“ಬಿಎಸ್‍ವೈ ಗುಡುಗೋದಿಲ್ಲ, ಮಿಂಚೋದಿಲ್ಲ”

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.12- ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೊದಲಿನಂತೆ ಗುಡುಗುವುದಿಲ್ಲ, ಮಿಂಚುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿಧಾನಸಭೆಯಲ್ಲಿಂದು ಛೇಡಿಸಿದರು.

2019-20ನೇ ಸಾಲಿನ ಅನುದಾನ ಬೇಡಿಕೆಗಳ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡುವಾಗ, ಯಡಿಯೂರಪ್ಪ ಅವರು ಮೊದಲಿನಂತಿಲ್ಲ. ಈಗ ಮೃದು ವಾಗಿದ್ದಾರೆ. ಈ ರೀತಿ ಆಗಬಾರದು. ಬಿಜೆಪಿ ಶಾಸಕರನ್ನುದ್ದೇಶಿಸಿ ನೀವೆಲ್ಲ ಸೇರಿ ಅವರನ್ನು ಮೆತ್ತಗೆ ಮಾಡಿದ್ದೀರಿ ಎಂದರು.

ಆಗ ಮಧ್ಯಪ್ರವೇಶಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಮುಖ್ಯಮಂತ್ರಿಗಳ ಮಿಂಚು ಕಡಿಮೆಯಾಗಿಲ್ಲ, ಗುಡುಗು ಕಡಿಮೆಯಾಗಿರಬಹುದು ಎಂದರು. ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮಾತನಾಡಿ, ಜೆಡಿಎಸ್‍ನಲ್ಲಿದ್ದಾಗ ಸಿದ್ದರಾಮಯ್ಯ ಅವರು ಬಹಳ ರೆಬೆಲ್ ಆಗಿದ್ದರು. ಈಗ ಬದಲಾಗಿದ್ದೀರಿ, ಗಡ್ಡವೂ ಹೋಗಿದೆ. ರಾಜಕಾರಣದಲ್ಲಿ ಬಹಳ ಜನ ಮೆತ್ತಗಾಗಿದ್ದಾರೆ ಎಂದರು.

ಆಗ ಸಿದ್ದರಾಮಯ್ಯ ನೀವು ಮೆತ್ತಗಾಗಿಲ್ಲವಲ್ಲ ಎಂದು ಬೊಮ್ಮಾಯಿ ಅವರನ್ನು ಛೇಡಿಸಿದರು. ಇದಕ್ಕೂ ಮುನ್ನ ಸಭಾಧ್ಯಕ್ಷವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಸಿದ್ದರಾಮಯ್ಯನವರನ್ನು ಉದ್ದೇಶಿಸಿ, ನೀವು ಪ್ರವಾಸ ಹೋಗುವ ಕಾರ್ಯಕ್ರಮವಿದೆ ಎಂದು ಗೊತ್ತಾಗಿತ್ತು. ನಿಮ್ಮ ಧ್ವನಿ ಸರಿಯಿಲ್ಲ ಎಂದು ಹೇಳುವ ಮೂಲಕ ಚರ್ಚೆಯನ್ನು ಪೂರ್ಣಗೊಳಿಸಿ ಎಂದು ಪರೋಕ್ಷವಾಗಿ ಹೇಳಿದರು.

ಅವರ ಮಾತಿನ ಧಾಟಿಯನ್ನು ಅರ್ಥೈಸಿಕೊಂಡ ಸಿದ್ದರಾಮಯ್ಯ ಅವರು, ನೀವು ಬುದ್ಧಿವಂತರು, ಬಹಳ ಬುದ್ಧಿವಂತಿಕೆ ಬೇಡ ಎಂದು ಮನವಿ ಮಾಡಿದರು.

Facebook Comments