ಸರಗಳ್ಳನನ್ನು ಅಡ್ಡಗಟ್ಟಿ ಹಿಡಿದಿದ್ದು ಹೇಗೆ..? ಆಟೋ ಡ್ರೈವರ್ ಹನುಮಂತು ಹೇಳಿದ್ದೇನು ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.12- ಮಹಿಳೆಯೊಬ್ಬರ ಸರ ಕದ್ದು ಪರಾರಿಯಾಗುತ್ತಿದ್ದ ಆರೋಪಿಯನ್ನು ಚಾಣಾಕ್ಷತನದಿಂದ ಹಿಡಿದು ಪೊಲೀಸರಿಗೆ ಒಪ್ಪಿಸಿದ ಆಟೋ ಚಾಲಕ ಹನುಮಂತು ಈ ಮೊದಲು ತಮ್ಮ ಊರಿನಲ್ಲಿ ಸಾರ್ವಜನಿಕವಾಗಿ ಮಹಿಳೆಯ ಕತ್ತಿಗೆ ಚಾಕು ಇಟ್ಟಿದ್ದ ವ್ಯಕ್ತಿಯ ಕೈ ಮುರಿದು ಧೈರ್ಯ ಪ್ರದರ್ಶಿಸಿದ ಉದಾಹರಣೆ ಇದೆ. ನಗರದ ಮುನೆಕೊಳಲು ನಿವಾಸಿಯಾಗಿರುವ ಹನುಮಂತು ಮೂಲತಃ ರಾಯಚೂರು ಜಿಲ್ಲೆಯ ಸಿಂಧನೂರಿನವರು.

ಕಡಿಮೆ ಓದಿದ್ದರೂ ಜನ ಸಂಕಷ್ಟದಲ್ಲಿದ್ದಾಗ ತಕ್ಷಣ ಸ್ಪಂದಿಸುವ ಮಾನವೀಯತೆ ಮತ್ತು ಧೈರ್ಯ ಹೊಂದಿದ್ದಾರೆ. ಡಿ.8ರಂದು ಭಾನುವಾರ ಬೆಳಗ್ಗೆ 8.30ರ ಸುಮಾರಿನಲ್ಲಿ ಮಾರತ್‍ಹಳ್ಳಿಯ ಕಲಾಮಂದಿರ ಎದುರು ಹನುಮಂತು ಪ್ರಯಾಣಿಕರನ್ನು ಕರೆದುಕೊಂಡು ಹೋಗುವಾಗ ಅವರ ಕಣ್ಣೆದುರೇ ದರೋಡೆಕೋರನೊಬ್ಬ ನಡೆದು ಬರುತ್ತಿದ್ದ ಮಹಿಳೆಯ ಕತ್ತಿಗೆ ಕೈ ಹಾಕಿ ಚಿನ್ನದ ಸರ ಕಸಿದು ದ್ವಿಚಕ್ರ ವಾಹನದಲ್ಲಿ ಪರಾರಿಯಾಗುತ್ತಿದ್ದ.

ಸರ ಕಳೆದುಕೊಂಡ ಮಹಿಳೆ ಕಿರುಚಾಡುತ್ತಿದ್ದರು. ಆರೋಪಿಗಿಂತ ಸ್ವಲ್ಪ ಮುಂದೆ ಹೋಗುತ್ತಿದ್ದ ಹನುಮಂತು ಆಟೋದ ಮಿರರ್‍ನಲ್ಲಿ ಆರೋಪಿ ಯಾವ ದಿಕ್ಕಿನಲ್ಲಿ ಹೋಗುತ್ತಿದ್ದಾನೆ ಎಂಬುದನ್ನು ಗಮನಿಸಿ ತಕ್ಷಣ ಬ್ರೇಕ್ ಹಾಕಿ ಆತನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯುವಂತೆ ಮಾಡಿದ್ದರು. ಡಿಯೋ ದ್ವಿಚಕ್ರವಾಹನದಲ್ಲಿದ್ದ ಆರೋಪಿ ಕೆಳಕ್ಕೆ ಬೀಳುತ್ತಿದ್ದಂತೆ ತಕ್ಷಣ ಆಟೋದಿಂದ ಇಳಿದು ಬಂದು ಆರೋಪಿ ವಿಘ್ನೇಶನನ್ನು ಹಿಡಿದು, ಕೂಡಲೇ ಪೊಲೀಸರಿಗೆ ಪೊನ್ ಮಾಡಿ ಮಾಹಿತಿ ನೀಡಿದೆ. ಅವರು ಬಂದು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಹನುಮಂತಪ್ಪ ಹೇಳಿದರು.

ಈ ಹಿಂದೆ ರಾಯಚೂರಿನ ಸಿಂಧನೂರಿನಲ್ಲಿ ಮಹಿಳೆಯರೊಬ್ಬರ ಕತ್ತಿಗೆ ಅಪರಿಚಿತ ವ್ಯಕ್ತಿ ಚಾಕು ಇಟ್ಟಿದ್ದ. ಸುತ್ತಲೂ ಜನ ನೋಡುತ್ತಿದ್ದರು. ನನಗೆ ನೋಡಿ ಸಹಿಸಲು ಆಗಲಿಲ್ಲ. ತಕ್ಷಣ ಹೋಗಿ ಹಿಂದಿನಿಂದ ಚಾಕು ಹಿಡಿದಿದ್ದ ಕೈಯನ್ನು ಬಲವಾಗಿ ತಿರುಚಿದೆ. ಮಹಿಳೆ ಅಪಾಯದಿಂದ ಪಾರಾದರು. ಆದರೆ, ನಾನು ಕೈ ತಿರುಚಿದ್ದರಿಂದ ಆ ವ್ಯಕ್ತಿಯ ಕೈ ಮುರಿದಿತ್ತು. ಪೆÇಲೀಸ್ ಠಾಣೆಗೆ ದೂರು ನೀಡಿದ್ದ.

ಆಗಿನ ಸಬ್‍ಇನ್ಸ್‍ಪೆಕ್ಟರ್‍ರೊಬ್ಬರು ಹಿಂದು-ಮುಂದು ವಿಚಾರಿಸದೆ ನನ್ನ ಮೇಲೆ ಹಲ್ಲೆ ಮಾಡಿದ್ದರು. ಆ ಘಟನೆ ನಂತರ ನಾನು ಯಾರಿಗೂ ಸಹಾಯ ಮಾಡಬಾರದು ಎಂಬ ಬೇಸರ ಬಂದಿತ್ತು. ಆದರೆ, ಮೊನ್ನೆ ಭಾನುವಾರ ನನ್ನ ಕಣ್ಣೆದುರಿಗೇ ಸರ ಕಸಿದಾಗ ತಡೆಯಲಾಗಲಿಲ್ಲ. ಕೋಪದಿಂದ ಆ ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಹಿಡಿದು ಕೊಟ್ಟಿದ್ದೇನೆ.

ಒಂದು ಸಂತೋಷದ ವಿಷಯ ಎಂದರೆ ನಗರದ ಮಾರತ್‍ಹಳ್ಳಿ ಪೊಲೀಸರು ನನ್ನನ್ನು ಸನ್ಮಾನಿಸಿದ್ದಾರೆ. ಅತ್ಯಂತ ಗೌರವದಿಂದ ನಡೆಸಿಕೊಂಡಿದ್ದಾರೆ. ಈ ಹಿಂದಿನ ಕಹಿ ನೆನಪು ಮರೆಯುವಂತಾಗಿದೆ. ನಮ್ಮ ಊರಿನಲ್ಲಿ ತಾಯಿ ಮತ್ತು ಕುಟುಂಬದವರು ಸ್ವಲ್ಪ ಹೆದರಿದ್ದಾರೆ. ಸರಗಳ್ಳರ ಸಹವಾಸ ಬೇಡ, ಹೆಚ್ಚು-ಕಮ್ಮಿಯಾದರೆ ಏಕೆ ಬೇಕು ಎಂದು ಆತಂಕ ಅವರದು ಎಂದು ಹನುಮಂತು ಈ ಸಂಜೆಯೊಂದಿಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.

Facebook Comments