ಕಾಂಗ್ರೆಸ್, ಮುಂಬರುವ ಲೋಕಸಭಾ ಸಮರವನ್ನು ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಎದುರಿಸಲು ಸ್ಫೂರ್ತಿ ನೀಡಿದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ಫಲಿತಾಂಶವನ್ನು ಆತ್ಮಾವಲೋಕನ ಮಾಡಿಕೊಂಡು ಪಕ್ಷನ್ನು ಮುಂದಿನ ಚುನಾವಣೆಗೆ ಸಜ್ಜುಗೊಳಿಸಬೇಕಾದ ಅನಿವಾರ್ಯತೆ ಎದುರಾಗಿದೆ.  2019ರ ಲೋಕಸಭಾ ಚುನಾವಣೆಯ ದಿಕ್ಸೂಚಿಯಾಗಿರುವ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗಳ ಮತ ಎಣಿಕೆ ಕಾರ್ಯ ಇಂದು ಆಯಾ ರಾಜ್ಯಗಳಲ್ಲಿ ವ್ಯಾಪಕ ಬಂದೋಬಸ್ತ್ ನಡುವೆ ನಡೆಯಿತು.  ತೆಲಂಗಾಣ, ರಾಜಸ್ತಾನ, ಮಧ್ಯಪ್ರದೇಶ, ಛತ್ತೀಸ್‍ಗಢ ಮತ್ತು ಮಿಜೋರಾಂ ರಾಜ್ಯಗಳ ಚುನಾವಣೆಗಾಗಿ ಒಟ್ಟು 1,74,724 ವಿದ್ಯುನ್ಮಾನ ಮತ ಯಂತ್ರಗಳನ್ನು ಬಳಸಲಾಗಿತ್ತು. ಬೆಳಗ್ಗೆ 10 ಗಂಟೆ ವೇಳೆಗೆ ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಸ್ಪಷ್ಟ ಚಿತ್ರಣ ಲಭಿಸಿದೆ.

# ರಾಜಸ್ತಾನದಲ್ಲಿ ಬಿಜೆಪಿ ಧೂಳಿಪಟ:   ಮುಖ್ಯಮಂತ್ರಿ ವಸುಂಧರಾ ರಾಜೇ ನೇತೃತ್ವದ ಆಡಳಿತರೂಢ ಬಿಜೆಪಿ ರಾಜಸ್ತಾನದಲ್ಲಿ ಧೂಳಿಪಟವಾಗಿದೆ. ಬಿಜೆಪಿ ಭದ್ರಕೋಟೆಯನ್ನು ನುಚ್ಚುನೂರು ಮಾಡಿರುವ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಭರ್ಜರಿ ಜಯಭೇರಿ ಬಾರಿಸಿದೆ.   ರಾಜಸ್ತಾನದಲ್ಲಿ ಮತ್ತೆ ಬಿಜೆಪಿ ಸರ್ಕಾರವನ್ನು ಪ್ರತಿಷ್ಠಾಪಿಸಬೇಕೆಂಬ ಪ್ರಧಾನಿ ನರೇಂದ್ರ ಮೋದಿ ಅವರ ಆಕಾಂಕ್ಷೆಗೆ ಈ ಫಲಿತಾಂಶ ದೊಡ್ಡ ನಿರಾಸೆ ಉಂಟು ಮಾಡಿದೆ.

# ಛತ್ತೀಸ್‍ಗಢದಲ್ಲಿ ಕಾಂಗ್ರೆಸ್ ಜಯಭೇರಿ:  ಛತ್ತೀಸ್‍ಗಢದಲ್ಲಿ ಎರಡನೇ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯಲು ಬಯಕೆ ಹೊಂದಿದ್ದ ಮುಖ್ಯಮಂತ್ರಿ ರಮಣ್‍ಸಿಂಗ್ ನೇತೃತ್ವದ ಬಿಜೆಪಿಗೆ ಈ ಫಲಿತಾಂಶದಿಂದ ಭಾರೀ ಮುಖಭಂಗವಾಗಿದೆ. ಈ ರಾಜ್ಯದಲ್ಲಿ ಕಾಂಗ್ರೆಸ್ ವಿಜಯ ದುಂದುಭಿ ಮೊಳಗಿಸಿದ್ದು, ಬಿಜೆಪಿ ಭದ್ರಕೋಟೆಯನ್ನು ಕೈವಶ ಮಾಡಿಕೊಂಡಿದೆ.

# ತೆಲಂಗಾಣದಲ್ಲಿ ಮತ್ತೆ ಕೆಸಿಆರ್ ಪ್ರಾಬಲ್ಯ:   ತೆಲಂಗಾಣ ರಾಜ್ಯದಲ್ಲಿ ನಿರೀಕ್ಷೆಯಂತೆ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‍ಎಸ್) ಭರ್ಜರಿ ಗೆಲುವ ಸಾಧಿಸಿದೆ. ಈ ರಾಜ್ಯದಲ್ಲಿ ಪ್ರಾಬಲ್ಯ ಸಾಧಿಸಬೇಕೆಂಬ ಬಿಜೆಪಿ ಮತ್ತು ಕಾಂಗ್ರೆಸ್ ಮಿತ್ರಕೂಟಕ್ಕೆ ಈ ಫಲಿತಾಂಶದಿಂದ ಭಾರೀ ಹಿನ್ನಡೆಯಾಗಿದೆ.   ಪ್ರಧಾನಿ ನರೇಂದ್ರ ಮೋದಿ ಮತ್ತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ವರ್ಚಸ್ಸನ್ನು ತಮ್ಮ ರಾಜ್ಯದಲ್ಲಿ ಮೂಲೆಗುಂಪು ಮಾಡುವಲ್ಲಿ ಯಶಸ್ವಿಯಾದ ಟಿಆರ್‍ಎಸ್ ಮುಖ್ಯಸ್ಥರೂ ಆಗಿರುವ ಚಂದ್ರಶೇಖರ್ ರಾವ್ ಮತ್ತೊಮ್ಮೆ ಮುಖ್ಯಮಂತ್ರಿ ಹುದ್ದೆಗೇರಲು ಸಜÁ್ಜಗಿದ್ದಾರೆ.

# ಮಿಜೋರಾಂ ಎಂಎನ್‍ಎಫ್ ವಶ: ಈಶಾನ್ಯ ರಾಜ್ಯ ಮಿಜೋರಾಂನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಮುಖಭಂಗವಾಗಿದ್ದು, ಎಂಎನ್‍ಎಫ್ ಸರಳ ಬಹುಮತದೊಂದಿಗೆ ಅಧಿಕಾರ ಗದ್ದುಗೇರಲು ಸಜ್ಜಾಗಿದೆ.

# ಮಧ್ಯಪ್ರದೇಶ ಅತಂತ್ರ: ಚುನಾವಣಾ ಪೂರ್ವ ಫಲಿತಾಂಶದಂತೆ ಬಿಜೆಪಿಯ ಭದ್ರಕೋಟೆ ಎನಿಸಿದ್ದ ಮಧ್ಯಪ್ರದೇಶದಲ್ಲಿ ಅತಂತ್ರ ಫಲಿತಾಂಶ ಕಂಡುಬಂದಿದೆ. ಮತ ಎಣಿಕೆ ಆರಂಭದಿಂದಲೂ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಸಮಬಲದ ಪೈಪೋಟಿ ಗೆ ಸಾಕ್ಷಿಯಾಗಿತ್ತು. ಮೂರನೇ ಬಾರಿ ಅಧಿಕಾರ ಗದ್ದುಗೆಗೇರಲು ತವಕಿಸುತ್ತಿದ್ದ ಮುಖ್ಯಮಂತ್ರಿ ಶಿವರಾಜ್‍ಸಿಂಗ್ ಚವಾಣ್‍ಗೆ ಈ ಬಾರಿ ಹಾದಿ ಕಠಿಣವಾಗಿದೆ.   230 ಸದಸ್ಯ ಬಲದ ಮಧ್ಯಪ್ರದೇಶದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‍ಗೆ ಸ್ಪಷ್ಟ ಬಹುಮತ ಲಭಿಸದಿರುವ ಹಿನ್ನೆಲೆಯಲ್ಲಿ ಈ ಎರಡೂ ಪಕ್ಷಗಳಿಗೂ ಇತರ ಪಕ್ಷಗಳ ಬೆಂಬಲ ಪಡೆಯುವುದು ಅನಿವಾರ್ಯವಾಗಿದೆ.  ಬಿಜೆಪಿಗಿಂತ ಅಧಿಕ ಸ್ಥಾನ ಗಳಿಸಿರುವ ಕಾಂಗ್ರೆಸ್ ಈಗಾಗಲೇ ಮಿತ್ರಪಕ್ಷಗಳೊಂದಿಗೆ ಕೈ ಜೋಡಿಸಿ ಸರ್ಕಾರ ರಚಿಸುವ ಕಸರತ್ತು ಆರಂಭಿಸಿದೆ.

Facebook Comments

Sri Raghav

Admin