ಮೋರಿಯಲ್ಲಿ ಆಟೋ ಚಾಲಕನ ಶವಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.4- ಆಟೋ ಚಾಲಕರೊಬ್ಬರ ಶವ ಮೋರಿಯಲ್ಲಿ ಪತ್ತೆಯಾಗಿದ್ದು, ಶ್ರೀರಾಂಪುರ ಠಾಣೆ ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.ವಿದ್ಯಾರಣ್ಯಪುರದ ನಿವಾಸಿ ವಿನೋದ್‍ಕುಮಾರ್ (38) ಮೃತಪಟ್ಟಿರುವ ಆಟೋ ಚಾಲಕ. ಇವರಿಗೆ ಮೂರ್ಛೆ ರೋಗ ಬರುತ್ತಿತ್ತು. ಅಲ್ಲದೆ, ಕುಡಿತದ ಚಟವಿತ್ತು ಎಂದು ಶ್ರೀರಾಂಪುರ ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ.

ಈ ಮೊದಲು ದಯಾನಂದನಗರದಲ್ಲಿ ತಾಯಿಯೊಂದಿಗೆ ವಿನೋದ್‍ಕುಮಾರ್ ವಾಸವಾಗಿದ್ದರು. ನಂತರ ಈ ಮನೆಯನ್ನು ಬಾಡಿಗೆಗೆ ಕೊಟ್ಟು ವಿದ್ಯಾರಣ್ಯಪುರಕ್ಕೆ ಮನೆ ಬದಲಿಸಿಕೊಂಡು ಹೋಗಿದ್ದಾರೆ. ಆಟೋ ಚಾಲಕ ವೃತ್ತಿ ಮಾಡುತ್ತಿದ್ದ ವಿನೋದ್‍ಕುಮಾರ್ ಹೆಚ್ಚಾಗಿ ದಯಾನಂದ ನಗರದಲ್ಲೇ ಇರುತ್ತಿದ್ದರು. ಒಂದೊಂದು ಸಲ ಆಟೋದಲ್ಲಿ ಮಲಗಿಕೊಳ್ಳುತ್ತಿದ್ದರು.

ಇಂದು ಮುಂಜಾನೆ ಪ್ರಕಾಶ್‍ನಗರದ ಮೋರಿಯಲ್ಲಿ ವಿನೋದ್‍ಕುಮಾರ್ ಅವರ ಶವ ನೋಡಿದ ಸಾರ್ವಜನಿಕರು ಶ್ರೀರಾಂಪುರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಸುದ್ದಿ ತಿಳಿದು ಸ್ಥಳಕ್ಕೆ ದಾವಿಸಿದ ಪೊಲೀಸರು ಪರಿಶೀಲಿಸಿ ಮರಣೋತ್ತರ ಪರೀಕ್ಷೆಗಾಗಿ ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಿದ್ದಾರೆ.

ಆಕಸ್ಮಿಕವಾಗಿ ಮೋರಿಯಲ್ಲಿ ಬಿದ್ದು ಮೃತಪಟ್ಟಿರಬಹುದೆ ಅಥವಾ ಯಾರಾದರೂ ಹೊಡೆದು ಕೊಲೆ ಮಾಡಿ ಶವವನ್ನು ಮೋರಿಯಲ್ಲಿ ಬಿಸಾಡಿರಬಹುದೆ ಎಂಬ ಅನುಮಾನಗಳು ವ್ಯಕ್ತವಾಗಿವೆ.ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಶ್ರೀರಾಂಪುರ ಠಾಣೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ವಿನೋದ್‍ಕುಮಾರ್ ಅವರ ಸಾವು ಹೇಗಾಗಿದೆ ಎಂಬುದು ತಿಳಿದುಬರಲಿದೆ.

Facebook Comments