ವಿಚಾರಣೆಯಿಂದ ಬಯಲಾಯ್ತು ಆಟೋ ಡ್ರೈವರ್ ವಿಲ್ಲಾ ರಹಸ್ಯ..!
ಬೆಂಗಳೂರು, ಮೇ 5-ಆಟೋ ಚಾಲಕನ ಮನೆ ಮೇಲಿನ ಐಟಿ ದಾಳಿ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ಐಷಾರಾಮಿ ವಿಲ್ಲಾವನ್ನು ಅಮೆರಿಕದ ಮಹಿಳೆ ಉಡುಗೊರೆ ನೀಡಿದ್ದು ಎಂದು ತಿಳಿದುಬಂದಿದೆ.
ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ಸುಬ್ರಮಣಿ ಎಂಬ ಆಟೋ ಚಾಲಕನ ಮನೆ ಮೇಲೆ ಕಳೆದ ವಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು.
ವೃತ್ತಿಯಲ್ಲಿ ಆಟೋ ಓಡಿಸುತ್ತಿದ್ದರೂ ವೈಟ್ಫೀಲ್ಡ್ನಲ್ಲಿ ದುಬಾರಿ ಮೌಲ್ಯದ ವಿಲ್ಲಾ ಹೊಂದಿದ್ದ ಸುಬ್ರಮಣಿ ಅವರು ಹಲವಾರು ರಾಜಕೀಯ ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ ಎಂಬ ಗುಮಾನಿ ಕೇಳಿ ಬಂದಿತ್ತು. ಬಹಳಷ್ಟು ನಾಯಕರ ಬೇನಾಮಿ ಆಸ್ತಿ ಸುಬ್ರಮಣಿ ಅವರ ಹೆಸರಿನಲ್ಲಿದೆ ಎಂಬ ವದಂತಿ ಹಿನ್ನೆಲೆಯಲ್ಲಿ ದಾಳಿ ನಡೆದಿತ್ತು.
ವ್ಯಾಪಕ ಶೋಧ ನಡೆಸಿ ದಾಖಲಾತಿ ವಶಪಡಿಸಿಕೊಂಡ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ವಿಚಾರಣೆ ಮುಂದುವರೆಸಿದಾಗ ವಿಲ್ಲಾ ಅಮೆರಿಕ ಮಹಿಳೆ ಲಾರಾ ಎವಿಷನ್ ಕೊಡುಗೆ ಎಂದು ಸುಬ್ರಮಣಿ ಹೇಳಿಕೆ ನೀಡಿದ್ದಾರೆ.
ಮೂಲತಃ ಅಮೆರಿಕಾದವರಾದ ಮಹಿಳೆ ಬೆಂಗಳೂರಿನ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಅಮೆರಿಕಾದ ಕಂಪನಿಯೊಂದಕ್ಕೆ ನಿರ್ದೇಶಕರೂ ಆಗಿದ್ದರು. ಬೆಂಗಳೂರಿನಲ್ಲಿ ಸ್ವಂತ ಮನೆ ಖರೀದಿಸಿ ವಾಸ ಮಾಡಬೇಕೆಂಬುದು ಆಕೆಯ ಇಚ್ಛೆಯಾಗಿತ್ತು. ಆಕೆ ಬೆಂಗಳೂರಿಗೆ ಬಂದಾಗಲೆಲ್ಲಾ ಸುಬ್ರಮಣಿ ಅವರು ಅವರಿಗೆ ಚಾಲಕರಾಗಿ ಕೆಲಸ ಮಾಡುತ್ತಿದ್ದರು.
ಆಟೋ ಚಾಲಕನ ಸರಳತೆ ಮೆಚ್ಚಿ ನಂಬಿಕೆ ಇಟ್ಟು ವಿಲ್ಲಾ ಖರೀದಿಗೆ 1.6 ಕೋಟಿ ರೂ. ಹಣವನ್ನು ಅಮೆರಿಕಾದ ಮಹಿಳೆಯೇ ನೀಡಿದ್ದರು ಎಂದು ತಿಳಿದುಬಂದಿದೆ. ಐಟಿ ಅಧಿಕಾರಿಗಳು ಅಮೆರಿಕಾದ ಮಹಿಳೆಯನ್ನು ದೂರವಾಣಿ ಮೂಲಕ ಸಂಪರ್ಕಿಸಿ ಹೇಳಿಕೆ ಪಡೆದಿದ್ದು, ಆಕೆ ಕೂಡ ತಾನೇ ಹಣ ನೀಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.