ಪ್ರವಾಹದಿಂದಾದ ಹಾನಿಗೆ ಶಾಶ್ವತ ಪರಿಹಾರಕ್ಕೆ ಕುಮಾರಸ್ವಾಮಿ ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.11- ಪ್ರವಾಹದಿಂದಾಗಿ ಸಂಪೂರ್ಣ ಹಾನಿಗೊಳಗಾಗಿರುವ ಗ್ರಾಮಗಳಿಗೆ ತಾತ್ಕಾಲಿಕ ಪರಿಹಾರ ಕಲ್ಪಿಸುವ ಬದಲು ಶಾಶ್ವತ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿಧಾನಸಭೆಯಲ್ಲಿಂದು ಸರ್ಕಾರವನ್ನು ಒತ್ತಾಯಿಸಿದರು.

ನೆರೆ ಹಾವಳಿ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರವಾಹ ಪರಿಸ್ಥಿತಿಯನ್ನು ಸರ್ಕಾರ ಸವಾಲಾಗಿ ಸ್ವೀಕರಿಸಿ ಜನರ ಸಮಸ್ಯೆಯನ್ನು ಬಗೆಹರಿಸಿದರೆ ನಿಮ್ಮ ಫೋಟೋ ಇಟ್ಟುಕೊಂಡು ಪೂಜೆ ಮಾಡುತ್ತಾರೆ. ಸಂತ್ರಸ್ತರ ಸಮಸ್ಯೆ ಬಗೆಹರಿಸಲು ಬದ್ಧತೆಯನ್ನು ತೋರಬೇಕು ಎಂದರು.

ಸಂಪೂರ್ಣವಾಗಿ ಮುಳುಗಡೆಯಾಗಿರುವ ಗ್ರಾಮಗಳನ್ನು ಸ್ಥಳಾಂತರ ಮಾಡಿ ಪುನರ್‍ವಸತಿ ಕಲ್ಪಿಸಬೇಕು. ರಾಜ್ಯ ಸರ್ಕಾರದಲ್ಲಿ ಹಣದ ಕೊರತೆ ಇಲ್ಲ. ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬೇರೆ ಬೇರೆ ಇಲಾಖೆಯಿಂದ ಹಣವನ್ನು ಹೊಂದಿಸಿಕೊಳ್ಳಿ. ಸಚಿವರು ವಿಭಿನ್ನ ಹೇಳಿಕೆ ನೀಡಿ ಜನರಲ್ಲಿ ಗೊಂದಲ ಸೃಷ್ಟಿ ಮಾಡಬೇಡಿ. ನೆರೆ ಪರಿಹಾರದ ವೇಗ ಮತ್ತಷ್ಟು ಹೆಚ್ಚಿಸಬೇಕಾಗಿದೆ ಎಂದು ತಿಳಿಸಿದರು.

ಸರ್ಕಾರ ನಿರ್ಮಿಸಿರುವ ಶೆಡ್‍ಗಳಲ್ಲಿ ವಾಸಿಸಲು ಸಂತ್ರಸ್ತರು ತಯಾರಿಲ್ಲ. ಒಂದು ವೇಳೆ ವಾಸಿಸಿದರೆ ಮನೆ ಕಳೆದುಕೊಂಡವರಿಗೆ ಐದು ಲಕ್ಷ ನೆರವು ಬರುವುದಿಲ್ಲ. 50 ಸಾವಿರಕ್ಕೆ ನಿಲ್ಲಿಸುತ್ತಾರೆ ಎಂದು ವರದಿಯಾಗಿದೆ. ಈ ಬಗ್ಗೆ ಜನರಲ್ಲಿರುವ ಗೊಂದಲವನ್ನು ಸರ್ಕಾರ ನಿವಾರಿಸಬೇಕು ಎಂದು ತಿಳಿಸಿದರು.

ಬೆಂಗಳೂರಿನ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕೆರೆ ಕೋಡಿ ಬಿದ್ದು ಹಲವು ಕುಟುಂಬಗಳು ಸಂಕಷ್ಟೀಕ್ಕೀಡಾಗಿವೆ. ಹೆಚ್ಚೂ ಕಡಿಮೆ ಉತ್ತರ ಕರ್ನಾಟಕದವರೇ ಇಲ್ಲಿ ಇದ್ದಾರೆ. ವ್ಯಕ್ತಿಯೊಬ್ಬರು ಮದುವೆಗೆ ಸಿದ್ದತೆ ಮಾಡಿಕೊಂಡಿದ್ದೇಲ್ಲಾ ಹಾಳಗಿದೆ ಎಂಬ ವರದಿಯಾಗಿದೆ. ಮೈತ್ರಿ ಸರ್ಕಾರದ ಅವಧಿಯಲ್ಲಿ ದಾಸರಹಳ್ಳಿಕ್ಕೆ ನೀಡಿದ ಅನುದಾನವನ್ನು ಬಿಜೆಪಿ ಸರ್ಕಾರಕಡಿತ ಮಾಡಿದೆ ಎಂದು ಆರೋಪಿಸಿದರು.

ಕಳೆದ ವರ್ಷ ಕೊಡಗಿನಲ್ಲಿ ಅತಿವೃಷ್ಟಿ ಉಂಟಾಗಿದ್ದಾಗ 1050 ಮನೆಗಳನ್ನು ನಿರ್ಮಾಣ ಮಾಡಲು ಹಣ ಬಿಡುಗಡೆಯಾಗಿತ್ತು. ಇನ್ನೂ 98 ಕೋಟಿ ರೂ. ಹಣ ಉಳಿದಿದೆ. 400ರಿಂದ 500 ಮನೆ ಈಗಾಗಲೇ ಪೂರ್ಣವಾಗಿವೆ ಎಂದು ಮಾಹಿತಿ ನೀಡಿದರು. ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಸರ್ಕಾರದ ಮಾಹಿತಿ ಪ್ರಕಾರ 10,028 ಮನೆಗಳು ಮಾತ್ರ ಪೂರ್ಣ ಹಾನಿಯಾಗಿವೆ. ಆರು ಸಾವಿರ ಜನರು ಮಾತ್ರ ಹಣ ಪಡೆದಿದ್ದಾರೆ ಎಂದು ನಾವು ಹೇಳಿದ್ದು ಸರಿಯಾಗಿದೆ ಎಂದು ಸಮರ್ಥಿಸಿಕೊಂಡರು.

ಒಟ್ಟು 36 ಸಾವಿರ ಕುಟುಂಬಗಳಿಗೆ ಮನೆ ನಿರ್ಮಿಸಿಕೊಡಲು ತಲಾ ಐದು ಲಕ್ಷ ನೀಡಲು ತೀರ್ಮಾನಿಸಲಾಗಿದೆ. ಮನೆಗಳನ್ನು ಎ,ಬಿ,ಸಿ ಎಂದು ವರ್ಗೀಕರಿಸಿ ಪರಿಹಾರ ನೀಡಲಾಗುತ್ತದೆ ಎಂದರು. ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಶಾಸಕ ಸಾ.ರಾ.ಮಹೇಶ್, ಕೊಡಗಿನಲ್ಲಿ ಮನೆ ಕಳೆದುಕೊಂಡವರಿಗೆ ಮೈತ್ರಿಸರ್ಕಾರದಲ್ಲಿ 9 ಲಕ್ಷ ವರೆಗೂ ಪರಿಹಾರ ನೀಡಲಾಗಿತ್ತು.
ಈಗ ನೀವು ನೀಡುತ್ತಿರುವ ಐದು ಲಕ್ಷ ಸಾಲುತ್ತಿಲ್ಲ. ಇನ್ನು ಹೆಚ್ಚಿನ ಹಣವನ್ನು ನೀಡಬೇಕೆಂದು ಆಗ್ರಹಿಸಿದರು.

Facebook Comments