20 ಮಂದಿಯ ಹೆಸರು ಫೈನಲ್, ಆ.4 ಸಂಪುಟ ವಿಸ್ತರಣೆ ಫಿಕ್ಸ್..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.2- ಬಹುನಿರೀಕ್ಷಿತ ಸಚಿವ ಸಂಪುಟ ರಚನೆ ದಿನಾಂಕ ಇಂದು ಸಂಜೆ ನಿಗದಿಯಾಗು ವುದು ಬಹುತೇಕ ಖಚಿತವಾಗಿದ್ದು, ಬುಧವಾರ ಪ್ರಮಾಣವಚನ ನಡೆಯುವ ಸಾಧ್ಯತೆಗಳಿವೆ. ನವದೆಹಲಿಯಲ್ಲಿರುವ ಮುಖ್ಯಮಂತ್ರಿ ಬಸವರ್ಜಾ ಬೊಮ್ಮಾಯಿ ಅವರು ಇಂದು ಬೆಳಗ್ಗೆ 9.30ಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಬೇಕಿತ್ತಾದರೂ ಅದು ಸಂಜೆಗೆ ಮುಂದೂಡಲ್ಪಟ್ಟಿದೆ.

ಸಂಜೆ ಉಭಯ ನಾಯಕರು ಭೇಟಿಯಾಗಿ ಮಾತುಕತೆ ನಡೆಸಿ ಸಂಪುಟ ರಚನೆ ಕುರಿತಂತೆ ಸಂಭವನೀಯರ ಪಟ್ಟಿಯನ್ನು ಅಂತಿಮಗೊಳಿಸಲಿದ್ದಾರೆ. ಎಲ್ಲವೂ ನಿರೀಕ್ಷೆಯಂತೆ ನಡೆದರೆ ಬುಧವಾರ ಸುಮಾರು 20ಕ್ಕೂ ಹೆಚ್ಚು ಶಾಸಕರು ಸಂಪುಟಕ್ಕೆ ಸೇರ್ಪಡೆಯಾಗುವ ಲಕ್ಷಣಗಳು ಗೋಚರಿಸಿದ್ದು, ಎಲ್ಲವೂ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನದ ಮೇಲೆಯೇ ಅವಲಂಬಿತವಾಗಿದೆ.

ಈಗಾಗಲೇ ಸಚಿವರ ಪಟ್ಟಿಯನ್ನು ಸಿದ್ದಪಡಿಸಿಕೊಂಡು ದೆಹಲಿಗೆ ತೆರಳಿರುವ ಬೊಮ್ಮಾಯಿ ಅವರು ರಾಷ್ಟ್ರೀಯ ಅಧ್ಯಕ್ಷರ ಜೊತೆ ಚರ್ಚಿಸಿ ಪಟ್ಟಿಗೆ ಅಂತಿಮ ಮುದ್ರೆಯನ್ನು ಒತ್ತಲಿದ್ದಾರೆ. ಈ ಬಾರಿಯ ಸಂಪುಟ ರಚನೆಯಲ್ಲಿ ಬಿಜೆಪಿ, ಸಂಘಪರಿವಾರ, ಮಿತ್ರಮಂಡಳಿ ಹಾಗೂ ಹಳೆಮುಖಗಳು ಸೇರಿದಂತೆ ಒಟ್ಟು 20ಕ್ಕೂ ಹೆಚ್ಚು ಶಾಸಕರು ಮೊದಲ ಹಂತದಲ್ಲಿ ಸಚಿವರಾಗಲಿದ್ದಾರೆ.

ಏಕಕಾಲಕ್ಕೆ ಸಂಪುಟ ರಚನೆಯಾದರೆ ಪಕ್ಷದಲ್ಲಿ ದೊಡ್ಡ ಮಟ್ಟದ ಅಸಮಾಧಾನ ಭುಗಿಲೇಳುವ ಸಾಧ್ಯತೆ ಇರುವುದರಿಂದ ಉಂಟಾಗಬಹುದಾದ ಹಾನಿಯನ್ನು ತಪ್ಪಿಸಲು ಮೊದಲ ಹಂತದಲ್ಲಿ 20ರಿಂದ 22 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 10ರಿಂದ 13 ಸ್ಥಾನಗಳನ್ನು ಉಳಿಸಿಕೊಂಡು ಬಳಿಕ ಪರಿಸ್ಥಿತಿಗೆ ಅನುಗುಣವಾಗಿ ಸಂಪುಟ ರಚನೆ ಮಾಡಲು ವರಿಷ್ಠರು ಸಿಎಂಗೆ ಸಲಹೆ ಮಾಡಿದ್ದಾರೆ.

ಆರ್‍ಎಸ್‍ಎಸ್ ಈ ಬಾರಿ ಸಂಪುಟ ರಚನೆಗೆ ವಿಭಿನ್ನವಾದ ಸೂತ್ರ ಹೆಣೆದಿದೆ. ಪಕ್ಷಕ್ಕೆ ನಿಷ್ಠೆಯಿಂದ ಇರುವವರಿಗೆ ಸಂಪುಟದಲ್ಲಿ ಮೊದಲ ಪ್ರಾಶಸ್ತ್ಯ ನೀಡಬೇಕೆಂದು ಸೂಚಿಸಿದೆ.ಇದರಂತೆ ಶಾಸಕರಾದ ಎಸ್.ಅಂಗಾರ, ಸುನೀಲ್‍ಕುಮಾರ್, ಅಪ್ಪಚ್ಚುರಂಜನ್, ಸತೀಶ್ ರೆಡ್ಡಿ, ಅರಗಜ್ಞಾನೇಂದ್ರ, ಎಸ್.ಎ.ರಾಮ್‍ದಾಸ್ ಸಂಪುಟಕ್ಕೆ ಸೇರ್ಪಡೆಯಾಗಬಹುದು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಣದಿಂದ ಎಂ.ಪಿ.ರೇಣುಕಾಚಾರ್ಯ, ಎಂ.ಪಿ.ಕುಮಾರಸ್ವಾಮಿ, ರಾಜುಗೌಡ ನಾಯಕ್, ಹರತಾಳ್ ಹಾಲಪ್ಪ, ಕುಮಾರ್ ಬಂಗಾರಪ್ಪ , ಬಾಲಚಂದ್ರ ಜಾರಕಿಹೊಳಿ ಸಂಭವನೀಯ ಪಟ್ಟಿಯಲ್ಲಿದ್ದಾರೆ.

ಕಾಂಗ್ರೆಸ್-ಜೆಡಿಎಸ್‍ನಿಂದ ವಲಸೆ ಬಂದಿದ್ದ ಡಾ.ಕೆ.ಸುಧಾಕರ್, ಕೆ.ಗೋಪಾಲಯ್ಯ, ಭೈರತಿ ಬಸವರಾಜ್, ಎಸ್.ಟಿ.ಸೋಮಶೇಖರ್, ಕೆ.ಸಿ.ನಾರಾಯಣಗೌಡ, ಬಿ.ಸಿ.ಪಾಟೀಲ್, ಮುನಿರತ್ನ ಸಂಪುಟಕ್ಕೆ ಸೇರ್ಪಡೆಯಾಗುವುದು ಖಚಿತ. ಸದನದಲ್ಲಿ ಸರ್ಕಾರವನ್ನು ಸಮರ್ಥಿಸಿಕೊಳ್ಳುವ ಅನಿವಾರ್ಯತೆ ಇರುವುದರಿಂದ ಜೆ.ಸಿ.ಮಾಧುಸ್ವಾಮಿ, ಆರ್.ಅಶೋಕ್, ಶ್ರೀರಾಮುಲು ಸೇರಿದಂತೆ ಮತ್ತಿತರರಿಗೆ ಸಂಪುಟ ಸೇರ್ಪಡೆಯಾಗಲು ಯಾವುದೇ ಅಡ್ಡಿ ಇಲ್ಲ.

ಅದೃಷ್ಟ ಖುಲಾಯಿಸಿದರೆ ಶಂಕರ್ ಪಾಟೀಲ್ ಮುನೇನಕೊಪ್ಪ, ಅರವಿಂದ ಬೆಲ್ಲದ್, ಮಹೇಶ್ ಕುಮಟಳ್ಳಿ, ಪ್ರೀತಂ ಗೌಡ, ದತ್ತಾತ್ರೇಯ ಪಾಟೀಲ್ ರೇವೂರ ಸೇರಿದಂತೆ ಮತ್ತಿತರರ ಹೆಸರುಗಳು ಕೂಡ ಚಾಲ್ತಿಯಲ್ಲಿವೆ.

Facebook Comments