ಆಸ್ಟ್ರೇಲಿಯಾವನ್ನು ಮಣಿಸಿ ವಿಶ್ವಕಪ್‌ನಿಂದ ನಿರ್ಗಮಿಸಿದ ದಕ್ಷಿಣ ಆಫ್ರಿಕಾ..!

ಈ ಸುದ್ದಿಯನ್ನು ಶೇರ್ ಮಾಡಿ

ಮ್ಯಾಂಚೆಸ್ಟರ್, ಜು.7- ಪ್ರಬಲ ಪೈಪೋಟಿಯಿಂದ ಕೂಡಿದ್ದ ವಿಶ್ವಕಪ್ ಏಕ ದಿನ ಕ್ರಿಕೆಟ್‍ನ ಅಂತಿಮ ಲೀಗ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಬಗ್ಗು ಬಡಿಯುವ ಮೂಲಕ ದಕ್ಷಿಣ ಆಫ್ರಿಕಾ ಜಯ ಸಾಧಿಸಿ ಸಮಾಧಾನ ಪಟ್ಟು ಟೂರ್ನಿಯಿಂದ ನಿರ್ಗಮಿಸಿದೆ.

ಈಗಾಗಲೇ ಸೆಮಿಫೈನಲ್ ತಲುಪಿರುವ ಆಸ್ಟ್ರೇಲಿಯಾ ಈ ಪಂದ್ಯವನ್ನು ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಉಳಿಯುವ ಹೋರಾಟ ಕೊನೆಗೂ ಕೈ ಕೊಟ್ಟಿದೆ. ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ಡಿ ಕಾಕ್ ಮತ್ತು ಮಕ್ರಾಮ್ ಆರಂಭದಲ್ಲಿ ಉತ್ತಮ ಆಟ ಪ್ರದರ್ಶಿಸಿ ಆಸಿಸ್‍ನ ಪ್ರಬಲ ಬೌಲಿಂಗ್ ದಾಳಿಯನ್ನು ದಿಟ್ಟವಾಗಿ ಎದುರಿಸಿದರು.

ಉತ್ತಮ ಲಯದಲ್ಲಿದ್ದ ಡಿ ಕಾಕ್ ಔಟಾದ ನಂತರ ಬಂದ ನಾಯಕ ಡುಪ್ಲೆಸಿ ತಂಡಕ್ಕೆ ಆಸರೆಯಾಗಿ ಉತ್ತಮ ಜತೆಯಾಟ ನೀಡಿದರು. ಈ ವೇಳೆ ಇದಕ್ಕೆ ಸಾಥ್ ನೀಡಿದ್ದ ಮಕ್ರಾಮ್ ಅರ್ಧ ಶತಕ ಸಿಡಿಸಿ ದೊಡ್ಡ ಮೊತ್ತ ಕಲೆ ಹಾಕುವ ಸುಳಿವು ನೀಡಿದರು. ಆದರೆ ಆಸಿಸ್‍ನ ಲ್ಯಾನ್ ಅವರ ಬೌಲಿಂಗ್‍ನಲ್ಲಿ ಔಟಾದ ನಂತರ ಬಂದಂತಹ ದುಸೀನ್ ನಾಯಕ ಡುಪ್ಲೆಸಿ ಮೇಲಿದ್ದ ಒತ್ತಡವನ್ನು ಕಡಿಮೆ ಮಾಡಿದರು.

ನೋಡು ನೋಡುತ್ತಿದ್ದಂತೆ ದಕ್ಷಿಣ ಆಫ್ರಿಕಾದ ಮೊತ್ತ ಏರಿಕೆಯಾಗಿ ರನ್ ರೇಟ್ ಕೂಡ ಸರಾಸರಿ 7ರ ಆಸು ಪಾಸಿಗೆ ಬಂದಿತ್ತು. ಸೊಗಸಾದ ಆಟದ ಮೂಲಕ ಡುಪ್ಲೆಸಿ ಶತಕ ಸಿಡಿಸಿ ಸಂಭ್ರಮಿಸಿದರು.

ಅಂತಿಮ ಓವರ್‍ವರೆಗೂ ಆಸಿಸ್ ಬೌಲರ್‍ಗಳನ್ನು ಹಿಗ್ಗಾಮುಗ್ಗ ದಂಡಿಸಿದ ಡುಪ್ಲೆಸಿ ತಂಡದ ಮೊತ್ತವನ್ನು 300ರ ಗಡಿ ದಾಟಲು ನೆರವಾದರು. ಅತ್ತ ಡುಸಿನ್ ಕೂಡ ಕೇವಲ 4 ರನ್‍ಗಳಿಂದ ಶತಕ ವಂಚಿತರಾಗಿ ಕುಮಿನ್ಸ್ ಅವರ ಬೌಲಿಂಗ್‍ನಲ್ಲಿ ಔಟಾದರು. ಅಂತಿಮವಾಗಿ 50 ಓವರ್‍ಗಳಲ್ಲಿ ದಕ್ಷಿಣ ಆಫ್ರಿಕಾ 325 ರನ್‍ಗಳ ಸವಾಲನ್ನು ಆಸಿಸ್ ಮುಂದೆ ಇಟ್ಟಿತ್ತು.

ಈ ಮೊತ್ತವನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ಆರಂಭದಲ್ಲೇ ಆಘಾತ ಅನುಭವಿಸಿತ್ತು. ನಾಯಕ ಫಿಂಚ್ ಕೇವಲ 3 ರನ್ ಗಳಿಸಿ ಇಮ್ರಾನ್ ತಹೀರ್‍ಗೆ ವಿಕೆಟ್ ಒಪ್ಪಿಸಿ ಹೊರ ನಡೆದರು. ನಂತರ ಆಕರ್ಷಕ ಆಟಗಾರ ಕವೇಜಾ ಕೂಡ ಕೇವಲ 18 ರನ್‍ಗಳಿಗೆ ವೇಗಿ ರಬಾಡಾ ಅವರ ಬೌಲಿಂಗ್‍ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.

ಕೇವಲ 5 ರನ್‍ಗೆ 1, 20ರನ್‍ಗಳಾಗುಷ್ಟುವರಲ್ಲಿ ಮತ್ತೊಂದು ವಿಕೆಟ್ ಉರುಳಿದ ಪರಿಣಾಮ ಆಸಿಸ್ ಪಾಳಯದಲ್ಲಿ ಆತಂಕ ಶುರುವಾಗಿತ್ತು. ನಂತರ ಬಂದ ಸ್ಮಿತ್ ತಾಳ್ಮೆಯ ಆಟಕ್ಕೆ ಮುಂದಾಗಿ ಡೇವಿಡ್ ವಾರ್ನರ್ ಜತೆಗೂಡಿ ತಂಡವನ್ನು ಅಪಾಯದಿಂದ ಪಾರು ಮಾಡಲು ಪ್ರಯತ್ನಿಸಿದರು. ಆದರೆ ದಕ್ಷಿಣ ಆಫ್ರಿಕಾದ ಬೌಲರ್‍ಗಳ ಕರಾರುವಕ್ಕು ಬೌಲಿಂಗ್ ದಾಳಿಗೆ ಆಸಿಸ್ ಬ್ಯಾಟ್ಸ್‍ಮನ್‍ಗಳು ಒಬ್ಬರ ನಂತರ ಒಬ್ಬರು ಪೆವಿಲಿಯನ್ ಸೇರಲು ಮುಂದಾದರು.

ಆದರೆ ಮತ್ತೊಂದೆಡೆ ಗಟ್ಟಿಯಾಗಿ ನಿಂತಿದ್ದ ಡೇವಿಡ್ ವಾರ್ನರ್ ಮಾತ್ರ ತಮ್ಮ ನೈಜ ಸ್ಫೋಟಕ ಆಟವನ್ನು ಮುಂದುವರೆಸಿದ್ದು , ಎಲ್ಲರನ್ನು ಚಕಿತಗೊಳಿಸುತ್ತಿತ್ತು. ಸ್ಮಿತ್ (7) ಔಟಾದ ನಂತರ ಸ್ಟೋನಿಸ್(22) ಕೂಡ ರನ್ ಔಟಾದರೆ ಮ್ಯಾಕ್ಸ್‍ವೆಲ್ ಕೇವಲ 12 ರನ್‍ಗೆ ಔಟಾಗಿ 119 ರನ್‍ಗಳಿಗೆ ಆಸಿಸ್‍ನ ನಾಲ್ಕು ವಿಕೆಟ್‍ಗಳು ಪತನಗೊಂಡಿತ್ತು.

ದಿಢೀರ್ ಕುಸಿತದ ಸಂಕಷ್ಟದಲ್ಲಿದ್ದ ಆಸಿಸ್‍ಗೆ ನಂತರ ಆಸರೆಯಾಗಿದ್ದು ಆರನೆ ಕ್ರಮಾಂಕದಲ್ಲಿ ಬಂದ ಕ್ಯಾರಿ. ಜವಾಬ್ದಾರಿಯುತ ಆಟದ ಮೂಲಕ ಗಮನ ಸೆಳೆದು ವಾರ್ನರ್‍ಗೆ ಉತ್ತಮ ಸಾಥ್ ನೀಡಿದರು.

ಈ ಕಾರಣದಿಂದಾಗಿ ಮತ್ತೆ ಆಸ್ಟ್ರೇಲಿಯಾ ಹೋರಾಟದ ಹಾದಿ ಹಿಡಿದು 200ರ ಗಡಿ ದಾಟಿತ್ತು. ಇನ್ನೇನು ಆಸ್ಟ್ರೇಲಿಯಾ ಗೆಲುವಿನ ಗೆರೆಯ ಸನಿಹ ಬರುತ್ತಿದ್ದಂತೆ ಶತಕ ಸಿಡಿಸಿದ ವಾರ್ನರ್ (122) ಅಪಾಯಕಾರಿಯಾಗಿ ಪರಿಣಮಿಸಿದರು.

40ನೆ ಓವರ್‍ನಲ್ಲಿ ವಾರ್ನರ್ ನಿರ್ಗಮಿಸಿದ ನಂತರ ಮತ್ತೆ ದಕ್ಷಿಣ ಆಫ್ರಿಕಾ ಹಿಡಿತ ಸಾಧಿಸಲು ಮುಂದಾಯಿತು. ಅಂತಿಮ ಓವರ್‍ಗಳಲ್ಲಿ ರಬಾಡಾ ಅವರ ಬೌಲಿಂಗ್ ದಾಳಿಗೆ 315 ರನ್‍ಗಳಿಗೆ ಆಸ್ಟ್ರೇಲಿಯಾ ಸರ್ವ ಪತನ ಕಂಡಿತು. ದಕ್ಷಿಣ ಆಫ್ರಿಕಾ 10 ರನ್‍ಗಳಿಂದ ರೋಚಕ ಜಯ ಸಾಧಿಸಿತು.

# ಸಂಕ್ಷಿಪ್ತ ಸ್ಕೋರ್
ದಕ್ಷಿಣ ಆಫ್ರಿಕಾ 50 ಓವರ್‍ಗಳಲ್ಲಿ 325/6
ಆಸ್ಟ್ರೇಲಿಯಾ 49.5 ಓವರ್‍ನಲ್ಲಿ 315 ರನ್.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin