ಚರ್ಚೆ ಇಲ್ಲದೆ ಬಜೆಟ್‍ಗೆ ಅಂಗೀಕಾರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.12-ಹಿಂದಿನ ಸಮ್ಮಿಶ್ರ ಸರ್ಕಾರ ಮಂಡಿಸಿದ್ದ 2.40 ಲಕ್ಷ ಕೋಟಿ ಬಜೆಟ್‍ಗೆ ವಿಧಾನಮಂಡಲದಲ್ಲಿಂದು ಅಂಗೀಕಾರ ದೊರೆಯಿತು.  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಡಿಸಿದ ಬಜೆಟ್ ಅಂಗೀಕಾರ ಪ್ರಸ್ತಾವನೆಗೆ ವಿಧಾನಸಭೆ ಧ್ವನಿಮತದ ಅಂಗೀಕಾರ ದೊರೆಯಿತು. ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಜೆಟ್ ಪ್ರಸ್ತಾವನೆ ಮಂಡಿಸಿದ ವೇಳೆ ರಾಜ್ಯದ ಆರ್ಥಿಕ ಸ್ಥಿತಿ ದಿವಾಳಿಯಾಗಿಲ್ಲ.

ಸಂಪನ್ಮೂಲ ಕ್ರೋಢೀಕರಣ ಚೆನ್ನಾಗಿದೆ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ ಎಂದು ತಿಳಿಸಿದರು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.11 ರಷ್ಟು ಹೆಚ್ಚಳವಾಗಿದೆ. ಮೋಟಾರು ವಾಹನ ಕಾಯ್ದೆ ಹೊರತುಪಡಿಸಿ ಉಳಿದೆಲ್ಲ ತೆರಿಗೆಗಳ ಸಂಗ್ರಹ ನಿರೀಕ್ಷಿತ ಅಂದಾಜಿನಲ್ಲೇ ನಡೆಯುತ್ತಿದೆ. ಮುಂದಿನ ಆರು ತಿಂಗಳಲ್ಲಿ ಮೋಟಾರು ತೆರಿಗೆ ಸಂಗ್ರಹದಲ್ಲೂ ಸುಧಾರಣೆಯಾಗಿ ನಿರೀಕ್ಷಿತ ಗುರಿ ಮುಟ್ಟುವ ಸಾಧ್ಯತೆಗಳಿವೆ ಎಂದು ಹೇಳಿದರು.

ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿಯವರು ಫೆಬ್ರವರಿಯಲ್ಲಿ ಬಜೆಟ್ ಮಂಡಿಸಿ ಜುಲೈವರೆಗೂ 80 ಸಾವಿರ ಕೋಟಿ ರೂ.ಗಳೀಗೆ ಲೇಖಾನುದಾನ ಪಡೆದುಕೊಂಡಿದ್ದರು. ಅನಂತರ ನಡೆದ ಅಧಿವೇಶನದಲ್ಲಿ ಅಕ್ಟೋಬರ್‍ವರೆಗೆ 62,751 ಕೋಟಿ ರೂ. ಲೇಖಾನುದಾನಕ್ಕೆ ಅಂಗೀಕಾರ ಪಡೆಯಲಾಯಿತು. 2019-20ನೇ ಸಾಲಿನ ಆರ್ಥಿಕ ವರ್ಷದಲ್ಲಿ ಏಳು ತಿಂಗಳಿಗೆ 1,42,914.38 ಕೋಟಿ ಮೊತ್ತದ ಬಜೆಟ್‍ಗೆ ಲೇಖಾನುದಾನ ಪಡೆದುಕೊಳ್ಳಲಾಗಿದೆ.

ಈಗ ಒಟ್ಟು ಬಜೆಟ್‍ನ 2,40,74585.77 ಕೋಟಿ ರೂ. ನಿವ್ವಳ ಗಾತ್ರಕ್ಕೆ ಅಂಗೀಕಾರ ನೀಡುವಂತೆ ಮನವಿ ಮಾಡಿದರು.ಈ ಬಜೆಟ್‍ನ ಗಾತ್ರ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.7.1ರಷ್ಟು ಹೆಚ್ಚಾಗಿದೆ. 250 ಕೋಟಿ ರೂ.ಗಳ ಉಳಿತಾಯ ಬಜೆಟ್ ಇದಾಗಿದೆ. ವಿತ್ತೀಯ ಕೊರತೆ 2.9ರಷ್ಟಿದ್ದು, ನಿಯಮಾನುಸಾರ ವಿತ್ತಿ ಕೊರತೆಯನ್ನು ನಿಭಾಯಿಸಲಾಗಿದೆ ಎಂದು ವಿವರಿಸಿದರು.

76,046 ಕೋಟಿ ವಾಣಿಜ್ಯ ತೆರಿಗೆ, 20,915 ಅಬಕಾರಿ ತೆರಿಗೆ, 7 ಸಾವಿರ ಕೋಟಿ ನೋಂದಣಿ ಮತ್ತು ಮುದ್ರಾಂಕ ತೆರಿಗೆ, 11 ಸಾವಿರ ಕೋಟಿ ಮೋಟಾರು ತೆರಿಗೆ ಸಂಗ್ರಹ ಗುರಿ ನಿಗದಿಯಾಗಿತ್ತು.  ಮೋಟಾರು ವಾಹನಗಳ ಕ್ಷೇತ್ರದಲ್ಲಿ ಇಳಿಕೆಯಾಗಿರುವುದರಿಂದ ತೆರಿಗೆ ಸಂಗ್ರಹದಲ್ಲಿ ಹಿನ್ನಡೆಯಾಗಿದೆ. ಆದರೆ ಮುಂದಿನ ಆರು ತಿಂಗಳಲ್ಲಿ ದು ಸುಧಾರಿಸುವ ನಿರೀಕ್ಷೆ ಇದೆ. ಉಳಿದಂತೆ ಎಲ್ಲಾ ತೆರಿಗೆಗಳು ನಿಗದಿತ ಪ್ರಮಾಣದಲ್ಲೇ ಸಂಗ್ರಹವಾಗುತ್ತಿವೆ. ಆರು ತಿಂಗಳ ಪ್ರಗತಿಯಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.15.03 ರಷ್ಟು ಸಂಪನ್ಮೂಲಕ್ರೋಢೀಕರಣ ಹೆಚ್ಚಾಗಿದೆ ಎಂದು ವಿವರಿಸಿದರು.

ನಾವು ಹೊಸದಾಗಿ ಅಧಿಕಾರಕ್ಕೆ ಬಂದರೂ ಕೂಡ ಹಿಂದಿನ ಸರ್ಕಾರ ಮಂಡಿಸಿದ್ದ ಬಜೆಟ್‍ನ್ನೇ ಮುಂದುವರೆಸಿದ್ದೇವೆ. ಯಾವ ಬದಲಾವಣೆ ಮಾಡಿಲ್ಲ ಎಂದು ಯಡಿಯೂರಪ್ಪ ಹೇಳಿದರು.
ಅತಿವೃಷ್ಠಿಗೆ ಅಗತ್ಯವಾದ ಹಣಕಾಸನ್ನು ಪೂರಕ ಬಜೆಟ್‍ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಸಂಪನ್ಮೂಲ ಕ್ರೋಢೀಕರಣ ಮಾಡಿಕೊಂಡು ಎಲ್ಲಾ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ಯಡಿಯೂರಪ್ಪ ಮಂಡಿಸಿದ ಪ್ರಸ್ತಾವನೆಗೆ ಪ್ರತಿಪಕ್ಷದ ನಾಯಕರು, ಶಾಸಕರು ವಿಷಯಾಧಾರಿತ ಚರ್ಚೆ ಮಾಡಿದರು. ಕೆಲವು ಗಂಭೀರ ಸಲಹೆಗಳೂ ಕೇಳಿಬಂದವು. ಹೆಚ್ಚಿನ ವಿರೋಧ ಇಲ್ಲದೆ ಬಜೆಟ್ ಅಂಗೀಕಾರಗೊಂಡಿತು.

Facebook Comments