ರಮೇಶ್‍ಕುಮಾರ್ ವಿರುದ್ಧ ರೊಚ್ಚಿಗೆದ್ದ ಬಿಜೆಪಿ ಶಾಸಕರು, ಕಲಾಪ ಮುಂದೂಡಿದ ಸ್ಪೀಕರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮಾ.11- ಹಿರಿಯ ಶಾಸಕರ ರಮೇಶ್‍ಕುಮಾರ್ ಹಾಗೂ ಸಚಿವ ಸುಧಾಕರ್ ನಡುವಿನ ಜಟಾಪಟಿ ಹಿನ್ನೆಲೆಯಲ್ಲಿ ನಡೆಯುತ್ತಿರುವ ಗದ್ದಲ ವಿಧಾನಸಭೆಯಲ್ಲಿ ಮುಂದುವರೆದಿದ್ದು, ಕೋಲಾಹಲದ ವಾತಾವರಣ ನಿರ್ಮಿಸಿತು.  ಒಂದು ಹಂತದಲ್ಲಿ ವಿರೋಧ ಪಕ್ಷದವರು ಸಮಾಧಾನಗೊಂಡು ಕಲಾಪಕ್ಕೆ ಸಹಕರಿಸಲು ಮುಂದಾದರೂ ಆಡಳಿತ ಪಕ್ಷದ ಶಾಸಕರು ರೊಚ್ಚಿಗೆದ್ದಿದ್ದರಿಂದ 15 ನಿಮಿಷ ಸದನ ಮುಂದೂಡಬೇಕಾದ ಅನಿವಾರ್ಯತೆ ಎದುರಾಯಿತು.

ಇಂದು ವಿಧಾನಸಭೆಯ ಕಲಾಪ ಆರಂಭಗೊಳ್ಳುತ್ತಿದ್ದಂತೆ ವಿಪಕ್ಷದ ನಾಯಕ ಸಿದ್ದರಾಮಯ್ಯ, ಸಚಿವ ಕೆ.ಎಸ್.ಈಶ್ವರಪ್ಪ ಇಬ್ಬರೂ ಏಕಕಾಲಕ್ಕೆ ಎದ್ದು ನಿಂತು ನಿನ್ನೆಯ ಘಟನೆಯ ಹಿನ್ನೆಲೆಯಲ್ಲಿ ಗಲಾಟೆ ಆರಂಭಿಸಿದರು.  ಆಡಳಿತ ಪಕ್ಷದ ಶಾಸಕರ ಬಗ್ಗೆ ಪ್ರತಿಪಕ್ಷದ ಶಾಸಕರು ರಮೇಶ್‍ಕುಮಾರ್ ಅವರು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಕೂಡಲೇ ಅವರನ್ನು ಸದನದಿಂದ ಹೊರಹಾಕಿ ಎಂದರು.

ಸಿದ್ದರಾಮಯ್ಯ ಅವರು ರಮೇಶ್‍ಕುಮಾರ್ ವಿರುದ್ದ ಸಚಿವ ಸುಧಾಕರ್ ನೀಡಿರುವ ಹೇಳಿಕೆಯಲ್ಲಿ ಹಕ್ಕುಚ್ಯುತಿಯಾಗಿದ್ದು, ನಾನು ನಿನ್ನೆಯೂ ನಿಮ್ಮ ಬಳಿ ಈ ವಿಷಯ ಪ್ರಸ್ತಾಪಿಸಿದ್ದೇನೆ. ಇಂದು ಆ ಕುರಿತಂತೆ ಸೂಚನಾ ಪತ್ರ ಕಳುಹಿಸಿದ್ದೇನೆ. ಹಕ್ಕುಚ್ಯುತಿ ಮಂಡಿಸಲು ಅವಕಾಶ ನೀಡಿ ಎಂದು ಒತ್ತಾಯಿಸಿದರು.  ಈ ಸಂದರ್ಭದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಎರಡೂ ಕಡೆಗಳ ಶಾಸಕರು ಎದ್ದು ನಿಂತು ಕೂಗಾಡಿದ್ದರಿಂದ ಯಾರು ಏನು ಹೇಳುತ್ತಿದ್ದಾರೆ ಎಂಬುದು ಅರ್ಥವಾಗದ ಸನ್ನಿವೇಶ ಸೃಷ್ಟಿಯಾಯಿತು.

ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹಕ್ಕುಚ್ಯುತಿ ಕುರಿತಂತೆ ಎರಡೂ ಕಡೆಯಿಂದಲೂ ಸೂಚನಾ ಪತ್ರ ಬಂದಿದೆ. ಸಿದ್ದರಾಮಯ್ಯನವರೂ ಹಕ್ಕುಚ್ಯುತಿ ಪ್ರಸ್ತಾಪಿಸಿದ್ದಾರೆ. ಸುಧಾಕರ್ ಕೂಡ ತಮಗೆ ಹಕ್ಕುಚ್ಯುತಿಯಾಗಿದೆ ಎಂದು ಸೂಚನಾಪತ್ರ ಕಳುಹಿಸಿದ್ದಾರೆ. ನಿಯಮಾವಳಿ ಪ್ರಕಾರ ನಾನು ಹಕ್ಕುಚ್ಯುತಿಗೆ ಅವಕಾಶಕೊಡಬೇಕು, ಕೊಡುತ್ತೇನೆ. ಅದೇ ರೀತಿ ನಿಯಮಾವಳಿ ಪ್ರಕಾರ ಮೊದಲು ಪ್ರಶ್ನೋತ್ತರ ನಡೆಯಲಿ. ಆನಂತರ ಹಕ್ಕುಚ್ಯುತಿ ಚರ್ಚೆಗೆ ಅವಕಾಶಕೊಡುತ್ತೇನೆ ಎಂದು ಸಮಾಧಾನಪಡಿಸಿದರು.

ನಿಯಮಾವಳಿ ಪ್ರಕಾರ ಪ್ರಶ್ನೋತ್ತರದ ಬಳಿಕ ಹಕ್ಕುಚ್ಯುತಿಗೆ ಕೊಡುವುದಾದರೆ ನನ್ನ ಸಹಮತ ಇದೆ. ಆದರೆ ನಿನ್ನೆಯೇ ನಾನು ಹಕ್ಕುಚ್ಯುತಿಗೆ ಪ್ರಸ್ತಾಪ ಮಾಡಿದ್ದೆ. ಮೊದಲು ನನಗೆ ಅವಕಾಶ ಕೊಡಿ ಎಂದು ಸಿದ್ದರಾಮಯ್ಯ ಮನವಿ ಮಾಡಿದರು.  ಚರ್ಚೆಗೆ ಅವಕಾಶ ಕೊಡುವುದಾಗಿ ಸ್ಪೀಕರ್ ಒಪ್ಪಿದ್ದರಿಂದ ಸಿದ್ದರಾಮಯ್ಯ ಸೇರಿದಂತೆ ಪ್ರತಿಪಕ್ಷದ ಶಾಸಕರು ಸಮಾಧಾನಗೊಂಡು ಕಲಾಪದಲ್ಲಿ ಭಾಗವಹಿಸಲು ಕುಳಿತುಕೊಂಡರು.

ಆದರೆ ಆಡಳಿತ ಪಕ್ಷದ ಶಾಸಕರು ನಿಂತುಕೊಂಡೇ ಗದ್ದಲ ನಡೆಸುತ್ತಿದ್ದರು. ಅವಹೇಳನಕಾರಿಯಾಗಿ ಮಾತನಾಡಿರುವ ರಮೇಶ್‍ಕುಮಾರ್ ಅವರನ್ನು ಸದನದಿಂದ ಹೊರಹಾಕಿ. ನಿನ್ನೆ ವೀರಾವೇಷ ತೋರಿಸಿದ ರಮೇಶ್‍ಕುಮಾರ್ ಇವತ್ತು ಪಲಾಯನವಾದಿಯಾಗಿದ್ದಾರೆ ಎಂದೆಲ್ಲ ಲೇವಡಿ ಮಾಡಿದರು.  ಪ್ರತಿಪಕ್ಷಗಳ ಕಡೆಯಿಂದ ಶಾಂತಿ ಮಂತ್ರ ಜಪಿಸುವ ವೇಳೆ ಆಡಳಿತ ಪಕ್ಷದ ಶಾಸಕರು ಗದ್ದಲ ನಡೆಸುತ್ತಿದ್ದಾಗ ಸಿದ್ದರಾಮಯ್ಯ ಎದ್ದುನಿಂತು, ಇವರು ಸರ್ಕಾರ ನಡೆಸುವ ರೀತಿಯೇ ಇದು? ಇವರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿಲ್ಲ. ಬಾಯಿಗೆ ಬಂದಂತೆಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆಗ ಗದ್ದಲ ತೀವ್ರಗೊಳ್ಳುವ ಸನ್ನಿವೇಶ ಸೃಷ್ಟಿಯಾಗಿದ್ದರಿಂದ ಸಭಾಧ್ಯಕ್ಷರು 15 ನಿಮಿಷಗಳ ಕಾಲ ಕಲಾಪವನ್ನು ಮುಂದೂಡಿದರು.  ಕಲಾಪ ಮುಂದೂಡುವ ಸಂದರ್ಭದಲ್ಲಿ ಅಸಂಸ್ಕøತರಂತೆ ವರ್ತಿಸಲು ಈ ಸದನವೇ ಬೇಕಾ ಎಂದು ಸಚಿವ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದಾಗ, ಪ್ರತಿಪಕ್ಷಗಳ ಶಾಸಕರಿಂದಲೂ ತಿರುಗೇಟಿನ ಮಾತುಗಳು ಕೇಳಿಬಂದವು.
ಸದನ ಮುಂದೂಡಿಕೆಯಾದರೂ ಆಡಳಿತ ಮತ್ತು ಪ್ರತಿಪಕ್ಷದ ಯಾವ ಶಾಸಕರೂ ಸಭಾಂಗಣದಿಂದ ಹೊರಗೆ ಹೋಗದೇ ತಾವಿದ್ದ ಜಾಗದಲ್ಲಿ ಕುಳಿತಿಕೊಂಡಿದ್ದು ವಿಶೇಷವಾಗಿತ್ತು.

ಈ ಹಂತದಲ್ಲಿ ರಮೇಶ್‍ಕುಮಾರ್ ವಿರುದ ಸುಧಾಕರ್ ಮತ್ತು ಬಿ.ಸಿ.ಪಾಟೀಲ್ ಆಕ್ರೋಶದ ಮಾತುಗಳನ್ನಾಡುತ್ತಿದ್ದರು. ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಖಾನ್ ಅವರು, ನೀವು ಮೋಸ ಮಾಡಿ ಅಲ್ಲಿಗೆ ಹೋದವರು ಎಂದು ಹೇಳಿದಾಗ ಪಕ್ಷಾಂತರಗೊಂಡ ಶಾಸಕರು ಆಕ್ರೋಶ ವ್ಯಕ್ತಪಡಿಸಿದರು.

ಆಗ ಭೈರತಿ ಬಸವರಾಜ್ ಅವರು, ಸಾಕು ಸುಮ್ಮನಿರಿ ಗೊತ್ತಿದೆ ನಿಮ್ಮದು ಎಂದು ಕಿಡಿಕಾರಿದರು. ಹೀಗೆ ಮಾತನಾಡುತ್ತಿದ್ದರೆ ನಿಮ್ಮ ಎಲ್ಲ ಬಂಡವಾಳವನ್ನು ಬಯಲಿಗೆಳೆಯಬೇಕಾಗುತ್ತದೆ ಎಂದು ಬೆದರಿಕೆ ಹಾಕಿದರು. ಇದಕ್ಕೆ ಕಾಂಗ್ರೆಸ್ ಶಾಸಕರು ಅದೇನು ಹೇಳುತ್ತೀರ ಹೇಳಿ ಎಂದು ಪ್ರತಿ ಸವಾಲು ಹಾಕಿದ ಪ್ರಸಂಗ ನಡೆಯಿತು.

Facebook Comments