ಮೀಟರ್ ದರ ಏರಿಸುವಂತೆ ಆಟೋ ಚಾಲಕರ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.23- ಪೆಟ್ರೋಲ್, ಡೀಸೆಲ್, ಗ್ಯಾಸ್ ಸೇರಿದಂತೆ ಎಲ್ಲಾ ಬೆಲೆಗಳು ಹೆಚ್ಚುತ್ತಿವೆ. ಅದಕ್ಕೆ ಅನುಗುಣವಾಗಿ ಆಟೋ ಮೀಟರ್ ದರವನ್ನು ಏರಿಕೆ ಮಾಡುವಂತೆ ಒತ್ತಾಯಿಸಿ ಆಟೋ ಚಾಲಕರು ಇಂದು ನಗರದಲ್ಲಿ ಪ್ರತಿಭಟನೆ ನಡೆಸಿದರು. ಸಿಐಟಿಯು ನೇತೃತ್ವದ ಆಟೋರಿಕ್ಷಾ ಯೂನಿಯನ್ ಇಂದು ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದೆ. ಎಂಟು ವರ್ಷಗಳ ಹಿಂದೆ 2013ರಲ್ಲಿ ಆಟೋ ಮೀಟರ್ ದರ ಪರಿಷ್ಕರಣೆಯಾಗಿದೆ. ಅಲ್ಲಿಂದ ಈವರೆಗೂ ದರ ಇದ್ದಷ್ಟೇ ಇದೆ. ಗ್ಯಾಸ್, ಪೆಟ್ರೋಲ್, ಅಡುಗೆ ಎಣ್ಣೆ, ಆಹಾರ ಪದಾರ್ಥಗಳು, ವಿಮಾ ಶುಲ್ಕಗಳು, ನೀರು, ವಿದ್ಯುತ್ ದರಗಳು, ಆಟೋ ಬಿಡಿ ಭಾಗಗಳು, ಆರ್.ಟಿ.ಒ.ಶುಲ್ಕಗಳು ಸೇರಿದಂತೆ ಎಲ್ಲವೂ ದುಬಾರಿಯಾಗಿವೆ.

ಆಟೋ ಓಡಿಸಿ ಬದುಕು ನಡೆಸುವವರು ಜೀವಿಸುವುದು ಕಷ್ಟವಾಗಿದೆ. ಈಗಾಗಲೇ ಮಂಗಳೂರು ಹಾಗೂ ಇತರ ಕಡೆಗಳಲ್ಲಿ ದರ ಪರಿಷ್ಕರಣೆಯಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಜೀವನ ನಿರ್ವಹಣೆ ದುಬಾರಿಯಾಗಿರುವುದರಿಂದ ಇಲ್ಲಿಯೂ ದರ ಪರಿಷ್ಕರಣೆ ಮಾಡಬೇಕು ಎಂದು ಚಾಲಕರ ಸಂಘದ ಉಪಾಧ್ಯಕ್ಷ ಆರ್.ನವೀನ್ ಶೆಣೈ ಒತ್ತಾಯಿಸಿದ್ದಾರೆ.

ಈ ಮೊದಲು ದರ ಪರಿಷ್ಕರಣೆಗೆ ಕಳೆದ ವರ್ಷ ಮಾರ್ಚ್ 26ರಂದು ಜಿಲ್ಲಾಕಾರಿಗಳು ಸಭೆ ಕರೆದಿದ್ದರು. ಆದರೆ ಮಾರ್ಚ್ 23ಕ್ಕೆ ಲಾಕ್‍ಡೌನ್ ಘೋಷಣೆಯಾಗಿದ್ದರಿಂದ ದರ ಪರಿಷ್ಕರಣೆಯಾಗಲಿಲ್ಲ. ಒಂದು ವರ್ಷದ ಲಾಕ್‍ಡೌನ್ ಅವಯಲ್ಲಿ ನಾನಾರೀತಿಯ ಸಮಸ್ಯೆಗಳನ್ನು ಎದುರಿಸಿದ್ದೇವೆ. ಈಗಲಾದರೂ ಸರ್ಕಾರ ನಮ್ಮ ಕಡೆ ಗಮನ ಹರಿಸಲಿ ಎಂದು ಅವರು ಆಗ್ರಹಿಸಿದ್ದಾರೆ.

15 ವರ್ಷ ಮೇಲ್ಪಟ್ಟ ಆಟೋಗಳಿಗೆ ಎಫ್‍ಸಿ ಮಾಡುವುದನ್ನು ನಿಲ್ಲಿಸಲಾಗಿದೆ. ಸಂಕಷ್ಟ ಕಾಲದಲ್ಲಿ ಹೊಸ ಆಟೋ ಖರೀದಿಗೆ ಆರ್ಥಿಕ ಸಮಸ್ಯೆ ಇದೆ. ಈಗಾಗಲೇ ಸಾಲ ಕೊಟ್ಟವರು ದುಬಾರಿ ಬಡ್ಡಿ ವಸೂಲಿ ಮಾಡುವ ಮೂಲಕ ಕಿರುಕುಳ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಸಂಚಾರಿ ನಿಯಮ ಉಲ್ಲಂಘನೆ ದಂಡವನ್ನು ಹೆಚ್ಚಿಸಲಾಗಿದೆ. ಪೊಲೀಸರು ದಂಡ ವಸೂಲಿ ನೆಪದಲ್ಲಿ ಆಟೋ ಚಾಲಕರಿಗೆ ಕಿರುಕುಳ ನೀಡುತ್ತಿದ್ದಾರೆ, ಅದನ್ನು ತಪ್ಪಿಸಬೇಕು. ಏರಿಕೆಯಾಗಿರುವ ಆರ್‍ಟಿಒ ಶುಲ್ಕ ಮತ್ತು ವಿಮಾ ದರಗಳನ್ನು ಕಡಿಮೆ ಮಾಡಬೇಕು ಎಂದು ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎನ್.ಶ್ರೀನಿವಾಸ್ ಒತ್ತಾಯಿಸಿದ್ದಾರೆ.

Facebook Comments

Sri Raghav

Admin