ಆತ್ಮ ನಿರ್ಭರವೋ…? ಆತ್ಮ ಬರ್ಬರವೋ….? ಆತ್ಮಾವಲೋಕನ ಯಾವಾಗ..?

ಈ ಸುದ್ದಿಯನ್ನು ಶೇರ್ ಮಾಡಿ

ಕಳೆದ ಜನವರಿ 25ರಂದು ದೊಡ್ಡ ದೊಡ್ಡ ವಿಶ್ವವಿದ್ಯಾಲಯಗಳು ಸೇರಿದಂತೆ ದೇಶದ ಹಲವು ಕಡೆ ಪ್ರಜ್ಞಾವಂತರು,ಸಾಮಾಜಿಕ ಕಾರ್ಯಕರ್ತರು, ಸಾಹಿತಿಗಳು ಎಲ್ಲರು ಸೇರಿ ರಾಷ್ಟ್ರೀಯ ಮತದಾರರ ದಿನವನ್ನು ವಿಜೃಂಭಣೆಯಿಂದ ಆಚರಿಸುವದರ ಮೂಲಕ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮತದಾನದ ಪಾವಿತ್ರ್ಯತೆ ಈ ದೇಶದ ಅಭಿವೃದ್ಧಿಗೆ ಎಷ್ಟೊಂದು ಪೂರಕ ಎಂಬುದನ್ನು ಭಾಷಣಗಳಲ್ಲಿ ಲೇಖನಗಳಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರೂ ಸಹ ಕಳೆದ ಅರವತ್ತು ವರ್ಷಗಳಿಂದ ತಲುಪಬೇಕಾದವರಿಗೆ ತಲುಪದಿರುವುದೇ ದುರ್ದೈವದ ಸಂಗತಿ.

15ನೇ ಶತಮಾನದಲ್ಲಿ ಇಂಗ್ಲೆಂಡಿನ ದೊರೆಯಾಗಿದ್ದ ಹೆನ್ರಿ ಕೇಟ್ ತುಂಬಾ ಸ್ವಾರಸ್ಯಕರವಾಗಿ ಆಂಗ್ಲ ಭಾಷೆಯಲ್ಲಿ ಹೇಳಿದ್ದಾನೆ The problem with political jokes is that they get elected ನಮ್ಮ ಭಾರತದ ಚುನಾವಣೆ ವ್ಯವಸ್ಥೆ ಅದರಲ್ಲೂ ನಮ್ಮ ದೇಶದ ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನೇ ಕುರಿತು ಈ ಸಾಲುಗಳು ಹೆನ್ರಿಕೇಟ್ ಬಾಯಿಂದ ಮೂಡಿ ಬಂದವೇ ಎಂಬ ಅನುಮಾನ ನಮ್ಮನ್ನು ಕಾಡುವುದಂತು ಸತ್ಯ..!

ಭಾರತ ದೇಶದ ಗಣತಂತ್ರದ ಒಕ್ಕೂಟ ವ್ಯವಸ್ಥೆಯಲ್ಲಿ ಚುನಾವಣಾ ಸಂದರ್ಭದಲ್ಲಿ ಮತದಾರರನ್ನು ಸೆಳೆಯಲು ಕಣ್ಣೀರು ಸುರಿಸುವವರು ಒಂದು ಕಡೆ ಆದರೆ, ಇಂದ್ರಲೋಕವನ್ನೇ ಭೂಮಿಯ ಮೇಲೆ ಸೃಷ್ಟಿ ಮಾಡುವ ಮಾತುಗಳನ್ನಾಡುವ ನಾಯಕರಿಗೆ ಕೊರತೆ ಇಲ್ಲ.ಭಾರತದಲ್ಲಿ ಶೇಕಡಾ ಅರವತ್ತಕ್ಕಿಂಕ ಹೆಚ್ಚು ಮಂದಿ ಅಶಿಕ್ಷಿತರೇ ಇರುವ ಅಮಾಯಕ ಪ್ರಜೆಗಳು ಎಲ್ಲವನ್ನೂ ಎಲ್ಲರನ್ನು ಅತಿ ಬೇಗ ನಂಬಿ ಬಿಡುತ್ತಾರೆ.

ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಕೋಟಿ ಕೋಟಿ ಭ್ರಷ್ಟಾಚಾರದ ದುರಾಡಳಿತ, ಪೆಟ್ರೋಲ್ ಡೀಸೆಲ್ ಗ್ಯಾಸ್ ಸೇರಿದಂತೆ ದೈನಂದಿನ ಮೂಲಭೂತ ವಸ್ತುಗಳ ಬೆಲೆ ಆಕಾಶಕ್ಕೆ ಮುಟ್ಟಿ ಜನ ಕಾಂಗ್ರೆಸ್ ಪಕ್ಷಕ್ಕೆ ಹಿಡಿ ಹಿಡಿ ಶಾಪ ಹಾಕುತ್ತಿರುವ ಸಂದರ್ಭದಲ್ಲಿ ದೇಶದ ಜನರ ಕೋಟಿ ಕೋಟಿ ಮನಸ್ಸುಗಳಲ್ಲಿ ಆಶಾಕಿರಣವಾಗಿ ಮೂಡಿ ಬಂದವರೇ ನರೇಂದ್ರ ಮೋದಿ.ಅವರ ಮೇಲೆ ಆಟೋರಿಕ್ಷ ಚಾಲಕ ಅಪಾರ ನಂಬಿಕೆ ಇಟ್ಟಿದ್ದ, ಬೀದಿ ಬದಿಯ ವ್ಯಾಪರಿ ಆಸೆ ಕಂಗಳಿಂದ ದೃಷ್ಟಿ ನೆಟ್ಟಿದ್ದ. ಉದ್ಯಮಿ, ಮುಚ್ಚಿಹೋಗುತ್ತಿರುವ ತನ್ನ ಕೈಗಾರಿಕೆಯ ಪ್ರಾಣ ಉಳಿಸುವ ಕನಸು ಕಟ್ಟಿದ್ದ.

ರೈತ ತನ್ನ ಹಣೆಯ ಮೇಲಿನ ಬೆವರು ಒರೆಸಿಕೊಳ್ಳುತ್ತಲೇ ಮೋದಿಯವರ ಹೆಸರನ್ನು ಜಪ ಮಾಡುತ್ತಿದ್ದ.ಆದರೆ ಕಳೆದ ಆರು ವರ್ಷಗಳಿಂದ ನರೇಂದ್ರ ಮೋದಿಯವರ ಸರ್ಕಾರದಲ್ಲಿ ನಡೆದಿದ್ದಾಲ್ಲವು ಬೇರೆಯದೇ ಇತಿಹಾಸ. ನರೇಂದ್ರ ಮೋದಿಯವರು ತಮ್ಮ ಅದ್ಬುತ ವಾಕ್ ಚಾತುರ್ಯದಿಂದ ಕೇವಲ ಭಾಷಣದಿಂದ ಜನರನ್ನು ಸಂತೋಷ ಪಡಿಸಿದ್ದಷ್ಟೇ ಅವರ ಅಮೋಘ ಸಾಧನೆ ಎಂಬುದು ವಿರೋಧ ಪಕ್ಷಗಳು ಹೇಳುವ ಮಾತು. ಈ ಹೇಳಿಕೆಯನ್ನು ಪರಾಮರ್ಶಿಸಿ ಅವಲೋಕನ ಮಾಡಿದಾಗ ಕಂಡು ಬರುವುದು ವಿರೋಧ ಪಕ್ಷದವರ ಮಾತುಗಳು ಸತ್ಯಕ್ಕೆ ಅಷ್ಟೊಂದು ದೂರವಿಲ್ಲ ಎಂಬುದಂತು ಅಷ್ಟೇ ಸತ್ಯ.

ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಡಿಜಿಟಲ್ ರೂಪದಲ್ಲಿ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ರವರು ಮಂಡಿಸಿರುವ 2020-21ರ ಸಾಲಿನ ಕೇಂದ್ರ ಸರ್ಕಾರದ ಬಜೆಟ್ ದೇಶದಲ್ಲಿ ಚರ್ಚೆಗೆ ಗ್ರಾಸವಾಗಿರುವುದು ಸುಳ್ಳಲ್ಲ.

ಬಡವರು ವೈದ್ಯರ ಸಲಹೆ ಮೇರೆಗೆ ಆರೋಗ್ಯ ಕಾಪಾಡಿಕೊಳ್ಳಲು ಆರ್ಥಿಕ ಮುಗ್ಗಟ್ಟಿನಲ್ಲಿದ್ದರು ಸಹ ಕಷ್ಟಪಟ್ಟುಕೊಂಡು ತಿನ್ನುವ ಸೇಬಿನಿಂದ ಹಿಡಿದು ಪೆಟ್ರೋಲ್ ಡೀಸೆಲ್ ಗ್ಯಾಸ್ ಮೇಲಿನ ಸುಂಕ ಹೆಚ್ಚಿಸುವುದರ ಮುಖಾಂತರ ಗಾಯದ ಮೇಲೆ ಬರೆ ಎಳೆದಿದ್ದಾರೆ. ಅಷ್ಟೇ ಅಲ್ಲದೇ ರಸಗೊಬ್ಬರ, ಕಲ್ಲಿದ್ದಲು, ಪಾಮ್ ಆಯಿಲ್, ಕಡಲೆ, ಬಟಾಣಿ, ಹತ್ತಿ ಹೀಗೆ ಮೂಲಭೂತ ಗೃಹೋಪಯೋಗಿ ವಸ್ತುಗಳ ಮೇಲೆ ನರೇಂದ್ರ ಮೋದಿಯವರ ಸರ್ಕಾರ ಸುಂಕ ಹೆಚ್ಚಿಸುವುದರ ಮುಖಾಂತರ ಸಾಮಾನ್ಯ ಜನರ ಮೇಲೆ ಹೊರೆ ಹೇರಲಾಗಿದೆ. ಈಗಾಗಲೇ ಕೊರೋನ ಹೊಡೆತದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ತತ್ತರಿಸಿ ಹೋಗಿರುವ ಜನರ ದೈನಂದಿನ ಜೀವನ ಮತ್ತಷ್ಟು ದುಸ್ಥಿತಿಗೆ ತಲುಪುವುದಂತು ಖಚಿತ.

ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಜೈ ಜವಾನ್ ಜೈ ಕಿಸಾನ್ ಘೋಷ ವಾಕ್ಯವನ್ನು ಪದೇ ಪದೇ ಪ್ರಸ್ತಾಪಿಸುವ ಮೋದಿ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಳೆದ 65 ದಿನಗಳಿಂದ ನಡೆಸುತ್ತಿರುವ ರೈತರ ಹೋರಾಟಕ್ಕೆ ಮತ್ತಷ್ಟು ಕಿಚ್ಚು ಹಚ್ಚುವ ಕೆಲಸವನ್ನು ಅತ್ಯಂತ ಜಾಣ್ಮೆಯಿಂದ ಮಾಡಿ ಮುಗಿಸಿದ್ದಾರೆ.

ಬ್ರಿಟೀಷರ ಈಸ್ಟ್ ಇಂಡಿಯಾ ಕಂಪನಿಯ ಮಾದರಿಯಲ್ಲಿ ಪ್ರಸ್ತುತ ಬಜೆಟ್ ನಲ್ಲಿ ಯಾವುದೇ ಸರಕಿನ ಮೇಲೆ ನೇರವಾಗಿ ತೆರಿಗೆ ಹೆಚ್ಚಿಸದೇ ಕೃಷಿ ಮೂಲ ಸೌಕರ್ಯ ಸೆಸ್ ಹೇರಿ ರೈತರ ಹೆಸರಲ್ಲಿ ಪರೋಕ್ಷವಾಗಿ ಸರ್ಕಾರದ ಆದಾಯವನ್ನು ಹೆಚ್ಚಿಸಲು ಹೊರಟಿರುವುದು ಅತ್ಯಂತ ಖಂಡನೀಯ ಮತ್ತು ಕೃಷಿ ವಲಯಕ್ಕೆ ಮಾರಕ.

ಚುನಾವಣೆಯ ಸೋಲು-ಗೆಲುವಿಗಿಂತ ದೇಶದ ಅಭಿವೃದ್ದಿಯಷ್ಟೇ ಭಾರತೀಯ ಜನತಾ ಪಕ್ಷಕ್ಕೆ ಮುಖ್ಯ ಎಂದು ಹೇಳುತ್ತಿದ್ದ ಮೋದಿಯವರ ಮಾತುಗಳು ಅಕ್ಷರಶಃ ಸುಳ್ಳು ಎಂದು ಈ ಬಜೆಟ್‍ನಲ್ಲಿ ಸಾಬೀತಾಗಿದೆ. ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ಮತ್ತು ಅಸ್ಸಾಂ ರಾಜ್ಯಗಳಲ್ಲಿ ಮುಂಬರುವ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮತದಾರರನ್ನು ಒಲಿಸಿಕೊಳ್ಳಲು ಆ ರಾಜ್ಯಗಳಿಗೆ ವಿಶೇಷ ಒತ್ತು ಕೊಟ್ಟು ಬಜೆಟ್ ನಲ್ಲಿ ಅತಿ ಹೆಚ್ಚು ಅನುದಾನವನ್ನು ನೀಡಿರುವುದು ಚುನಾವಣೆಯ ತಂತ್ರವಲ್ಲದೇ ಮತ್ತೇನು..?

ದೇಶದ ಜಿಡಿಪಿ -7.7ಕ್ಕೆ ಕುಸಿದಿದೆ ಮತ್ತೊಂದು ಕಡೆ ಯುವಶಕ್ತಿ ಕೊರೋನ ಪರಿಣಾಮದಿಂದ ಉದ್ಯೋಗ ಕಳೆದುಕೊಂಡು ಕೆಲಸಕ್ಕಾಗಿ ಪರದಾಡುತ್ತಿದ್ದಾರೆ. ಶೇಕಡಾ ಎಂಬತ್ತರಷ್ಟು ಸಣ್ಣ ಮತ್ತು ಮದ್ಯಮ ಕೈಗಾರಿಕೆಗಳನ್ನು ಹೊಂದಿರುವ ಭಾರತ ದೇಶದಲ್ಲಿ ಉದ್ಯಮಿಗಳು ಎದುರಿಸುತ್ತಿರುವ ಸವಾಲುಗಳು, ಸಂಕಷ್ಟಗಳಿಗೆ ಲೆಕ್ಕವೇ ಇಲ್ಲ. ಒಂದೇ ಮಾತಿನಲ್ಲಿ ಹೇಳುವುದಾದರೆ ರೈತ ದೇಶದ ಬೆನ್ನಲುಬಾದರೆ ಉದ್ಯಮಿ ದೇಶದ ಕಾಲುಗಳು.ಆದರೆ ಸಚಿವೆ ನಿರ್ಮಲ ಸೀತರಾಮನ್ ರವರ ಬಜೆಟ್‍ನಲ್ಲಿ ವಿಶೇಷ ಪ್ಯಾಕೇಜ್ ನೀಡಿ ಆ ಕಾಲುಗಳಿಗೆ ಶಕ್ತಿ ನೀಡುವ ಬದಲು ಕಾಲುಗಳನ್ನು ಕತ್ತರಿಸುವ ಕೆಲಸ ಮಾಡಲಾಗಿದೆ ಎಂದು ಉದ್ಯಮಿಗಳು ಅಳಲು ತೋಡಿಕೊಂಡಿದ್ದಾರೆ.

ಅದೇನೆ ಇರಲಿ ಯುಪಿಎ ಸರ್ಕಾರದ ಭ್ರಷ್ಟಾಚಾರ ಮತ್ತು ದುರಾಡಳಿತಕ್ಕೆ ಬೇಸತ್ತ ಜನ ನರೇಂದ್ರ ಮೋದಿಯವರ ಮೇಲೆ ನಂಬಿಕೆ ಇಟ್ಟು ಸತತ ಎರಡನೇ ಬಾರಿಗೆ ದೇಶದ ಅಧಿಕಾರದ ಚುಕ್ಕಾಣಿ ನೀಡಿದ್ದಾರೆ. ಆದರೆ ಆ ಜನರ ನಂಬಿಕೆಗೆ ನ್ಯಾಯ ಸಲ್ಲಿಸುವ ಕೆಲಸ ಮೋದಿ ಸರ್ಕಾರದಲ್ಲಿ ನಡೆಯುತ್ತಿಲ್ಲವಲ್ಲ ಎಂಬುದೇ ರಾಷ್ಟ್ರವಾದಿಗಳ ನೋವು.

# ಕೈಗಾರಿಕಾ ಸಂಘಟನೆಗಳ ಕುಂಭಕರ್ಣ ನಿದ್ರೆ:
ಕೈಗಾರಿಕೆಗಳು ನಷ್ಟಕ್ಕೀಡಾಗಿ ಮುಚ್ಚಲ್ಪಡುತ್ತಿದ್ದರೂ ಕೂಡ ಇದರ ಬಗ್ಗೆ ಸರ್ಕಾರದ ಲೋಪ ದೋಷಗಳನ್ನು ತಿದ್ದಿ ಹೇಳಬೇಕಾಗಿದ್ದ ಕೈಗಾರಿಕಾ ಸಂಘಟನೆಗಳು ಕುಂಭಕರ್ಣ ನಿದ್ರೆಗೆ ಜಾರಿವೆ. ಕಾಲ ಕಾಲಕ್ಕೆ ಸರ್ಕಾರದ ನೀತಿ ನಿಯಮಗಳನ್ನು ವಿಮರ್ಶಿಸಿ ಕೈಗಾರಿಕೆಗಳ ಪುನಃಶ್ಚೇತನಕ್ಕೆ ಸಲಹೆ-ಸೂಚನೆಗಳನ್ನು ನೀಡಬೇಕಾಗಿರುವುದು ಕೈಗಾರಿಕೆಗಳ ಪ್ರತಿನಿಧಿಯಾಗಿರುವ ಸಂಘ-ಸಂಸ್ಥೆಗಳ ಜವಾಬ್ದಾರಿ.

ಆದರೆ ರಾಜ್ಯದಲ್ಲಿ ಅಂತಹ ರಚನಾತ್ಮಕ ಕೆಲಸಗಳು ನಡೆಯುತ್ತಿಲ್ಲ. ಪೀಣ್ಯ, ನೆಲಮಂಗಲ, ಹೊಸೂರು, ಆನೇಕಲ್ , ಬೊಮ್ಮಸಂದ್ರ, ಜಿಗಣಿ , ಹಾರೋಹಳ್ಳಿ, ದಾಬಸ್‍ಪೇಟೆ ಸೇರಿದಂತೆ ಅನೇಕ ಕೈಗಾರಿಕಾ ಪ್ರದೇಶಗಳಲ್ಲಿ ಬಹುತೇಕ ಶೇ.80ಕ್ಕಿಂತಲೂ ಹೆಚ್ಚು ಕೈಗಾರಿಕೆಗಳು ನಷ್ಟದಲ್ಲಿವೆ. ಶೇ.30ರಷ್ಟು ಕೈಗಾರಿಕೆಗಳು ಬಾಗಿಲು ಮುಚ್ಚಿವೆ. ಆದರೆ ಈ ಬಗ್ಗೆ ಧ್ವನಿ ಎತ್ತುವ ಪ್ರಾಮಾಣಿಕ ಪ್ರಯತ್ನ ಸರ್ಕಾರಗಳಿಂದಾಗುತ್ತಿಲ್ಲ ಎಂಬುದು ಅಸಮಾಧಾನ ಉದ್ಯಮದ ವಲಯಗಳಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿವೆ.

ಮಹಾಂತೇಶ್ ಬ್ರಹ್ಮ
E-mail:-MahantheshBrahma@gmail.com

Facebook Comments