ಸುಪ್ರೀಂ ತೀರ್ಪಿನ ಹೊರಬೀಳುತ್ತಿದ್ದಂತೆ ವಿಧಾನಸಭೆಯಲ್ಲಿಂದು ನಿರಾಳ ಭಾವ..!

ಈ ಸುದ್ದಿಯನ್ನು ಶೇರ್ ಮಾಡಿ

ಸುಪ್ರೀಂ ತೀರ್ಪಿನ ಹೊರಬೀಳುತ್ತಿದ್ದಂತೆ ವಿಧಾನಸಭೆಯಲ್ಲಿಂದು ನಿರಾಳ ಭಾವ..!
ಬೆಂಗಳೂರು, ಜು.12-ರಾಜೀನಾಮೆ ನೀಡಿರುವ ಶಾಸಕರ ಪ್ರಕರಣದಲ್ಲಿ ಸ್ಪೀಕರ್ ಅವರು ಮಂಗಳವಾರದವರೆಗೂ ಯಥಾಸ್ಥಿತಿ ಕಾಪಾಡುವಂತೆ ಸುಪ್ರೀಂಕೋರ್ಟ್ ತೀರ್ಪು ಹೊರಬೀಳುತ್ತಿದ್ದಂತೆ ವಿಧಾನಸಭೆಯಲ್ಲಿಂದು ನಿರಾಳ ಭಾವ ಆವರಿಸಿತು.

ಸುಪ್ರೀಂಕೋರ್ಟ್ ವಿಚಾರಣೆ ಮತ್ತು ಅದರ ತೀರ್ಪನ್ನು ನಿರೀಕ್ಷಿಸುತ್ತ ಇಡೀ ಸದನ ಗಂಭೀರ ವಾತಾವರಣದಲ್ಲಿ ನಡೆಯುತ್ತಿತ್ತು. 1.30ರ ಸುಮಾರಿಗೆ ತೀರ್ಪಿನ ಸಾರಾಂಶ ಕಲಾಪಕ್ಕೆ ತಲುಪುತ್ತಿದ್ದಂತೆ ಎಲ್ಲರ ಮುಖದಲ್ಲೂ ನಿರಾಳತೆ ಆವರಿಸಿತ್ತು.

ಅಲ್ಲಿಯವರೆಗೂ ಗಂಭೀರವಾಗಿ ಕುಳಿತಿದ್ದಂತಹ ಶಾಸಕರು ಇದ್ದಕ್ಕಿದ್ದಂತೆ ನಿರಾಳರಾದಂತೆ ಕಂಡುಬಂತು. ಜೆಡಿಎಸ್, ಕಾಂಗ್ರೆಸ್, ಬಿಜೆಪಿಯ ಎಲ್ಲಾ ಶಾಸಕರು ತಮ್ಮ ಸ್ಥಾನದಿಂದ ಎದ್ದು ಹೊರ ಹೋಗಲಾರಂಭಿಸಿದರು. ನಾಯಕರುಗಳ ಮುಖದಲ್ಲೂ ಆವರೆಗೂ ಕಾಣುತ್ತಿದ್ದ ಚಡಪಡಿಕೆ ಇದ್ದಕ್ಕಿದ್ದಂತೆ ತಣ್ಣಗಾಯಿತು.

ಮಂಗಳವಾರದವರೆಗೂ ಯಾವುದೇ ಬೆಳವಣಿಗೆಗಳು ನಡೆಯುವುದಿಲ್ಲ ಎಂಬುದು ಖಚಿತವಾಗುತ್ತಿದ್ದಂತೆ ಪರಸ್ಪರ ಹರಟೆಯಲ್ಲಿ ಶಾಸಕರು ಮಗ್ನರಾದರು. ಒಂದೆಡೆ ಸಂತಾಪ ಸೂಚಕದ ಮೇಲೆ ಚರ್ಚೆ ನಡೆಯುತ್ತಿತ್ತು. ಇತ್ತ ಶಾಸಕರು ತಮ್ಮ ಪಾಡಿಗೆ ತಾವು ಉಭಯ ಕುಶಲೋಪರಿಯಲ್ಲಿ ಮಗ್ನರಾದರು.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ತಮ್ಮ ಪಕ್ಷದ ಶಾಸಕರಿಗೆ ಸೂಚನೆ ನೀಡುತ್ತಿದ್ದುದಲ್ಲದೆ, ಕೆಲವರನ್ನು ಕರೆದು ಮಾತನಾಡಿಸುತ್ತಿದ್ದರು.

ಸಿಎಂ – ಸ್ಪೀಕರ್ ಮಹತ್ವದ ಸಮಾಲೋಚನೆ :
ವಿಧಾನಮಂಡಲ ಕಲಾಪ ಆರಂಭಕ್ಕೂ ಮುನ್ನ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಸ್ಪೀಕರ್ ರಮೇಶ್‍ಕುಮಾರ್ ಅವರು ಮಹತ್ವದ ಸಮಾಲೋಚನೆ ನಡೆಸಿದರು. ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಭೇಟಿ ಚರ್ಚೆಗೆ ಗ್ರಾಸವಾಗಿದೆ. ಸಚಿವರಾದ ಎಚ್.ಡಿ.ರೇವಣ್ಣ, ಕೃಷ್ಣಭೈರೇಗೌಡ ಅವರು ಇಂದು ಸ್ಪೀಕರ್ ಅವರನ್ನು ಭೇಟಿ ಮಾಡಿ ಕೆಲ ಸಮಯ ಚರ್ಚೆ ನಡೆಸಿದರು.

ನಂತರ ಕಲಾಪ ಆರಂಭಗೊಂಡಿತು. ಇದಕ್ಕೂ ಮುನ್ನ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರೂ ಕೂಡ ಸ್ಪೀಕರ್ ಅವರ ಜೊತೆ ಮಾತುಕತೆ ನಡೆಸಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin