ಇದೇ 24ರಂದು ವಿಧಾನಮಂಡಲ ಕಲಾಪಗಳ ಆತ್ಮಾವಲೋಕನ ವಿಚಾರ ಸಂಕಿರಣ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.17- ವಿಧಾನಮಂಡಲದ ಕಲಾಪಗಳ ಸಂದರ್ಭಗಳಲ್ಲಿ ಅರ್ಥಪೂರ್ಣವಾದ ಚರ್ಚೆ ನಡೆಯಬೇಕೆಂಬ ಸದುದ್ದೇಶದಿಂದ ಕಾಮನ್‍ವೆಲ್ತ್ ಸಂಸದೀಯ ಸಂಘವು ಇದೇ 24ರಂದು ಸಂಸದೀಯ ಮೌಲ್ಯಗಳ ಕುಸಿತವನ್ನು ತಡೆಗಟ್ಟುವ ನಿಟ್ಟಿನಲ್ಲಿ ಒಂದು ಆತ್ಮಾವಲೋಕನ ಎಂಬ ವಿಚಾರ ಸಂಕಿರಣ ಏರ್ಪಡಿಸಿದೆ. ಅಂದು ಬೆಳಗ್ಗೆ 11 ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಗಣ್ಯರೊಂದಿಗೆ ಒಂದು ದಿನದ ಆತ್ಮಾವಲೋಕನ ಸಭೆಯನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ಸಭೆಗೆ ವಿಧಾನಮಂಡಲದ ಉಭಯ ಸದನಗಳ ಹಿಂದಿನ ಸಭಾಧ್ಯಕ್ಷರು, ಸಭಾಪತಿಗಳು, ಪತ್ರಕರ್ತರು, ಸಾಹಿತಿಗಳು, ಬರಹಗಾರರು, ಚಿಂತನಕಾರರು ಸೇರಿದಂತೆ ಹಲವು ಗಣ್ಯರನ್ನು ಆಹ್ವಾನಿಸಲಾಗಿದೆ ಎಂದು ತಿಳಿಸಿದರು. ಇತ್ತೀಚಿನ ದಿನಗಳಲ್ಲಿ ಸದನಗಳಲ್ಲಿ ಸಂಸದೀಯ ಮೌಲ್ಯಗಳು ಕುಸಿಯುತ್ತಿರುವ ಕಾರಣ ಈ ಆತ್ಮಾವಲೋಕನ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿ ಮುಂದಿನ ದಿನಗಳಲ್ಲಿ ಯಾವ ವಿಷಯಗಳನ್ನು ಹೇಗೆ ಚರ್ಚಿಸಬೇಕು ಎಂಬುದರ ಬಗ್ಗೆ ಚರ್ಚೆ ಮಾಡಲಾಗುವುದು. ಇದರಿಂದ ಹೊಸದಾಗಿ ಆಯ್ಕೆಯಾಗಿ ಬಂದ ಸದಸ್ಯರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ಸದನದಲ್ಲಿ ಅರ್ಥಪೂರ್ಣ ಚರ್ಚೆ ನಡೆಯಬೇಕೆಂಬುದು ಎಲ್ಲರ ಸದುದ್ದೇಶ. ಆದರೆ ಕೆಲವು ಸಂದರ್ಭಗಳಲ್ಲಿ ಗಲಾಟೆ, ಗದ್ದಲ, ಧರಣಿ ಕಾರಣಗಳಿಗಾಗಿ ಅಧಿವೇಶನವನ್ನು ಮೊಟಕುಗೊಳಿಸಲಾಗುತ್ತದೆ. ಮುಂದೆ ಇದು ಮರುಕಳಿಸದಂತೆ ಆತ್ಮಾವಲೋಕನ ಸಭೆ ಆಯೋಜಿಸಲಾಗಿದೆ. ಇಲ್ಲಿ ವ್ಯಕ್ತವಾಗುವ ಅಭಿಪ್ರಾಯವನ್ನು ಮುಂದಿನ ದಿನಗಳಲ್ಲಿ ಅಳವಡಿಸಿಕೊಳ್ಳಲಾಗುವುದು ಎಂದು ಕಾಗೇರಿ ತಿಳಿಸಿದರು.

Facebook Comments