ಸದನದಲ್ಲಿ ನಾಯಕರ ಆಸನ ಅದಲು ಬದಲು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.10-ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ವಿರೋಧ ಪಕ್ಷದಲ್ಲಿದ್ದ ಬಿಜೆಪಿ ಆಡಳಿತ ಪಕ್ಷದ ಸಾಲಿಗೆ, ಆಡಳಿತ ಪಕ್ಷದಲ್ಲಿದ್ದ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ವಿಪಕ್ಷ ಸ್ಥಾನಕ್ಕೆ ಸ್ಥಳಾಂತರಗೊಂಡಂತೆ ಹಿರಿಯ ನಾಯಕರ ಸ್ಥಾನಗಳಲ್ಲೂ ಸಾಕಷ್ಟು ಬದಲಾವಣೆಯಾಗಿರುವುದು ವಿಧಾನಸಭೆಯಲ್ಲಿಂದು ಕಂಡು ಬಂತು.

ಆಡಳಿತ ಪಕ್ಷದ ಮೊದಲ ಸಾಲಿನಲ್ಲಿ ಸಭಾನಾಯಕ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಆಸೀನರಾಗಿದ್ದಾರೆ. ಅವರ ಪಕ್ಕದಲ್ಲಿ ಉಪಮುಖ್ಯಮಂತ್ರಿ ಗಳಾದ ಗೋವಿಂದ ಕಾರಜೋಳ, ಅಶ್ವತ್ಥನಾರಾಯಣ ಮತ್ತು ಲಕ್ಷ್ಮಣ್ ಸವದಿ ಆಸೀನರಾಗಿದ್ದಾರೆ. ನಂತರ 5ನೇ ಸ್ಥಾನದಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, 6ನೇ ಸ್ಥಾನದಲ್ಲಿ ಜಗದೀಶ್ ಶೆಟ್ಟರ್, ಮಾಜಿ ಉಪ ಮುಖ್ಯಮಂತ್ರಿಗಳಾದ ಅಶೋಕ್ ಮತ್ತು ಕೆ.ಎಸ್.ಈಶ್ವರಪ್ಪ 7 ಮತ್ತು 8ನೇ ಸ್ಥಾನದಲ್ಲಿ ಹಾಗೂ 9ನೇ ಸ್ಥಾನದಲ್ಲಿ ಶ್ರೀರಾಮುಲು ಆಸೀನರಾಗಿದ್ದಾರೆ.

ಉಳಿದೆಲ್ಲ ಸಚಿವರು, ಶಾಸಕರು ಹಿಂದಿನ ಸಾಲುಗಳಲ್ಲಿ ಆಸೀನರಾಗಿದ್ದಾರೆ. ವಿರೋಧ ಪಕ್ಷದ ಸಾಲಿನಲ್ಲಿ ವಿಧಾನಸಭೆಯ ಉಪಾಧ್ಯಕ್ಷ ಶಿವಶಂಕರರೆಡ್ಡಿ ಅವರ ನಂತರ ಸ್ಥಾನದಲ್ಲಿ ಪ್ರತಿಪಕ್ಷದ ನಾಯಕರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿರಿಯ ನಾಯಕ ಆರ್.ವಿ.ದೇಶಪಾಂಡೆ, ರಾಮಲಿಂಗಾ ರೆಡ್ಡಿ, ರಮೇಶ್‍ಕುಮಾರ್, ವಿ.ಮುನಿಯಪ್ಪ, ಡಿ.ಕೆ. ಶಿವಕುಮಾರ್, ಎಚ್.ಕೆ.ಪಾಟೀಲ್ ಅವರುಗಳಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ.

ಬಿಜೆಪಿಯಲ್ಲಿ ಜಗದೀಶ್ ಶೆಟ್ಟರ್ ಅವರು ಈ ಮೊದಲು ಯಡಿಯೂರಪ್ಪ ಅವರ ಪಕ್ಕದಲ್ಲಿ ಕುಳಿತಿಕೊಳ್ಳುತ್ತಿದ್ದರು. ನಂತರ ಅಶೋಕ್, ಈಶ್ವರಪ್ಪ ಅವರಿಗೆ ಸ್ಥಳಾವಕಾಶವಿರುತ್ತಿತ್ತು. ಅದರಲ್ಲಿ ಈಗ ಮಹತ್ವದ ಬದಲಾವಣೆ ಆಗಿದೆ. ಮೊದಲ ಬಾರಿಗೆ ಸಚಿವರಾಗಿರುವ ಜೆ.ಸಿ.ಮಾಧುಸ್ವಾಮಿ ಅವರು ಉಪಮುಖ್ಯಮಂತ್ರಿಯವರ ನಂತರದ ಸ್ಥಾನ ಗಳಿಸಿದ್ದಾರೆ.

ಇನ್ನು ವಿರೋಧ ಪಕ್ಷದ ಸಾಲಿನಲ್ಲೂ ರಾಮಲಿಂಗಾರೆಡ್ಡಿ, ವಿ.ಮುನಿಯಪ್ಪ, ರಮೇಶ್‍ಕುಮಾರ್ ಅವರು ಮೊದಲ ಸಾಲಿನಲ್ಲಿ ಸ್ಥಾನ ಪಡೆದಿದ್ದಾರೆ. ವಿಧಾನಸಭೆಯ ಮಾಜಿ ಅಧ್ಯಕ್ಷರಾಗಿದ್ದ ರಮೇಶ್‍ಕುಮಾರ್ ಈ ಮೊದಲೆಲ್ಲ ಹಿಂದಿನ ಸಾಲಿನಲ್ಲಿ ಕುಳಿತುಕೊಳ್ಳುತ್ತಿದ್ದುದು ಸಾಮಾನ್ಯವಾಗಿತ್ತು.

Facebook Comments