ವೈದ್ಯೆಯ ಆತ್ಮಹತ್ಯೆ ಯತ್ನ ವಿಫಲಗೊಳಿಸಿದ ಅರಣ್ಯ ಸಿಬ್ಬಂದಿ

ಈ ಸುದ್ದಿಯನ್ನು ಶೇರ್ ಮಾಡಿ

ಕೊಳ್ಳೇಗಾಲ,ಜು.11-ನಿದ್ರೆ ಮಾತ್ರೆ ಸೇವಿಸಿ ಅರಣ್ಯ ಇಲಾಖೆ ಚೆಕ್‍ಫೋಸ್ಟ್ ಗೇಟ್‍ಗೆ ಕಾರನ್ನು ಡಿಕ್ಕಿ ಹೊಡೆಸಿ ಆತ್ಮಹತ್ಯೆಗೆ ಯತ್ನಿಸಿದ ಬೆಂಗಳೂರಿನ ವೈದ್ಯೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸಮಯ ಪ್ರಜ್ಞಾಯಿಂದ ರಕ್ಷಿಸಿರುವ ಘಟನೆ ತಾಲೂಕಿನ ಪ್ರವಾಸಿ ತಾಣ ಭರಚುಕ್ಕಿ ಜಲಪಾತದ ಬಳಿ ನಡೆದಿದೆ.

ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಯ ಚರ್ಮರೋಗ ತಜ್ಞಾ ಡಾ.ಸ್ಫೂರ್ತಿಗೌಡ(28)ಆತ್ಮಹತ್ಯೆಗೆ ಯತ್ನಿಸಿದವರು. ಮಧ್ಯಾಹ್ನ 2 ಗಂಟೆಯಲ್ಲಿ ಸ್ವತಃ ಕಾರು ಚಾಲನೆ ಮಾಡಿಕೊಂಡು ಭರಚುಕ್ಕಿ ಜಲಪಾತದ ಪ್ರವೇಶ ದ್ವಾರಕ್ಕೆ ಆಗಮಿಸಿದ ವೈದ್ಯೆ ಚೆಕ್‍ಫೋಸ್ಟ್ ಗೇಟ್‍ಗೆ ಡಿಕ್ಕಿ ಹೊಡೆಸಿದ್ದಾರೆ.

ಇದರಿಂದ ಗಾಬರಿಗೊಂಡು ಕಾರಿನ ಬಳಿಗೆ ಬಂದ ಕರ್ತವ್ಯನಿರತ ಅರಣ್ಯ ಸಿಬ್ಬಂದಿ ಮಹಾನಂದ್ ಅವರಿಗೆ ನಿದ್ರೆ ಮಾತ್ರೆ ನುಂಗಿ ಕಾರು ಚಲಾಯಿಸಿಕೊಂಡು ಬಂದಿರುವೆ ಎಂದು ವೈದ್ಯೆ ಹೇಳಿದರಲ್ಲದೆ, ನೋಡ ನೋಡುತ್ತಿದ್ದಂತೆ ಕಾರಿನಿಂದ ಕೆಳಗಿಳಿದು ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಕೂಗುತ್ತ ಜಲಪಾತದ ಕಡೆಗೆ ತೂರಾಡುತ್ತಲೇ ಓಡಲಾರಂಭಿಸಿದ್ದಾರೆ.

ಇದರಿಂದ ವಿಚಲಿತರಾದ ಚೆಕ್‍ಫೋಸ್ಟ್ ಸಿಬ್ಬಂದಿ ಆಕೆಯನ್ನು ಹಿಂಬಾಲಿಸಿ, ವೈದ್ಯೆಯನ್ನು ರಕ್ಷಣೆ ಮಾಡಿದ್ದಾರೆ. ನಂತರ ಆಕೆಯ ಕಾರಿನಲ್ಲೇ ಪಟ್ಟಣದ ಸರ್ಕಾರಿ ಉಪ ವಿಭಾಗ ಆಸ್ಪತ್ರೆಗೆ ಕರೆತಂದು ತುರ್ತು ಚಿಕಿತ್ಸೆ ಕೊಡಿಸಿದರು. ಈ ಕುರಿತು ಎಸಿಎಫ್ ವನಿತಾ ಮತ್ತು ಆರ್‍ಎಫ್‍ಒ ಮಹದೇವಸ್ವಾಮಿ ಅವರಿಗೆ ಮಾಹಿತಿ ನೀಡಿದರು.

Facebook Comments