ಆಟೋ-ಟ್ಯಾಕ್ಸಿ ಚಾಲಕರಿಗೆ 5000 ರೂ.ಪರಿಹಾರ ಕುರಿತು ಇಲ್ಲಿದೆ ಮಹತ್ವದ ಮಾಹಿತಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ17- ರಾಜ್ಯ ಸರ್ಕಾರ ಲಾಕ್‍ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ಆಟೋರಿಕ್ಷಾ ಹಾಗೂ ಟ್ಯಾಕ್ಸಿ ಚಾಲಕರಿಗೆ ಐದು ಸಾವಿರ ರೂಪಾಯಿ ಪರಿಹಾರ ನೀಡಲು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಆಹ್ವಾನಿಸಿದೆ.

ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಪರಿಹಾರ ನೀಡಲು ಮೊದಲ ಹಂತದಲ್ಲಿ ಸಾರಿಗೆ ಇಲಾಖೆಗೆ 20 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಆದರೆ, ಈ ಪರಿಹಾರಧನ ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ ಅನ್ವಯವಾಗುವುದಿಲ್ಲ ಎಂದು ಸಾರಿಗೆ ಇಲಾಖೆ ಹೊರಡಿಸಿರುವ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಪರಿಹಾರಧನ ನೀಡಲು ಕೆಲವೊಂದು ಷರತ್ತುಗಳನ್ನು ಸಾರಿಗೆ ಇಲಾಖೆ ವಿಧಿಸಿದೆ. ಸೇವಾ ಸಿಂಧು ಪೋರ್ಟಲ್ ಮೂಲಕವೇ ಎಲ್ಲ ಅರ್ಜಿಗಳನ್ನು ಸ್ವೀಕರಿಸಬೇಕು. ಮಾ.24ರಂದು ಚಾಲನೆ ಪರವಾನಗಿ ಪ್ರಮಾಣ ಪತ್ರ ಮತ್ತು ಸುಸ್ಥಿತಿ ಪ್ರಮಾಣ ಪತ್ರ ಹೊಂದಿದ ವಾಹನಗಳಿಗೆ ಅನ್ವಯವಾಗಲಿದೆ.

ಈ ಅವಧಿಯಲ್ಲಿ ಚಾಲ್ತಿಯಲ್ಲಿದ್ದ ಚಾಲಕರ ಡ್ರೈವಿಂಗ್ ಲೈಸನ್ಸ್‍ಗಿಂತ ಹೆಚ್ಚಿನ ಫಲಾನುಭವಿಗಳಿಲ್ಲದಂತೆ ಖಚಿತಪಡಿಸಿಕೊಳ್ಳಬೇಕು. ಆಧಾರ್ ಕಾರ್ರ್ಡ, ಚಾಲನಾ ಪರಿವಾನಗಿ, ವಾಹನ ನೋಂದಣಿ ಸಂಖ್ಯೆಯೂ ಎಲ್ಲ ಫಲಾನುಭವಿಗಳಿಗೆ ಕಡ್ಡಾಯಗೊಳಿಸಲಾಗಿದೆ.

ಪರಿಹಾರಧನವು ಒಂದು ಬಾರಿ ಮಾತ್ರ ನೀಡುತ್ತಿದ್ದು, ಅನುಜ್ಞಾ ಪತ್ರ ಹೊಂದಿರುವ ಚಾಲಕರ ಬ್ಯಾಂಕ್ ಖಾತೆಗೆ ನೇರ ಜಮಾವಾಗಬೇಕು ಎಂಬ ಷರತ್ತು ವಿಧಿಸಲಾಗಿದೆ. ಒಂದಕ್ಕಿಂತ ಹೆಚ್ಚು ಆಟೋ, ಟ್ಯಾಕ್ಸಿ ಹೊಂದಿರವ ಮಾಲೀಕರಿಗೂ ಒಂದಕ್ಕಿಂತ ಹೆಚ್ಚು ಪರಿಹಾರ ದೊರೆಯದಂತೆ ಎಚ್ಚರಿಕೆ ವಹಿಸಬೇಕು.

ಫಲಾನುಭವಿಗಳ ಮತ್ತು ಸರ್ಕಾರದ ನಡುವೆ ನೇರ ಸಂಪರ್ಕವಿದ್ದು, ಯಾವುದೇ ಮಧ್ಯವರ್ತಿಗಳಿಗೆ ಅವಕಾಶವಿರಬಾರದು. ಅಲ್ಲದೆ, ಲಾಕ್‍ಡೌನ್ ಅವಧಿಯಲ್ಲಿ ಆರ್ಥಿಕ ಸ್ಥಿತಿ ಸದೃಢವಾಗಿಲ್ಲ ಎಂಬ ಸ್ವಯಂ ದೃಢೀಕರಣವನ್ನು ಫಲಾನುಭವಿಗಳಿಂದ ಪಡೆಯುವಂತೆ ಸೂಚಿಸಲಾಗಿದೆ.

Facebook Comments

Sri Raghav

Admin