ಎಟಿಎಂಗಳಿಗೆ ಕನ್ನ ಹಾಕಿ ಬ್ಯಾಂಕ್‍ಗಳನ್ನೇ ಬೆಸ್ತು ಬೀಳಿಸಿದ ಐನಾತಿ ಕಳ್ಳರು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.3- ಎಟಿಎಂನಿಂದ ಹಣ ಡ್ರಾ ಮಾಡಿ ಎಟಿಎಂ ಮಷಿನ್ ಆಫ್ ಮಾಡಿ ಹಣ ನಮಗೆ ಸಿಕ್ಕಿಲ್ಲ ಎಂದು ಬ್ಯಾಂಕ್‍ನ ಕಾಲ್‍ಸೆಂಟರ್‍ಗೆ ಪೊನ್ ಮಾಡಿ ಖಾತೆಗಳಿಗೆ ಮತ್ತೆ ಹಣ ಹಾಕಿಸಿಕೊಳ್ಳುತ್ತಿದ್ದ ಐನಾತಿ ಅಂತಾರಾಜ್ಯ ಕಳ್ಳರನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ. ಒಂದೇ ಕುಟುಂಬದ ಸದಸ್ಯರು ವ್ಯವಸ್ಥಿತವಾಗಿ ಸಂಚು ರೂಪಿಸಿ ವಿಮಾನಗಳಲ್ಲಿ ಒಂದು ನಗರದಿಂದ ಮತ್ತೊಂದು ನಗರಕ್ಕೆ ಸಂಚರಿಸಿ, ಐಷಾರಾಮಿ ಹೊಟೇಲ್‍ಗಳಲ್ಲಿ ಉಳಿದುಕೊಂಡು, ಎಟಿಎಂಗಳಲ್ಲಿ ಹಣ ಡ್ರಾ ಮಾಡಿ ಮತ್ತೆ ಅದನ್ನು ಬ್ಯಾಂಕ್ ಖಾತೆಗಳಿಂದ ಹಾಕಿಸಿಕೊಂಡು ವಿಲಾಸಿ ಜೀವನ ನಡೆಸುತ್ತಿದ್ದ ರೋಚಕ ವಿಷಯಗಳನ್ನು ಪೊಲೀಸರು ತನಿಖೆ ವೇಳೆ ಪತ್ತೆ ಹಚ್ಚಿದ್ದಾರೆ.

ಹರಿಯಾಣರಾಜ್ಯದ ನೂಹಾ ಜಿಲ್ಲೆಯ ಬೀಬೀಪುರ ಗ್ರಾಮದ ಸುಲೇಮಾನ್ ಗಲ್ಲಿಯ ಶಹಜಾದ್(28), ಬಾಯಿ ಗ್ರಾಮದ ಶಾಹೀದ್(23) ಎಂಬ ಇಬ್ಬರನ್ನು ಪೊಲೀಸರು ಬಂಧಿಸಿ ಅವರಿಂದ ವಿವಿಧ ಬ್ಯಾಂಕ್‍ಗಳ 25 ಎಟಿಎಂ ಕಾರ್ಡ್‍ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಭದ್ರತಾ ಸಿಬ್ಬಂದಿಗಳಿಲ್ಲದಿರುವ ಎಟಿಎಂ ಸೆಂಟರ್‍ಗಳನ್ನು ಹುಡುಕಿ ಪ್ಲ್ಯಾನ್ ರೂಪಿಸಿಕೊಳ್ಳುತ್ತಿದ್ದರು. ಮೊದಲು ಒಬ್ಬ ವ್ಯಕ್ತಿ ಎಟಿಎಂ ಸೆಂಟರ್‍ಗೆ ಹೋಗಿ ಅಲ್ಲಿನ ಸಿಸಿ ಟಿವಿ ಕ್ಯಾಮೆರಾವನ್ನು ಬೇರೆಡೆ ತಿರುಗಿಸುತ್ತಿದ್ದ. ನಂತರ ಮತ್ತೊಬ್ಬ ಹೋಗಿ ಎಟಿಎಂ ಕಾರ್ಡ್‍ನ್ನು ಮಷಿನ್‍ಗೆ ಹಾಕಿ ಪಾರ್ಸ್‍ವರ್ಡ್ ಒತ್ತಿ ಹಣ ಡ್ರಾ ಮಾಡುತ್ತಿದ್ದ.

ಮಷಿನ್‍ನಿಂದ ಹಣ ಹೊರಬರುವಾಗ 5-10 ಸೆಕೆಂಡ್‍ಗಳಲ್ಲಿ ಬೀಫ್ ಸೌಂಡ್‍ಬರುತ್ತದೆ. ಏಕಾಏಕಿ ಹಣ ತೆಗೆದುಕೊಳ್ಳದೆ, ಬಿಗಿಯಾಗಿ ನೋಟುಗಳನ್ನು ಒಬ್ಬ ವ್ಯಕ್ತಿ ಹಿಡಿದುಕೊಂಡಿರುತ್ತಾನೆ. ಮತ್ತೊಬ್ಬ ಆರೋಪಿ ಎಟಿಎಂ ಯಂತ್ರದ ವಿದ್ಯುತ್ ಸರಬರಾಜು ಸ್ವಿಚ್ ಆಫ್ ಮಾಡುತ್ತಾನೆ. ನಂತರ ಡ್ರಾ ಆಗಿದ್ದ ಹಣವನ್ನು ಆರೋಪಿ ಹೊರಗೆಳೆದುಕೊಳ್ಳುತ್ತಾರೆ. ಇದರಿಂದ ಗೊಂದಲ ಉಂಟಾಗಿ ಹಣ ಡ್ರಾ ಆಗಿದೆಯೋ, ಇಲ್ಲವೋ ಎಂಬ ನಿರ್ಣಯಕ್ಕೆ ಏಕಾಏಕಿ ಬರಲು ಆಗುವುದಿಲ್ಲ.

ಈ ತಾಂತ್ರಿಕ ಲೋಪವನ್ನು ತಿಳಿದುಕೊಂಡಿದ್ದ ಅಲ್ಲಿಂದಲೇ ಕಾಲ್‍ಸೆಂಟರ್‍ಗೆ ಪೊನ್ ಮಾಡಿ ಹಣ ಬಂದಿಲ್ಲ ಎಂದು ದೂರು ದಾಖಲಿಸುತ್ತಿದ್ದರು. ಬ್ಯಾಂಕ್‍ನವರು ಆರ್‍ಬಿಐನ ನಿಯಮಕ್ಕೆ ಬದ್ಧರಾಗಿರುವುದರಿಂದ ನಿಗದಿತ ಸಮಯದೊಳಗಾಗಿ ಎಟಿಎಂ ಕಾರ್ಡ್‍ನ ಖಾತೆಗೆ ಹಣವನ್ನು ಮರು ಜಮಾ ಮಾಡುತ್ತಿದ್ದರು.ಈ ರೀತಿ ದೇಶದ ದೆಹಲಿ, ಕೋಲ್ಕತ್ತಾ, ಮುಂಬೈ, ಚೆನ್ನೈ, ಬೆಂಗಳೂರು ಸೇರಿದಂತೆ ವಿವಿಧ ನಗರಗಳ ಎಟಿಎಂಗಳಲ್ಲಿ ಆರೋಪಿಗಳು ಅತಿ ಬುದ್ಧಿವಂತಿಕೆಯಿಂದ ಹಣ ಲಪಟಾಯಿಸುತ್ತಿದ್ದರು.

ಈ ರೀತಿಯ ಕೃತ್ಯ ಎಸಗಲು ಆರೋಪಿಗಳು ತಮ್ಮದೇ ಕುಟುಂಬದ ಸದಸ್ಯರು, ಸ್ನೇಹಿತರು ಹಾಗೂ ಸಂಬಂಧಿಕರ ಹೆಸರುಗಳಲ್ಲಿ ಸ್ಟೇಟ್‍ಬ್ಯಾಂಕ್ ಆಫ್ ಇಂಡಿಯಾ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಆಕ್ಸಿಸ್ ಬ್ಯಾಂಕ್, ಕಾಪೆರ್ರೇಷನ್ ಬ್ಯಾಂಕ್, ಕೆನರಾ ಬ್ಯಾಂಕ್ ಸೇರಿದಂತೆ ಹಲವಾರು ಬ್ಯಾಂಕ್‍ಗಳಲ್ಲಿ ಖಾತೆ ತೆರೆದು ಎಟಿಎಂ ಕಾರ್ಡ್‍ಗಳನ್ನು ಪಡೆದುಕೊಂಡಿದ್ದರು.

ಎಟಿಎಂಗಳಲ್ಲಿ ಹಣ ಲಪಟಾಯಿಸುವ ಸಲುವಾಗಿಯೇ ಬೇರೆ ಬೇರೆ ಪ್ರತಿಷ್ಠಿತ ನಗರಗಳಿಗೆ ವಿಮಾನಗಳಲ್ಲಿ ಪ್ರಯಾಣಿಸಿ ಐಷಾರಾಮಿ ಹೊಟೇಲ್‍ಗಳಲ್ಲಿ ತಂಗುತ್ತಿದ್ದರು.
ಕಳೆದ ನ.30ರಂದು ದೆಹಲಿ ಮೂಲದ ಟ್ರಾನ್ಸ್‍ಕ್ಷನ್ ಸಲೂಷನ್ ಇಂಟರ್ ನ್ಯಾಷನಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ಏರಿಯಾ ಮ್ಯಾನೇಜರ್ ಕುದ್ಹಾ ಬಕಾಷ್ ಖಾನ್ ಅವರು ಯಶವಂತಪುರ ಪೊಲೀಸರಿಗೆ ದೂರು ನೀಡಿದ್ದರು.

ತಮ್ಮ ಕಂಪನಿ ದೇಶಾದ್ಯಂತ ಸುಮಾರು 14,000 ಎಟಿಎಂಗಳನ್ನು ನಿರ್ವಹಣೆ ಮಾಡುತ್ತಿದೆ. ಯಾರೋ ದುಷ್ಕರ್ಮಿಗಳು ಎಟಿಎಂ ಕಾರ್ಡ್‍ಗಳನ್ನು ಬಳಸಿ ಹಣ ಡ್ರಾ ಮಾಡಿಕೊಂಡು ನಂತರ ಹಣ ಬಂದಿಲ್ಲ ಎಂದು ಬ್ಯಾಂಕ್‍ನಿಂದಲೂ ತಮ್ಮ ಖಾತೆಗೆ ಹಣ ಪಡೆದುಕೊಳ್ಳುತ್ತಿದ್ದಾರೆ. ಆಗಸ್ಟ್ ತಿಂಗಳಿನಿಂದ ಈವರೆಗೂ ಬೆಂಗಳೂರಿನ ವಿವಿಧ ಎಟಿಎಂ
ಸೆಂಟರ್‍ಗಳಲ್ಲಿ ಲಕ್ಷಾಂತರ ರೂ. ಹಣ ಮೋಸದಿಂದ ಹಣ ಡ್ರಾ ಆಗಿದೆ ಎಂದು ಯಶವಂತಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಇನ್ನಿಬ್ಬರ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.

Facebook Comments