ರೌಡಿ ಕೊಲೆಗೆ ಯತ್ನಿಸಿದ್ದ ಆರೋಪಿಗಳ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.13- ಹಳೇ ದ್ವೇಷದ ವೈಷಮ್ಯದಿಂದ ಹಾಡುಹಗಲೇ ಮಾರಕಾಸ್ತ್ರಗಳಿಂದ ರೌಡಿ ಲೋಕೇಶ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದ ಆರೋಪಿಗಳು ಮತ್ತು ಕುಮ್ಮಕ್ಕು ನೀಡಿದ್ದ ಆರೋಪಿಯನ್ನು ಈಶಾನ್ಯ ವಿಭಾಗದ ಯಲಹಂಕ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸೈಯದ್ ನವಾಜ್ (22), ಸೈಯದ್ ತೋಹಿದ್(27), ಸೈಯದ್ ಆರೀಫ್(21), ತಬ್ರೇಜ್ ಬೇಗ್(33), ಗಣೇಶ್(19), ರಮೇಶ್(40)( ಕುಮ್ಮಕ್ಕು ನೀಡಿದ ಆರೋಪಿ) ಮತ್ತು ಕ್ಯಾಟ್ ಮಂಜ(ಈ ನ್ಯಾಯಾಂಗ ಬಂಧನದಲ್ಲಿದ್ದಾನೆ ಮತ್ತು ಕೊಲೆಗೆ ಕುಮ್ಮಕ್ಕು ನೀಡಿದ್ದನು) ಬಂಧಿತರು.

ಯಲಹಂಕದ ಕೋಗಿಲು ಲೇಔಟ್‍ನ ಬೆಳ್ಳಳ್ಳಿ ಕ್ರಾಸ್ ಬಳಿಯ ಪಾಸ್ಟ್ ಟಚ್ ಕಾರ್ ಪಾಯಿಂಟ್ ಬಳಿ ಜೂ.6ರಂದು ಮಧ್ಯಾಹ್ನ 1.30ರ ಸುಮಾರಿನಲ್ಲಿ ಐದು ಮಂದಿ ಆರೋಪಿಗಳು ಹಳೇ ದ್ವೇಷದಿಂದ ಯಲಹಂಕ ಠಾಣೆಯ ರೌಡಿಶೀಟರ್ ಲೋಕೇಶ್(38) ಎಂಬಾತನ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿ ಪರಾರಿಯಾಗಿದ್ದರು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಯಲಹಂಕ ಠಾಣೆ ಪೊಲೀಸರು ಆರೋಪಿಗಳ ಪತ್ತೆಗೆ ಹಾಗೂ ಕುಮ್ಮಕ್ಕು ನೀಡಿದವರಿಗಾಗಿ ಶೋಧ ನಡೆಸುತ್ತಿದ್ದರು.  ನಗರ ಅಡಿಷನಲ್ ಕಮಿಷನರ್(ಪೂರ್ವ) ಮುರುಗನ್, ಈಶಾನ್ಯ ವಿಭಾಗದ ಡಿಸಿಪಿ ಡಾ.ಭೀಮಾಶಂಕರ್ ಎಸ್.ಗುಳೇದ್ ಮತ್ತು ಯಲಹಂಕ ಉಪವಿಭಾಗದ ಎಸಿಪಿ ಶ್ರೀನಿವಾಸ್ ಮಾರ್ಗದರ್ಶನದಲ್ಲಿ ಹಾಗೂ ಇನ್‍ಸ್ಪೆಕ್ಟರ್ ರಾಮಕೃಷ್ಣ ರೆಡ್ಡಿ ಸಾರಥ್ಯದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಬ್‍ಇನ್‍ಸ್ಪೆಕ್ಟರ್ ಗಂಗರುದ್ರಯ್ಯ, ಸುಭಾಷ್ ಪಟ್ಟಣ, ಶಿವಕುಮಾರ್ ಬದ್ನೂರ್ ಹಾಗೂ ಸಿಬ್ಬಂದಿ ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಘಟನೆ ನಡೆದ 24 ಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿ ರಮೇಶ ಅಲಿಯಾಸ್ ಟಾಟಾ ರಮೇಶ್ ಮತ್ತು ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಕ್ಯಾಟ್ ಮಂಜ ತಮ್ಮ ಏರಿಯಾದಲ್ಲಿ ಹೆಸರು ಮಾಡಲು ಮತ್ತು ತಮ್ಮ ಹೆಸರು ಕೇಳಿದರೆ ಜನ ಹೆದರಬೇಕೆಂಬ ಹುಂಬು ಮನೋಭಾವನದಿಂದ ಆರೋಪಿಗಳಿಗೆ ಕುಮ್ಮಕ್ಕು ನೀಡಿದುದ್ದು ವಿಚಾರಣೆಯಿಂದ ತಿಳಿದುಬಂದಿದೆ.

Facebook Comments