ಮನೆ ಕುಸಿದು ಬಿದ್ದು 8 ಮಕ್ಕಳು ಸೇರಿ 11 ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ,ಜೂ.10-ಮನೆ ಕುಸಿದುಬಿದ್ದು ಎಂಟು ಮಕ್ಕಳು ಸೇರಿದಂತೆ 11 ಮಂದಿ ಮೃತಪಟ್ಟು ಇತರ ಏಳು ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಮುಂಬೈನ ಮಲ್ವಾನಿ ಪ್ರದೇಶದಲ್ಲಿ ಸಂಭವಿಸಿದೆ.

ಅಬ್ದುಲ್ ಹಮೀದ್ ರಸ್ತೆಯಲ್ಲಿರುವ ಮನೆಯೊಂದು ಪಕ್ಕದ ಕಟ್ಟಡದ ಮೇಲೆ ಉರುಳಿಬಿದ್ದ ಪರಿಣಾಮ ಈ ಘಟನೆ ಸಂಭವಿಸಿದೆ ಎಂದು ಮುಂಬೈ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಮನೆ ಕುಸಿದು ಬೀಳುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಪರಿಹಾರ ಕಾರ್ಯ ಕೈಗೊಂಡಾಗ ಅವಶೇಷಗಳಡಿ ಇದ್ದ ಎಂಟು ಮಕ್ಕಳ ಶವಗಳು ಪತ್ತೆಯಾಗಿವೆ.

ಎಂಟು ಮಕ್ಕಳು ಸೇರಿದಂತೆ 11 ಮಂದಿ ಮೃತಪಟ್ಟಿದ್ದು ಗಂಭೀರವಾಗಿ ಗಾಯಗೊಂಡಿರುವ ಏಳು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಒಬ್ಬನ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಅವಶೇಷಗಳಡಿ ಮತ್ತಷ್ಟು ಮಂದಿ ಸಿಲುಕಿಕೊಂಡಿರುವ ಸಾಧ್ಯತೆ ಇದ್ದು ಪರಿಹಾರ ಕಾರ್ಯ ಮುಂದುವರೆಸಲಾಗಿದೆ.

ಮನೆಯೊಂದು ಪಕ್ಕದ ಮನೆ ಮೇಲೆ ಉರುಳಿಬಿದ್ದು ಈ ದುರ್ಘಟನೆ ಸಂಭವಿಸಿದೆ. ಅವಘಡ ಸಂಭವಿಸಿದ ಸ್ಥಳದಲ್ಲೇ ಇರುವ ಮೂರಂತಸ್ತಿನ ಕಟ್ಟಡವೂ ಶಿಥಿಲಗೊಂಡಿದೆ ಎಂದು ವರದಿಯಾಗಿದೆ.

Facebook Comments

Sri Raghav

Admin