ಮಾಲಿಯಲ್ಲಿ ಮತ್ತೆ ಹಿಂಸಾಚಾರ, ದಾಳಿಯಲ್ಲಿ ಯೋಧರೂ ಸೇರಿ 40 ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

ಬಮ್ಯಾಕೋ, ಫೆ.15-ಆಫ್ರಿಕಾ ಖಂಡದ ಮಾಲಿ ದೇಶದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಬಂದೂಕುಧಾರಿಗಳ ಗುಂಪೊಂದು ನಡೆಸಿದ ಭೀಕರ ದಾಳಿಯಲ್ಲಿ ಒಂಭತ್ತು ಯೋಧರೂ ಸೇರಿದಂತೆ 40ಕ್ಕೂ ಹೆಚ್ಚು ಮಂದಿ ಹತರಾಗಿದ್ದು, ಅನೇಕರೂ ಗಾಯಗೊಂಡಿದ್ದಾರೆ.  ತೀವ್ರ ಸಂಕಷ್ಟದಲ್ಲಿರುವ ಮಾಲಿಯಲ್ಲಿ ಅಂತರ್-ಜನಾಂಗೀಯ ಘರ್ಷಣೆ ಮತ್ತು ಹಿಂಸಾಚಾರದಿಂದ ವ್ಯಾಪಕ ಸಾವು-ನೋವು ಸಂಭವಿಸುತ್ತಿದೆ.

ಫುಲಾನಿ ಕೋಮಿನ ಜನರೇ ಹೆಚ್ಚಾಗಿರುವ ಓಗೊಸ್ಸಾಗೌ ಗ್ರಾಮದಲ್ಲಿ ನಿನ್ನೆ ಇಡೀ ರಾತ್ರಿ 30ಕ್ಕೂ ಹೆಚ್ಚು ಗನ್‍ಮನ್‍ಗಳ ಗುಂಪು ನಡೆಸಿದ ಭೀಕರ ದಾಳಿಯಲ್ಲಿ 32 ಗ್ರಾಮಸ್ಥರು ಹತರಾದರು. ಗ್ರಾಮಸ್ಥರ ರಕ್ಷಣೆಗಾಗಿ ಪ್ರತಿ ದಾಳಿ ನಡೆಸಿದ ಒಂಭತ್ತು ಯೋಧರನ್ನೂ ಬಂಡುಕೋರರು ಗುಂಡಿಟ್ಟು ಕೊಂದಿದ್ದಾರೆ. ಅಲ್ಲದೇ ಗುಡಿಸಲುಗಳು ಮತ್ತು ಬೆಳೆಗಳಿಗೆ ಬೆಂಕಿ ಹಚ್ಚಿದ್ದಾರೆ.

ಅನೇಕ ಜಾನುವಾರುಗಳನ್ನು ಸುಟ್ಟು ಹಾಕಲಾಗಿದೆ ಹಾಗೂ ಗನ್‍ಮಾನ್‍ಗಳು ಎಳೆದೊಯ್ದಿದ್ದಾರೆ ಎಂದು ಗ್ರಾಮದ ಮುಖ್ಯಸ್ಥೆ ಓಲಿ ಒಸುಮಾನ್ ಬೇರಿ ತಿಳಿಸಿದ್ದಾರೆ.  ಕಳೆದ ಮಾರ್ಚ್‍ನಲ್ಲಿ ಇದೇ ಗ್ರಾಮದಲ್ಲಿ ಬಂಡುಕೋರರಿಂದ ನಡೆದ ಭೀಕರ ಆಕ್ರಮಣದಲ್ಲಿ 150 ಮಂದಿ ಹತರಾಗಿ, ಅನೇಕರು ಗಾಯಗೊಂಡಿದ್ದರು.

Facebook Comments