ಪ್ರಾಮಾಣಿಕತೆ ಮೆರೆದ ಆಟೋ ಚಾಲಕನಿಗೆ ಪೊಲೀಸರಿಂದ ಪ್ರಶಂಸನಾ ಪತ್ರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.29- ಪ್ರಯಾಣಿಕರೊಬ್ಬರು ಆಟೋದಲ್ಲಿ ಬಿಟ್ಟು ಹೋಗಿದ್ದ ಬ್ಯಾಗ್‍ನ್ನು ಚಾಲಕ ಪೊಲೀಸ್ ಆಯುಕ್ತರ ಕಚೇರಿಗೆ ನೀಡುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಆಟೋ ಚಾಲಕ ಮೊಹಮ್ಮದ್ ಅವರು ನಿನ್ನೆ ರಾತ್ರಿ 11.20ರ ಸುಮಾರಿನಲ್ಲಿ ಬ್ರಿಗೇಡ್ ರಸ್ತೆಯಿಂದ ಮಹಿಳೆಯೊಬ್ಬರನ್ನು ಆಟೋದಲ್ಲಿ ಹತ್ತಿಸಿಕೊಂಡಿದ್ದು, ಬನ್ನೇರುಘಟ್ಟ ರಸ್ತೆಯ ಮೀನಾಕ್ಷಿ ಮಾಲ್ ಇಳಿದುಕೊಂಡಿದ್ದ ಈ ಮಹಿಳೆ ತಮ್ಮೊಂದಿಗೆ ತಂದಿದ್ದ ಬ್ಯಾಗ್‍ನ್ನು ಆಟೋದಲ್ಲೇ ಮರೆತು ಹೋಗಿದ್ದರು.

ಆಟೋ ಚಾಲಕ ಮೊಹಮ್ಮದ್ ಅವರು ಸ್ವಲ್ಪ ದೂರ ಹೋದ ನಂತರ ನೋಡಲಾಗಿ ಒಂದು ಕಪ್ಪು ಬಣ್ಣದ ಬ್ಯಾಗ್ ಇರುವುದು ಕಂಡುಬಂದಿದೆ. ಇಂದು ಬೆಳಗ್ಗೆ ಈ ಬ್ಯಾಗ್‍ನ್ನು ಪೊಲೀಸ್ ಆಯುಕ್ತರ ಕಚೇರಿಗೆ ತಲಪಿಸಿದ್ದರು.  ಪೊಲೀಸ್ ನಿಯಂತ್ರಣ ಕೊಠಡಿಯವರ ನಿರ್ದೇಶನದ ಮೇರೆಗೆ ಪಿಆರ್‍ಒ ವಿಭಾಗಕ್ಕೆ ತಂದು ಒಪ್ಪಿಸಿದ್ದಾರೆ.

ನಂತರ ಆಟೋ ಚಾಲಕರ ಸಮ್ಮುಖದಲ್ಲಿ ಸಿಬ್ಬಂದಿ ಬ್ಯಾಗ್‍ನ್ನು ಪರಿಶೀಲಿಸಿದಾಗ ಬ್ಯಾಗ್‍ನಲ್ಲಿ ದೊರೆತ ಮೊಬೈಲ್ ನಂಬರ್‍ಗೆ ಸಂಪರ್ಕಿಸಲಾಗಿ ಈ ಬ್ಯಾಗ್‍ನ ವಾರಸುದಾರರಾದ ಇಂದಿರಾ ನಾರಾಯಣ ಮಿಶ್ರ ಅವರನ್ನು ಆಯುಕ್ತರ ಕಚೇರಿಯ ಪಿಆರ್‍ಒ ವಿಭಾಗಕ್ಕೆ ಕರೆಸಿಕೊಂಡಿದ್ದಾರೆ.

ಬ್ಯಾಗ್‍ನಲ್ಲಿದ್ದ ಎಚ್‍ಪಿ ಕಂಪನಿಯ ಲ್ಯಾಪ್‍ಟಾಪ್, ಚಾರ್ಜರ್, ಬ್ಯಾಂಕ್ ಚೆಕ್‍ಬುಕ್ ಒಳಗೊಂಡ ಕಪ್ಪು ಬಣ್ಣದ ಬ್ಯಾಗ್‍ನ್ನು ನಗರ ಪೊಲೀಸ್ ಆಯುಕ್ತರು ವಾರಸುದಾರರಿಗೆ ಒಪ್ಪಿಸಿದ್ದಾರೆ. ಆಟೋ ಚಾಲಕ ಮೊಹಮ್ಮದ್ ಅವರ ಪ್ರಾಮಾಣಿಕತೆಯನ್ನು ಶ್ಲಾಘಿಸಿ ಆಯುಕ್ತರು ಪ್ರಶಂಸನಾ ಪತ್ರವನ್ನು ನೀಡಿದ್ದಾರೆ.

Facebook Comments