ಸರ್ಕಾರದ ಪಟ್ಟು.. ಕಾಂಗ್ರೆಸ್ ಸಿಟ್ಟು.. ನಡೆಯದ ಕಲಾಪ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.5- ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ ಅವರ ಅಮಾನತು ಆದೇಶವನ್ನು ಹಿಂಪಡೆಯುವುದು, ಒಂದು ರಾಷ್ಟ್ರ ಒಂದು ಚುನಾವಣೆ ವಿಷಯವನ್ನು ಚರ್ಚೆಗೆ ಕೈಗೆತ್ತಿಕೊಳ್ಳಬಾರದು ಎಂದು ಪ್ರತಿಪಕ್ಷ ಕಾಂಗ್ರೆಸ್ ಇಂದೂ ಕೂಡ ವಿಧಾನಸಭೆಯಲ್ಲಿ ತನ್ನ ಧರಣಿಯನ್ನು ಮುಂದುವರೆಸಿತು. ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷ ಕಾಂಗ್ರೆಸ್‍ನ ಸದಸ್ಯರು ಇಂದೂ ಕೂಡ ಸದನದ ಬಾವಿಗಿಳಿದು ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದರು.

ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಒಂದು ರಾಷ್ಟ್ರ ಒಂದು ಚುನಾವಣೆ ವಿಷಯವನ್ನು ಚರ್ಚೆ ಕೈಗೆತ್ತಿಕೊಳ್ಳಲಾಗುವುದೆಂದು ಪ್ರಕಟಿಸುತ್ತಿದ್ದಂತೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ಕೊಡುವುದಿಲ್ಲ. ಶಾಸಕ ಬಿ.ಕೆ.ಸಂಗಮೇಶ್ ಅವರ ಅಮಾನತು ಆದೇಶ ವಾಪಸ್ ಪಡೆಯಬೇಕು. ಅವರನ್ನು ಇಷ್ಟೊಂದು ಕೆಟ್ಟದಾಗಿ ಅಮಾನತು ಪಡಿಸುವ ಅಗತ್ಯವಾದರೂ ಏನಿತ್ತು ಎಂದು ಪ್ರಶ್ನಿಸಿದರು.

ಇದಕ್ಕೆ ಆಕ್ಷೇಪಿಸಿದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ಅನುಚಿತವಾಗಿ ವರ್ತಿಸಿದ ಸದಸ್ಯರನ್ನು ಹೇಗೆ ಅಮಾನತು ಮಾಡಬೇಕಿತ್ತು ಎಂದು ಪ್ರಶ್ನಿಸಿದರು. ಮಾತು ಮುಂದುವರೆಸಿದ ಸಿದ್ದರಾಮಯ್ಯ ಅವರು, ಸಂಗಮೇಶ್ ಅವರ ಮೇಲೆ 7 ಸುಳ್ಳು ಮೊಕದ್ದಮೆಗಳನ್ನು ದಾಖಲಿಸಲಾಗಿದೆ. ತಮಗಾದ ನೋವಿನಿಂದ ಅವರು ಸನದಲ್ಲಿ ಶರ್ಟ್ ಬಿಚ್ಚಿ ಭಾವನೆ ವ್ಯಕ್ತಪಡಿಸಿದ್ದಾರೆ. ಅದಕ್ಕಾಗಿ ಅಮಾನತು ಪಡಿಸುವುದು ಎಷ್ಟರ ಮಟ್ಟಿಗೆ ಸರಿ ಎಂದರು.

ಹಿಂದೆ ಶಾಸಕ ಗೂಳಿಹಟ್ಟಿ ಶೇಖರ್ ಇದೇ ಸದನದಲ್ಲಿ ಬಟ್ಟೆ ಹರಿದುಕೊಂಡು ಗಲಭೆ ನಡೆಸಿದ ನಿದರ್ಶನಗಳಿವೆ. ಅಷ್ಟೇಯೇಕೆ ಮೊನ್ನೆಯಷ್ಟೇ ವಿಧಾನಪರಿಷತ್‍ನಲ್ಲಿ ಸಭಾಪತಿ ಸ್ಥಾನದಲ್ಲಿ ಕುಳಿತಿದ್ದ ಸಭಾಪತಿಯವರನ್ನೇ ದರದರನೆ ಎಳೆದು ಹಾಕಿದ್ದಾರೆ. ಶರ್ಟ್ ಬಿಚ್ಚಿದ್ದಕ್ಕೆ ಅಮಾನತು ಮಾಡಿದ್ದಾದರೆ ಬೆತ್ತಲಾಗಿರುವ ಪ್ರಕರಣಗಳನ್ನು ನೋಡಿದ್ದೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಗಮೇಶ್ ಯಾವುದೇ ತಪ್ಪು ಮಾಡದಿದ್ದರೂ ಅವರನ್ನು ಒಂದು ವಾರಗಳ ಕಾಲ ಅಮಾನತು ಮಾಡುವ ಅಗತ್ಯವಿರಲಿಲ್ಲ. ಸದನದಲ್ಲಿ ನೀವು ಯಾವುದೇ ಸದಸ್ಯರನ್ನು ಅಮಾನತು ಮಾಡಬಹುದು. ಇಲ್ಲವೆ ನೀವೇ ನೀಡಿರುವ ಆದೇಶವನ್ನು ವಾಪಸ್ ಪಡೆಯಬಹುದು. ಅದು ನಿಮಗಿರುವ ವಿಶೇಷ ಅಕಾರ. ಈಗ ಅದನ್ನು ಬಳಸಿ ಅಮಾನತು ಆದೇಶವನ್ನು ಹಿಂಪಡೆಯಬೇಕೆಂದು ಮನವಿ ಮಾಡಿದರು.

ಆಗ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ಅವರು, ಸದಸ್ಯರಾದ ಬಿ.ಕೆ.ಸಂಗಮೇಶ್ ತಮಗಾದ ನೋವನ್ನು ಬೇರೆ ರೀತಿಯಲ್ಲೇ ವ್ಯಕ್ತಪಡಿಸಬಹುದಿತ್ತು. ತಮ್ಮ ವಿರುದ್ಧ ದಾಖಲಾಗಿರುವ ದೂರುಗಳಿಗೆ ಸಂಬಂಸಿದಂತೆ ನೋಟಿಸ್ ಕೊಟ್ಟಿದ್ದರು. ಸಭಾಧ್ಯಕ್ಷರು ಕೂಡ ಚರ್ಚೆಗೆ ಅವಕಾಶ ಕೊಡುವುದಿಲ್ಲ ಎಂದು ಹೇಳಲಿಲ್ಲ. ಏಕಾಏಕಿ ಶರ್ಟ್ ಬಿಚ್ಚಿ ಉದ್ದಟತನದಿಂದ ವರ್ತಿಸಿದ್ದು ಸರಿಯೇ ಎಂದು ವಿರೋಧ ಪಕ್ಷದವನ್ನು ತರಾಟೆಗೆ ತೆಗೆದುಕೊಂಡರು.

ಸಂಗಮೇಶ್ ಅವರ ಈ ಕ್ರಮವನ್ನು ಯಾರೂ ಕೂಡ ಸಮರ್ಥಿಸಿಕೊಳ್ಳಬಾರದು. ಸದಸ್ಯರು ತಮಗಾದ ನೋವನ್ನು ವ್ಯಕ್ತಪಡಿಸಲು ಬೇರೆ ಬೇರೆ ವೇದಿಕೆಗಳಿವೆ. ಹೀಗೆ ತಮಗೆ ನೋವಾಗಿದೆ ಎಂದು ಅಂಗಿ ಬಿಚ್ಚಿ ಕುಳಿತರೆ ಸದನಕ್ಕೆ ಗೌರವವಿರುತ್ತದೆಯೇ ಎಂದು ಪ್ರಶ್ನಿಸಿದರು.
ಅವರ ವರ್ತನೆಯನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವೇ ಇಲ್ಲ. ಅಲ್ಲದೆ ಅಂತಹವರಿಗೆ ಯಾರೊಬ್ಬರೂ ಬೆಂಬಲ ಕೂಡ ಕೊಡಬಾರದು. ಕಾಂಗ್ರೆಸ್ ಇಂತಹ ಕೆಳಮಟ್ಟಕ್ಕೆ ಹೋಗಿರುವುದು ಅತ್ಯಂತ ದುರದೃಷ್ಟಕರ ಎಂದು ವಾಗ್ದಾಳಿ ನಡೆಸಿದರು.

ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರಿಂದ ಮತ್ತೆ ಮಾತಿನ ಚಕಮಕಿ ನಡೆಯಿತು. ಸದಸ್ಯರು ತಮಗಾದ ನೋವಿನಿಂದ ಅಂಗಿ ಬಿಚ್ಚುತ್ತಾರೆ ಎಂದರೆ ನಾಳೆ ಇನ್ಯಾರೋ ಮತ್ತೇನೋ ಮಾಡುತ್ತಾರೆ. ಅದನ್ನು ನಾವು ಸಹಿಸಿಕೊಂಡು ಇರಬೇಕೆ ? ಅವರ ಈ ವರ್ತನೆಯನ್ನು ಸಮರ್ಥಿಸಿಕೊಳ್ಳುತ್ತಿರುವ ಕಾಂಗ್ರೆಸ್‍ನವರಿಗೆ ನಾಚಿಕೆಯಾಗಬೇಕೆಂದು ವಿಧಾನಸಭೆ ಬಿಜೆಪಿ ಮುಖ್ಯ ಸಚೇತಕ ವಿ.ಸುನೀಲ್‍ಕುಮಾರ್ ತಿರುಗೇಟು ನೀಡಿದರು.

ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ನಿನ್ನೆ ಸದಸ್ಯರೊಬ್ಬರು ನಡೆದುಕೊಂಡ ರೀತಿ ಸಹಿಸಲು ಸಾಧ್ಯವಿಲ್ಲ. ಕರ್ನಾಟಕ ವಿಧಾನಸಭೆಗೆ ತನ್ನದೇ ಆದ ಘನತೆ, ಗೌರವ, ಇತಿಹಾಸವಿದೆ. ಇಲ್ಲಿ ಪ್ರತಿಯೊಬ್ಬರೂ ಇತರರಿಗೆ ಮಾದರಿಯಾಗುವ ರೀತಿಯಲ್ಲಿ ನಡೆದುಕೊಳ್ಳಬೇಕು. ನನಗೆ ಅನ್ಯಾಯವಾಗಿದೆ ಎಂದು ಸದಸ್ಯರು ಅಂಗಿ ಬಿಚ್ಚಿ ಕುಳಿತರೆ ನಾಳೆ ಮತ್ಯಾರೋ ಬಟ್ಟೆ ಬಿಚ್ಚಿಕೊಂಡು ಬರುತ್ತಾರೆ. ಅದನ್ನು ಸಹಿಸಿಕೊಳ್ಳಬೇಕೇ ? ಯಾವುದೇ ಕಾರಣಕ್ಕೂ ಅಮಾನತು ಆದೇಶವನ್ನು ಹಿಂಪಡೆಯಬಾರದು ಎಂದು ಒತ್ತಾಯಿಸಿದರು.

ಕಾಂಗ್ರೆಸ್‍ಗೆ ಯಾವುದೇ ವಿಷಯದಲ್ಲೂ ಆಸಕ್ತಿ ಇಲ್ಲ. ಅವರಿಗೆ ಒಂದು ರಾಷ್ಟ್ರ ಒಂದು ಚುನಾವಣೆ ವಿಷಯ ಬೇಡವೇ ಬೇಡ. ದೇಶದಲ್ಲಿ ಸೋತು ಮೂಲೆಗುಂಪಾಗಿದ್ದರೂ ಆ ಪಕ್ಷಕ್ಕೆ ಇನ್ನೂ ಬುದ್ದಿ ಬಂದಿಲ್ಲ ಎಂದು ಟೀಕಾ ಪ್ರಹಾರ ನಡೆಸಿದರು.

ಸಚಿವ ಎಸ್.ಟಿ.ಸೋಮಶೇಖರ್, ಶಾಸಕ ಅರಗ ಜ್ಞಾನೇಂದ್ರ ಮತ್ತಿತರರು ಕಾಂಗ್ರೆಸ್‍ನವರ ಮೇಲೆ ಮುಗಿ ಬಿದ್ದರು. ಸದನದಲ್ಲಿ ಗದ್ದಲ-ಕೋಲಾಹಲದ ವಾತಾವರಣ ಉಂಟಾಯಿತು. ಈ ಸಂದರ್ಭದಲ್ಲಿ ಸ್ಪೀಕರ್ ಕಲಾಪವನ್ನು 12.30ಕ್ಕೆ ಮುಂದೂಡಿದರು.

ಸದನ ಮತ್ತೆ ಸಮಾವೇಶಗೊಂಡಾಗ ಕಾಂಗ್ರೆಸ್ ಪ್ರತಿಭಟನೆಯನ್ನು ಮುಂದುವರೆಸಿತು. ಸಂಗಮೇಶ್ ಅವರ ಅಮಾನತನ್ನು ವಾಪಸ್ ಪಡೆಯಬೇಕು, ಒಂದು ರಾಷ್ಟ್ರ ಒಂದು ಚುನಾವಣೆ ಚರ್ಚೆ ಬೇಡ ಎಂದು ಪಟ್ಟು ಹಿಡಿದರು. ಮುಂದುವರೆದ ಧರಣಿ ಮತ್ತೆ ಸದನದಲ್ಲಿ ಉಂಟಾದ ಗದ್ದಲದ ಪರಿಣಾಮ ಸ್ಪೀಕರ್ ಕಾಗೇರಿ ಅವರು ಮತ್ತೆ ಕಲಾಪವನ್ನು ಮುಂದೂಡಿದರು.

Facebook Comments

Sri Raghav

Admin