ಆರ್‌ಟಿಒ ಭ್ರಷ್ಟಾಚಾರದ ವಿರುದ್ಧ ಆಟೋ ಚಾಲಕರ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.23- ಆಟೋ ಚಾಲಕರ ಹಲ ವಾರು ಬೇಡಿಕೆಗಳನ್ನು ಈಡೇರಿಸುವಂತೆ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರಸ್ತೆ ಸುರಕ್ಷತಾ ಕಾಯ್ದೆ 2019 ಮತ್ತು ಆರ್‌ಟಿಒ, ಪೊಲೀಸರ ಭ್ರಷ್ಟಾ ಚಾರದ ವಿರುದ್ಧ ರಾಜಾಜಿನಗರದ ಆರ್‌ಟಿಒ ಕಚೇರಿ ಮುಂಭಾಗ ಆಟೋ ಚಾಲಕರ ಸಂಘಟನೆಗಳ ಐಕ್ಯ ಹೋರಾಟ ಸಮಿತಿ ಪ್ರತಿಭಟನೆ ನಡೆಸಿತು.

ಹಲವಾರು ವರ್ಷಗಳಿಂದ ಆಟೋ ಚಾಲಕರ ಮೇಲೆ ನಡೆಯುವ ಶೋಷಣೆ, ದೌರ್ಜನ್ಯ, ಕಿರುಕುಳಗಳ ವಿರುದ್ಧ ಹೋರಾಟ ನಡೆಸುತ್ತಾ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುತ್ತಿದ್ದೇವೆ. ಆದರೆ ಸರ್ಕಾರ ಪ್ರೆಟೋಲ್, ಡೀಸೆಲ್, ಗ್ಯಾಸ್ ಹಾಗೂ ತೈಲೋತ್ಪನಗಳ ಬೆಲೆ ಏರಿಸಿ ಕೋಟ್ಯಂತರ ರೂ. ತೆರಿಗೆ ಸಂಗ್ರಹಿಸುತ್ತಿದೆ. ಆದರೆ ಕನಿಷ್ಟ ಸೌಲಭ್ಯಗಳನ್ನು ನೀಡದೆ ವಂಚಿಸುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಇದೀಗ ರಸ್ತೆ ಸುರಕ್ಷತಾ ಕಾಯ್ದೆ ತಿದ್ದುಪಡಿ ಹೆಸರಿನಲ್ಲಿ ದಂಡ ವಿಧಿಸಿ ಚಾಲಕರು ಹಾಗೂ ಮಾಲೀಕರನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಸಾಮಾನ್ಯ ಬಡ ಚಾಲಕರನ್ನು ಗಮನದಲ್ಲಿಟ್ಟುಕೊಂಡು ದುಬಾರಿ ದಂಡದ ಮಸೂದೆಯನ್ನು ಕೈಬಿಟ್ಟು ಹಿಂದಿನ ದಂಡದ ಮಾದರಿಯನ್ನೇ ಮುಂದುವರೆಸುವಂತೆ ಒತ್ತಾಯಿಸಿದರು.
ಸಮಿತಿ ಅಧ್ಯಕ್ಷ ಜವರೇಗೌಡ, ಕಾರ್ಯಧ್ಯಕ್ಷ ಎಂ.ವೆಂಕಟೇಗೌಡ, ಉಪಾಧ್ಯಕ್ಷ ಎಚ್.ಆರ್. ಅನಂತ ರಾಮು, ಆಟೋ ಚಾಲಕರು ಭಾಗವಹಿಸಿದ್ದರು.

Facebook Comments