ನಾಳೆ ಭಾರತ-ಆಸ್ಟ್ರೇಲಿಯಾ ನಡುವೆ ಮೊದಲ ಟಿ-20 ಪಂದ್ಯ
ವಿಶಾಖಪಟ್ಟಣಂ,ಫೆ.23-ವಿಶ್ವಕಪ್ ಕ್ರಿಕೆಟ್ ಮಹಾಸಮರಕ್ಕೆ ಪರಿಪೂರ್ಣ ರೀತಿಯಲ್ಲಿ ಸಜ್ಜಾಗುತ್ತಿರುವ ಭಾರತ ನಾಳೆ ವಿಶಾಖಪಟ್ಟಣದಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ದದ ಪ್ರಥಮ ಟಿ-20 ಪಂದ್ಯಕ್ಕೆ ಸಜ್ಜಾಗಿದೆ.
ಬ್ಯಾಟಿಂಗ್ ಮತ್ತು ಬೌಲಿಂಗ್ ಇವೆರಡರಲ್ಲೂ ಉತ್ತಮ ಲಯದೊಂದಿಗೆ ಭಾರತ, ಆಸ್ಟ್ರೇಲಿಯಾ ವಿರುದ್ದ ಒಟ್ಟು 7 ಪಂದ್ಯಗಳ ಸರಣಿಯನ್ನು ಎದುರಿಸಲಿದ್ದು, ಇದರಲ್ಲಿ ಎರಡು ಟಿ-20 ಮತ್ತು ಐದು ಏಕದಿನ ಪಂದ್ಯಗಳನ್ನು ಒಳಗೊಂಡಿದೆ.
ಭಾರತಕ್ಕೆ ಇದು ಇಂಗ್ಲೆಂಡ್ನಲ್ಲಿರುವ ವಿಶ್ವಕಪ್ ಕ್ರಿಕೆಟ್ಗೆ ಪೂರ್ವಭಾವಿ ತಾಲೀಮು ಆಗಲಿದ್ದು, ಇದರ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಲು ಟೀಂ ಇಂಡಿಯಾ ಕಾತುರವಾಗಿದೆ. ತಂಡದ ನಾಯಕ ವಿರಾಟ್ ಕೊಹ್ಲಿ ಮೂರು ವಾರಗಳ ವಿರಾಮದ ನಂತರ ಆಸೀಸ್ ವಿರುದ್ಧದ ಸರಣಿಗೆ ಮರಳಿದ್ದಾರೆ.
ಹಿಂದಿನ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಜಸ್ಪ್ರೀತ್ ಬೂಮ್ರಾ, ರಿಷಬ್ ಪಂಥ್ , ವಿಜಯಶಂಕರ್ ಮತ್ತು ದಿನೇಶ್ ಕಾರ್ತಿಕ್ ಈ ಸರಣಿಯಲ್ಲೂ ಮತ್ತಷ್ಟು ಭರವಸೆ ಮೂಡಿಸುವ ನಿರೀಕ್ಷೆಯಿದೆ.
ನ್ಯೂಜಿಲೆಂಡ್ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದ ಭಾರತ ಆಸೀಸ್ ಮೇಲೂ ತನ್ನ ಜೈತ್ರಯಾತ್ರೆ ಮುಂದುವರೆಸುವ ಬಗ್ಗೆ ಕ್ರಿಕೆಟ್ ಅಭಿಮಾನಿಗಳು ಆಶಾಭಾವನೆ ಹೊಂದಿದ್ದಾರೆ. ಪ್ರಬಲ ಆಸ್ಟ್ರೇಲಿಯಾ ತಂಡಕ್ಕೆ ಟೀಂ ಇಂಡಿಯಾ ಕಬ್ಬಿಣದ ಕಡಲೆಯಾಗಿರುವುದು ಸುಳ್ಳಲ್ಲ. ಒಟ್ಟಾರೆ ನಾಳಿನ ಪಂದ್ಯ ಕುತೂಹಲ ಕೆರಳಸಿದೆ.
ತಂಡದ ವಿವರ:
ಭಾರತ- ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮ(ಉಪನಾಯಕ), ಕೆ.ಎಲ್.ರಾಹುಲ್, ಶಿಖರ್ ಧವನ್, ರಿಷಬ್ ಪಂಥ್, ದಿನೇಶ್ ಕಾರ್ತಿಕ್, ಎಂ.ಎಸ್.ಧೋನಿ(ವಿಕೆಟ್ ಕೀಪರ್), ಕೃನಾಲ್ ಪಾಂಡ್ಯ, ವಿಜಯಶಂಕರ್, ಯಜುವೇಂದ್ರ ಚಾಹಲ್, ಜಸ್ಪ್ರೀತ್ ಬ್ರೂಮಾ, ಉಮೇಶ್ ಯಾದವ್, ಸಿದ್ದಾರ್ಥ ಕೌಲ್ ಮತ್ತು ಮಾಯಾಂಕ್ ಅಗರವಾಲ್ ತಂಡದಲ್ಲಿದ್ದಾರೆ.
ಆಸ್ಟ್ರೇಲಿಯಾ- ಅರೋನ್ ಫಿಂಚ್(ನಾಯಕ), ಡಿ ಆರ್ಸಿ ಶಾರ್ಟ್, ಫ್ಯಾಟ್ ಕುನೀಸ್, ಅಲೆಕ್ಸ್ಕ್ಯಾರೇ, ಜಾಸನ್ ಬಹ್ರೆನ್ಡೊರ್ಫ್ , ನಾಥನ್ ಕೌಟ್ಲೆರ್, ಪೀಟರ ಹಾಂಡ್ಸೂಂಬ್, ಉಸ್ಮಾನ್ ಖ್ವಾಜಾ, ನಾಥನ್ ಲಯೋನ್, ಗ್ಲೆನ್ ಮ್ಯಾಕ್ಸೆಲ್, ಜೈರಿಚರ್ಡ್ಸನ್ , ಕೆ.ರಿಚರ್ಡ್ಸನ್, ಮಾರ್ಕಸ್ ಸ್ಟೋನೀಸ್, ಅಸ್ಟನ್ ಟರ್ನಲ್ ಮತ್ತು ಆ್ಯಡಂ ಜಂಪಾ ಇದ್ದಾರೆ.
ಪಂದ್ಯ ಆರಂಭ -ರಾತ್ರಿ 7 ಗಂಟೆಗೆ